More

    ವಿಶ್ವ ಮಾನವ ಸಂದೇಶದಲ್ಲಿದೆ ಸಮಾಜದ ಭವಿಷ್ಯ: ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಚಿದಾನಂದಗೌಡ

    ತುಮಕೂರು: ವಿಶ್ವಮಾನವ ಸಂದೇಶದಲ್ಲಿ ಮನುಜ ಮತ, ವಿಶ್ವಪಥ, ಸರ್ವೋದಯ, ಸಮನ್ವಯತೆ, ಪೂರ್ಣದೃಷ್ಟಿಗಳ ಮಂತ್ರ ಇದೆ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಚಿದಾನಂದಗೌಡ ಹೇಳಿದರು.

    ವಿವಿಯ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ವಿವಿ ಕುವೆಂಪು ಅಧ್ಯಯನ ಪೀಠ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕುವೆಂಪು ಜನ್ಮದಿನಾಚರಣೆ ಹಾಗೂ ಕುವೆಂಪು ಓದು ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವ ಮಾನವ ಸಂದೇಶವನ್ನು ಕುವೆಂಪು ಲೋಕಕ್ಕೆ ಸಾರಿದ್ದು, ಅದರಲ್ಲಿ ಸಮಾಜದ ಭವಿಷ್ಯವೇ ಅಡಗಿದ್ದು, ಆಧುನಿಕ ಸಮಾಜ ಮರೆಯಬಾರದು ಎಂದರು.

    ಕನ್ನಡ ಸಾಹಿತ್ಯ ಕ್ಷೇತ್ರದ ಕಥೆ, ಕವನ, ಕಾದಂಬರಿ, ಲೇಖನ ಇತ್ಯಾದಿ 32 ವಿಭಾಗಗಳಲ್ಲಿ ಕುವೆಂಪು ಕೆಲಸ ಮಾಡಿದ್ದಾರೆ. ಅವರು ಕನ್ನಡ ಪ್ರೀತಿ, ಪ್ರಕೃತಿ, ಅಧ್ಯಾತ್ಮ, ವಿಜ್ಞಾನ ಹಾಗೂ ವಿಶ್ವ ಮಾನವ ಸಂದೇಶದ ವಿವಿಧ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕುವೆಂಪು ಅವರ ಆತ್ಮಶ್ರೀಗಾಗಿ ನಿರಂಕುಶ ಮತಿಗಳಾಗಿ ಎಂಬ ಭಾಷಣ ಇಂದಿನ ವಿದ್ಯಾರ್ಥಿಗಳ ಆತ್ಮದ ಸಂಪತ್ತನ್ನು ಹೆಚ್ಚಿಸುತ್ತದೆ. ಕುವೆಂಪು ಓದು ಇದಕ್ಕೆ ಸಹಕಾರಿಯಾಗಿದೆ ಎಂದರು.

    ಕುವೆಂಪು ಯಾವುದೇ ಕಾದಂಬರಿಯನ್ನು ಬರೆಯುವಾಗ ಮೊದಲು ಮ್ಯಾಪ್ ಅನ್ನು ತಯಾರಿಸಿಕೊಳ್ಳುತ್ತಿದ್ದರು ಎಂದು ಕುವೆಂಪು ಬರವಣಿಗೆಯ ಶೈಲಿಯನ್ನು ಕುವೆಂಪು ಪುತ್ರಿ ತಾರಿಣಿ ಚಿದಾನಂದ ತಿಳಿಸಿದರು. ಕುವೆಂಪು ಅವರ ವೈಚಾರಿಕ ಚಿಂತನೆಯನ್ನು ಎಲ್ಲರು ಓದುತ್ತಾರೆ. ಆದರೆ, ಅವುಗಳ ಆಚರಣೆಗೆ ತರುವ ಬದ್ದತೆಯ ಕೊರತೆ ನಮ್ಮಲ್ಲಿದೆ. ವಿದ್ಯಾರ್ಥಿಗಳಲ್ಲಿನ ಹೃದಯ ಶ್ರೀಮಂತಿಕೆಯನ್ನು ಆತ್ಮಶ್ರೀ ಲೇಖನ ಹೆಚ್ಚಿಸಿದೆ. ಕುವೆಂಪು ಓದಿನಿಂದ ನಮ್ಮ ಭಾವನೆಗಳು ಸದ್ಭಾವನೆಗಳೆಡೆಗೆ ಹೊರಳುತ್ತವೆ ಎಂದು ಎಂದು ವಿವಿ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಹೇಳಿದರು. ಸಮಾರಂಭದಲ್ಲಿ ಕುಲಸಚಿವ ಪ್ರೊ ಕೆ ಎನ್ ಗಂಗಾನಾಯಕ್, ಕಸಾಪ ಜಿಲ್ಲಾಧ್ಯಕ್ಷ ಬಾ.ಹ. ರಮಾಕುಮಾರಿ, ಕುವೆಂಪು ಅಧ್ಯಯನ ಪೀಠದ ನಿರ್ದೇಶಕಿ ಡಾ.ಗೀತಾ ವಸಂತ, ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯದ ಮಲ್ಲಿಕಾ ಬಸವರಾಜು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts