More

    ಕುಸುಬೆ ಖರೀದಿ ಕೇಂದ್ರ ಆರಂಭಿಸಲು ಆಗ್ರಹ

    ಗದಗ: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಕುಸುಬೆ ಖರೀದಿ ಕೇಂದ್ರ ಆರಂಭಿಸದಿರುವುದರಿಂದ ರೈತರು ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ದರ ಕುಸಿದಿದೆ. ಕಷ್ಟಪಟ್ಟು ಬೆಳೆದ ಉತ್ಪನ್ನಕ್ಕೆ ಸೂಕ್ತ ದರ ಸಿಗದೆ ಇರುವುದರಿಂದ ರೈತರು ಸಮಸ್ಯೆಗೆ ಸಿಲುಕಿದ್ದಾರೆ.

    ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್​ಗೆ 5327 ರೂಪಾಯಿ ದರ ನಿಗದಿಪಡಿಸಿದೆ. ಆದರೆ, ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್​ಗೆ 3200 ರಿಂದ 4100 ರೂಪಾಯಿವರೆಗೆ ದರವಿದೆ. ಮಾರುಕಟ್ಟೆ ದರದಲ್ಲಿ ಮಾರಾಟ ಮಾಡಿದರೆ ಪ್ರತಿ ಕ್ವಿಂಟಾಲ್​ಗೆ 1 ಸಾವಿರ ನಷ್ಟವಾಗುತ್ತದೆ. ಹೀಗಾಗಿ ಸರ್ಕಾರ ಕೂಡಲೇ ಕುಸುಬೆ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

    ತಿಂಗಳು ಹಿಂದೆಯೇ ಕುಸುಬೆ ಕಟಾವು ಮಾಡಿದ್ದು, ದರ ಕುಸಿದಿದ್ದರಿಂದ ಕೆಲ ರೈತರು ತಮ್ಮ ಉತ್ಪನ್ನವನ್ನು ಮಾರಾಟ ಮಾಡದೆ ಹಾಗೆ ಟ್ಟುಕೊಂಡಿದ್ದಾರೆ. ಹಣಕಾಸಿನ ಅಡಚಣೆ ಇರುವ ರೈತರು ಮಾರಾಟ ಮಾಡಿದ್ದಾರೆ. ದರ ಬರಬಹುದು ಎಂಬ ನಿರೀಕ್ಷೆಯಲ್ಲಿ ತಮ್ಮ ಉತ್ಪನ್ನವನ್ನು ಇಟ್ಟುಕೊಂಡಿರುವ ರೈತರು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಿ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.

    ಆದರೆ, ಜಿಲ್ಲೆಯಲ್ಲಿ ಕುಸುಬೆ ಬೆಳೆಯುವ ಪ್ರದೇಶ ಕಡಿಮೆ ಇದ್ದು, ಹೀಗಾಗಿ ಖರೀದಿ ಕೇಂದ್ರ ಆರಂಭಿಸಲು ಸರ್ಕಾರ ಅನುಮತಿ ನೀಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಕೇವಲ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕುಸುಬೆ ಬೆಳೆಯಲಾಗಿದೆ. 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದರೆ ಕೇಂದ್ರ ಆರಂಭಿಸಬಹುದಿತ್ತು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್​ಗಿಂತ ಪ್ರದೇಶದಲ್ಲಿ ಕುಸುಬೆ ಬೆಳೆಯಲಾಗುತ್ತಿದೆ. ಆದರೆ, ಕೃಷಿ ಇಲಾಖೆಯವರು ಅವರಿಂದ ಬೀಜ ಪಡೆದು ಬಿತ್ತನೆ ಮಾಡಿದ ಪ್ರದೇಶವನ್ನು ಮಾತ್ರ ಲೆಕ್ಕ ಹಿಡಿಯುತ್ತಿದ್ದಾರೆ. ಹಲವಾರು ರೈತರು ತಮ್ಮ ಬಳಿ ಇರುವ ಬೀಜ ಬಿತ್ತಿದ್ದಾರೆ. ಹೀಗಾಗಿ ಸರ್ಕಾರಿ ಲೆಕ್ಕದಲ್ಲಿ ಪ್ರದೇಶ ಕಡಿಮೆ ತೋರಿಸುತ್ತಿದೆ. ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಒಬ್ಬೊಬ್ಬ ರೈತರು 20 ರಿಂದ 30 ಎಕರೆ ಪ್ರದೇಶದಲ್ಲಿ ಕುಸುಬೆ ಬೆಳೆದಿದ್ದಾರೆ. ಖರೀದಿ ಕೇಂದ್ರ ಆರಂಭಿಸದಿದ್ದರೆ ಸರ್ಕಾರದ ಯೋಜನೆಯಿಂದ ರೈತರು ವಂಚಿತರಾಗುತ್ತಾರೆ ಎಂದು ಗದಗ ತಾಲೂಕಿನ ರೈತರಾದ ಶ್ರೀಕಾಂತ ಮೈಲಾರ, ಉಮೇಶ ಲಿಂಗರಡ್ಡಿ, ಶರಣಪ್ಪ ಕನಾಜ, ಪಾಂಡುರಡ್ಡಿ ಲಿಂಗಧಾಳ, ಹನುಮಂತ ಜನಗಿ, ಶಿವಾನಂದ ಸಣ್ಣಗೌಡರ, ಮುತ್ತಪ್ಪ ಕೊಂಡಿಕೊಪ್ಪ, ಸಂಗಮೇಶ ಜನಗಿ ಮತ್ತಿತರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    ಜಿಲ್ಲೆಯಲ್ಲಿ ಕುಸುಬೆ ಬೆಳೆಯುವ ಪ್ರದೇಶ ಕಡಿಮೆ ಇದೆ. ಹೀಗಾಗಿ ಖರೀದಿ ಕೇಂದ್ರ ಆರಂಭಿಸಲು ಸರ್ಕಾರ ಅನುಮತಿ ನೀಡಿಲ್ಲ. ಖರೀದಿ ಕೇಂದ್ರ ಆರಂಭಿಸುವ ಕುರಿತು ಜಿಲ್ಲಾಧಿಕಾರಿ ಅವರ ಮೂಲಕ ಪ್ರಸ್ತಾವನೆ ಸಲ್ಲಿಸಲಾಗುವುದು. ಸರ್ಕಾರದ ನಿರ್ದೇಶನದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕಳೆದ ವರ್ಷಗಳಿಂದ ವರ್ಷಗಳಿಂದ ಕುಸುಬೆ ಖರೀದಿ ಕೇಂದ್ರ ಆರಂಭಿಸಲು ಸಲ್ಲಿಸಿದ ಪ್ರಸ್ತಾವನೆಗೆ ಯಾವುದೇ ಉತ್ತರ ಬಂದಿಲ್ಲ. ಆದರೂ ಸಹ ರೈತರ ಹಿತ ಕಾಯಲು ಈ ವರ್ಷವೂ ಪ್ರಸ್ತಾವನೆ ಸಲ್ಲಿಸಲಾಗುವುದು.

    ಟಿ.ಎಸ್.ರುದ್ರೇಶಪ್ಪ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಗದಗ

    ಸರ್ಕಾರದ ಯೋಜನೆ ಸೌಲಭ್ಯ ರೈತರಿಗೆ ಸಿಗಬೇಕು. ಬಿತ್ತನೆ ಪ್ರದೇಶ ಕಡಿಮೆ ಇದೆ ಎಂದು ಖರೀದಿ ಕೇಂದ್ರ ಆರಂಭಿಸದಿದ್ದರೆ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಕುಸುಬೆ ಖರೀದಿ ಕೇಂದ್ರ ಆರಂಭಿಸಲು ಮುಂದಾಗಬೇಕು.

    |ಉಮೇಶ ಲಿಂಗರಡ್ಡಿ, ರೈತರು, ಹೊಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts