blank

ಕನ್ನಡ ಶಾಲೆಗಳಲ್ಲಿ ಕುಟೀರ ಶಿಕ್ಷಣ

blank

ಬೆಳ್ಮಣ್: ಹಿಂದಿನ ಕಾಲದಲ್ಲಿದ್ದ ಗುರುಕುಲ ಶಿಕ್ಷಣ ಪದ್ಧತಿಯನ್ನು ಮತ್ತೆ ನೆನಪಿಸುವ ಕುಟೀರ ಶಿಕ್ಷಣ ರಾಜ್ಯದಲ್ಲಿಯೇ ಮೊದಲ ಬಾರಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಅನುಷ್ಠಾನಗೊಳ್ಳುತ್ತಿದೆ.

ಕಾರ್ಕಳ ಶಾಸಕರ ಮುತುವರ್ಜಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಈ ವಿಶಿಷ್ಟ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು, ತಾಲೂಕಿನಾದ್ಯಂತ ಹಲವಾರು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕುಟೀರ ನಿರ್ಮಾಣಗೊಳ್ಳುತ್ತಿದೆ. ತಾಲೂಕಿನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಗಳಲ್ಲಿ ಕುಟೀರ ಮಾದರಿಯ ಶಿಕ್ಷಣ ಬೋಧಿಸುವ ಚಿಂತನೆಯನ್ನು ಶಿಕ್ಷಣ ಇಲಾಖೆ ಹೊಂದಿದೆ. ಈಗಾಗಲೇ 31 ಕುಟೀರಗಳು ನಿರ್ಮಾಣಗೊಂಡಿದ್ದು, ಅವುಗಳಲ್ಲಿ 18 ಕುಟೀರ ನಿರ್ಮಾಣ ಕಾರ್ಯವೂ ಪೂರ್ಣಗೊಂಡಿದೆ. ಶಿವಪುರ, ಮುಂಡ್ಕೂರು ಹಾಗೂ ಕೈರಬೆಟ್ಟು ಶಾಲೆಗಳ ಕುಟೀರಗಳು ಉದ್ಘಾಟನೆಗೊಂಡಿವೆ.

ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್, ಕ್ರಿಯಾಶೀಲ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಜಿ.ಎಸ್. ಮೂಲಕ ಈ ಕಲ್ಪನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಕಾರ್ಕಳ ತಾಲೂಕಿಗೆ 100 ವರ್ಷವಾಗುತ್ತಿರುವ ಹಿನ್ನೆಲೆ 28 ಇಲಾಖೆಗಳನ್ನು ಸೇರಿಸಿ ವಿವಿಧ ಯೋಚನೆಗಳ ಮಂಡನೆ ಸಂದರ್ಭ, ಶಿಕ್ಷಣ ಕ್ಷೇತ್ರದಲ್ಲಿ ಏನು ಬದಲಾವಣೆ ತರಬಹುದು ಎಂದು ಶಾಸಕರು ಕೇಳಿದಾಗ, ಕ್ಷೇತ್ರ ಶಿಕ್ಷಣಾಧಿಕಾರಿ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕುಟೀರ ಶಿಕ್ಷಣದ ಪ್ರಯೋಗದ ವಿಷಯ ಮಂಡಿಸಿದ್ದರು. ಈ ಪ್ರಯೋಗ ಈಗಾಗಲೇ ತಾಲೂಕಿನ ಹಲವು ಶಾಲೆಗಳಲ್ಲಿ ಪ್ರಾರಂಭಗೊಂಡಿದೆ. ‘ನಮ್ಮ ಪೆರ್ಮೆದ ಸ್ವರ್ಣ ಕಾರ್ಲ’ ಎಂಬ ಶಾಸಕರ ಪರಿಕಲ್ಪನೆಯ ಭಾಗ ಇದಾಗಿದ್ದು ಈಗಾಗಲೇ ಗುಬ್ಬಚ್ಚಿ ಇಂಗ್ಲಿಷ್ ಸ್ಪೋಕನ್ ತರಗತಿ ಹೊಂದಿರುವ ಶಾಲೆಗಳಲ್ಲಿ ಮೊದಲ ಬಾರಿಗೆ ಅಳವಡಿಕೆಯಾಗಿದೆ.

ಸರ್ಕಾರ ಹಾಗೂ ಶಿಕ್ಷಣ ಇಲಾಖೆ ನೂರಾರು ಸಕಾರಾತ್ಮಕ ಯೋಜನೆಗಳನ್ನು ನೀಡುತ್ತಿದ್ದರೂ ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆ ನಡುವೆ ಕನ್ನಡ ಮಾಧ್ಯಮ ಶಾಲೆಗಳಿಗೆ ಗತ ವೈಭವಗಳನ್ನು ಮರುಕಳಿಸುವಂತಹ ಕುಟೀರ ಶಿಕ್ಷಣ ಯೋಜನೆಗಳು ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಯತ್ತ ಸೆಳೆಯಲು ಸಹಕಾರಿಯಾಗಲಿದೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಕುಟೀರ ನಿರ್ಮಾಣಗೊಂಡಿದ್ದು, ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲಿದೆ.

ಕುಟೀರದಲ್ಲಿ ಏನಿದೆ?: ಹಿಂದೆ ಗುರುಕುಲ ಮಾದರಿ ಶಿಕ್ಷಣದಲ್ಲಿ ಗುರುಗಳಿಂದ ಉತ್ತಮ ಸಂಸ್ಕಾರಭರಿತ, ಜೀವನ ಮೌಲ್ಯಗಳ ಪಾಠ ಬೋಧಿಸಲಾಗುತ್ತಿತ್ತು. ಕುಟೀರದ ವಾತಾವರಣದಲ್ಲಿ ಮಗು ನೆಮ್ಮದಿ, ಶಾಂತಿ, ತಾಳ್ಮೆಯ ಮೂಲಕ ಪಾಠ ಆಲಿಸಿ ಬದುಕು ಕಟ್ಟುತ್ತಿತ್ತು. ಹೀಗಾಗಿ ಇಂದಿನ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಯಲ್ಲಿ ಸಂಸ್ಕಾರಯುತ ಬದುಕಿನ ಶಿಕ್ಷಣ ನೀಡುವ ಉದ್ದೇಶದಿಂದ ಈ ಕುಟೀರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 4 ಗೋಡೆಗಳ ನಡುವೆ ಪುಸ್ತಕದ ನಿಗದಿತ ಪಾಠಗಳನ್ನು ಕಲಿತು ಕೇವಲ ಪರ್ಸಂಟೇಜ್‌ಗಾಗಿ ಸ್ಪರ್ಧೆ ನಡೆಸುವ ಮಕ್ಕಳು ಮುಂದೆ ಬಿದಿರು, ಮುಳಿಹುಲ್ಲು, ಕಂಗುಗಳ ಮೂಲಕ ನಿರ್ಮಿಸಲಾದ ಕುಟೀರದಲ್ಲಿ ತಂಪಾದ ವಾತಾವರಣದ ನಡುವೆ ಪಾಠ ಕೇಳುವ ಸೌಭಾಗ್ಯ ದೊರಕಲಿದೆ.

ಏನೇನು ಕಲಿಸಲಾಗುತ್ತದೆ?: ಇಲ್ಲಿ ಮಕ್ಕಳಿಗೆ ಸಿಲೆಬಸ್ ಪಾಠಗಳ ಜತೆ ಜೀವನ ಮೌಲ್ಯ, ಬದುಕು ಕಟ್ಟುವ,  ಸಮಾಜವನ್ನು ಎದುರಿಸುವ ಶಿಕ್ಷಣದ ಜತೆ ನೀತಿಕತೆ, ಪುರಾಣಗಳ ಕತೆಗಳನ್ನು ಹೇಳಿಕೊಡಲಾಗುವುದು. ಒಂದರಿಂದ ಏಳನೇ ತರಗತಿವರೆಗೆ ಎಲ್ಲ ತರಗತಿಗಳಿಗೆ ದಿನಂಪ್ರತಿ ಒಂದೊಂದು ತರಗತಿಗಳನ್ನು ನಡೆಸಲಾಗುವುದು. ನೀತಿಕತೆಗಳು, ಮಹಾತ್ಮರ ಕತೆಗಳು, ತುಳುನಾಡಿನ ಪಾಡ್ದನ, ಯಕ್ಷಗಾನ, ನಾಟಕ, ಕುಲ ಕಸುಬುಗಳ ಪರಿಚಯ, ಗ್ರಾಮೀಣ ಕ್ರೀಡೆಗಳ ತಿಳಿವಳಿಕೆ, ತೆಂಗಿನ ಮಡಲಿನ ತಟ್ಟಿ ಹೆಣೆಯುವುದು ಸಹಿತ ವಿವಿಧ ಚಟುವಟಿಕೆಗಳು ಇಲ್ಲಿ ನಡೆಯಲಿವೆ. ಈಗಾಗಲೇ ಶಾಲೆಗಳ ಶಿಕ್ಷಕರಿಗೆ ಮಾಹಿತಿ ನೀಡಲಾಗಿದ್ದು, ಎಲ್ಲ ಶಾಲೆಗಳ ಶಿಕ್ಷಕರು, ಮುಖ್ಯಶಿಕ್ಷಕರು ಹಾಗೂ ಹೆತ್ತವರು ಈ ಪರಿಕಲ್ಪನೆಗೆ ಕೈ ಜೋಡಿಸಿದ್ದಾರೆ.

ಕಾರ್ಕಳ ಶಾಸಕರ ಪ್ರೇರಣೆಯಂತೆ ಕನ್ನಡ ಶಾಲೆಗಳಲ್ಲಿ ಕುಟೀರ ಶಿಕ್ಷಣ ಪ್ರಾರಂಭಿಸಲಾಗುವುದು. ಹಿಂದಿನ ಗುರುಕುಲ ಶಿಕ್ಷಣದ ಮಾದರಿಯಲ್ಲಿ ಪಾಠ ಮಾಡಲಾಗುವುದು. ನಮ್ಮ ನಾಡಿನ ಸಂಸ್ಕೃತಿ, ತುಳುನಾಡಿನ ಆಚರಣೆಗಳ ಜತೆ ಬದುಕುವ ನೈತಿಕ ಶಿಕ್ಷಣ ನೀಡಲಾಗುವುದು. ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ಹೆತ್ತವರು ಈ ಪರಿಕಲ್ಪನೆಗೆ ಕೈ ಜೋಡಿಸಿದ್ದಾರೆ.
|ಶಶಿಧರ್ ಜಿ.ಎಸ್. ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಕಳ

ಕುಟೀರದಲ್ಲಿ ವಿದ್ಯಾರ್ಥಿಗಳಿಗೆ ಪಾಠದ ಜತೆ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುವುದು. ಪಾಠದ ಜೊತೆಗೆ ಮಕ್ಕಳಿಗೆ ಬದುಕಿಗೆ ಬೇಕಾಗುವ ಮೌಲ್ಯಯುತ ಶಿಕ್ಷಣ ಈ ಕುಟೀರದಿಂದ ಸಿಗಲಿದೆ.
| ಕರುಣಾಕರ್ ನಾಕ್ ಮುಖ್ಯಶಿಕ್ಷಕ, ಸರಕಾರಿ ಮಾ.ಹಿ.ಪ್ರಾ.ಶಾಲೆ, ನಂದಳಿಕೆ

 

ಹರಿಪ್ರಸಾದ್ ನಂದಳಿಕೆ

Share This Article

ಪದೇಪದೆ ಒತ್ತಡ, ಆತಂಕಕ್ಕೆ ಒಳಗಾಗುವರಲ್ಲಿ ಈ 5 ಕಾಯಿಲೆಗಳ ಅಪಾಯ ಸಾಧ್ಯತೆ ಅಧಿಕ! | Stress

Stress : ದಿನನಿತ್ಯದ ಬದುಕಿನ ಜಂಜಾಟದಲ್ಲಿ ಮನುಷ್ಯ ಒತ್ತಡ ಅನುಭವಿಸೋದು ಸಾಮಾನ್ಯವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ…

ಬೇಸಿಗೆಯಲ್ಲಿ ‘ಎಸಿ’ ಬಳಕೆಯಿಂದ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತಾ; ಅದನ್ನು ಕಡಿಮೆ ಮಾಡಲು ಇಲ್ಲಿದೆ ನೋಡಿ ಪ್ಲಾನ್ | AC

AC | ಮಾರ್ಚ್​ನಿಂದ ಹಿಡಿದು ಮೇ ಹಾಗೂ ಜೂನ್​ ತಿಂಗಳಲ್ಲಿ ಬೇಸಿಗೆಯ ತಾಪಮಾನ ಹೆಚ್ಚಾಗಿರುತ್ತದೆ. ಈ…

ಹೆಂಡತಿಯ ಈ ವಿಚಾರಗಳನ್ನು ಪತಿ ಯಾರ ಬಳಿಯೂ ಹೇಳಬಾರದು; ವಿವಾಹ ಜೀವನಕ್ಕೆ ಕೇಡು | Chanakya Niti

ಆಚಾರ್ಯ ಚಾಣಕ್ಯರು ತಮ್ಮ ತೀಕ್ಷ್ಣ ಬುದ್ಧಿಶಕ್ತಿ, ರಾಜಕೀಯ ಮತ್ತು ನೈತಿಕ ಜ್ಞಾನಕ್ಕೆ ಹೆಸರುವಾಸಿಯಾಗಿದ್ದಾರೆ. ಚಾಣಕ್ಯ ನೀತಿಯಲ್ಲಿ…