ವಿಶ್ವನಾಥ ಸೊಪ್ಪಿಮಠ ಕುಷ್ಟಗಿ
ಪಟ್ಟಣದ ಕೆರೆ ಅಂಗಳದಲ್ಲಿ ನಿರ್ಮಿಸಿರುವ ತಾಲೂಕು ಕ್ರೀಡಾಂಗಣ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಮೈದಾನದಲ್ಲಿ ಮುಳ್ಳುಗಿಡ ಹಾಗೂ ಪಾರ್ಥೇನಿಯಂ ಗಿಡಗಳು ಬೆಳೆದಿದ್ದು, ಅಧಿಕಾರಿಗಳ ಬೇಜಬ್ದಾರಿತನಕ್ಕೆ ಸಾಕ್ಷಿಯಾಗಿದೆ. ಇದರಿಂದ ಕ್ರೀಡಾಪಟುಗಳು ಸಂಕಷ್ಟ ಅನುಭವಿಸುವಂತಾಗಿದೆ.
ಎಂಟು ಎಕರೆ ಕ್ರೀಡಾಂಗಣದಲ್ಲಿ ಹೊರಾಂಗಣ ಕ್ರೀಡೆಗಾಗಿ ಪ್ರೇಕ್ಷಕರ ಗ್ಯಾಲರಿ, ಒಳಾಂಗಣ ಕ್ರೀಡಾಂಗಣದಲ್ಲಿ ಬಾಸ್ಕೆಟ್ ಬಾಲ್, ಟೆನಿಸ್ ಆಡಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ದಸರಾ, ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ, ಗಣರಾಜ್ಯೋತ್ಸವ, ರಾಜ್ಯೋತ್ಸವ ಕಾರ್ಯಕ್ರಮವನ್ನು ಕ್ರೀಡಾಂಗಣದಲ್ಲಿಯೇ ಆಯೋಜಿಸಲಾಗುತ್ತದೆ. ಅದಕ್ಕೆ ಅಗತ್ಯ ಸೌಲಭ್ಯಗಳು ಇಲ್ಲದಿರುವುದು ಕ್ರೀಡಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಸಮಸ್ಯೆಗಳ ತಾಂಡವ: ಕ್ರೀಡಾಂಗಣದಲ್ಲಿ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಹಾಗಾಗಿ ಕ್ರೀಡಾಪಟುಗಳು ಹಾಗೂ ಪ್ರೇಕ್ಷಕರು ಹೋಟೆಲ್ ಸೇರಿ ಬೇರೆ ಅಂಗಡಿಗಳ ಮೊರೆ ಹೋಗುವ ಅನಿವಾರ್ಯ ಸ್ಥಿತಿ ಇದೆ. ಕ್ರೀಡಾಂಗಣದಲ್ಲಿ ನೀರಿಲ್ಲದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತಲೆ ಸುತ್ತು ಬಂದು ಬಿದ್ದ ಉದಾಹರಣೆಗಳಿವೆ.
ಕ್ರೀಡಾಂಗಣಕ್ಕಿದೆ 25ವರ್ಷದ ಇತಿಹಾಸ
1997-2001ರ ಅವಧಿಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗಿತ್ತು. ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿ ನಂತರ ಇಬ್ಬರು ಶಾಸಕರ ಆಡಳಿತಾವಧಿ ಪೂರ್ಣಗೊಳ್ಳಲಿಲ್ಲ. 2009-10ರಲ್ಲಿ ಪ್ರೇಕ್ಷಕರ ಗ್ಯಾಲರಿ ಹಾಗೂ ಕ್ರೀಡಾಂಗಣ ಸುತ್ತ ಕಾಂಪೌಂಡ್ ನಿರ್ಮಾಣದ ಭಾಗ್ಯ ಕೂಡಿಬಂತು.
ಕ್ರೀಡಾಂಗಣದ ಉದ್ಘಾಟನೆಗೆ 2013ರ ಜ.23ರಂದು ಆಗಮಿಸಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿಗೆ ೇರಾವು ಹಾಕಿ ಪ್ರತಿಭಟನೆ ನಡೆಸಿದ ಕ್ರೀಡಾಪಟುಗಳು ಛಾವಣಿ ಹಾಗೂ ಇತರ ಕಾಮಗಾರಿ ಪೂರ್ಣಗೊಳಿಸುವವರೆಗೆ ಉದ್ಘಾಟನೆ ಮಾಡಬಾರದು ಎಂದು ಪಟ್ಟು ಹಿಡಿದಿದ್ದರು. ಆಗ ಕೆಲವೇ ದಿನಗಳಲ್ಲಿ ಪೂರ್ಣಗೊಳಿಸುವುದಾಗಿ ಸಚಿವರು ಹೇಳಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದರು.
ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ಎದುರಾಗಿ ಮೇಲ್ಛಾವಣಿ ಕನಸು ನನಸಾಗಲಿಲ್ಲ. 2019-20ನೇ ಸಾಲಿನಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ಪ್ರೇಕ್ಷಕರ ಗ್ಯಾಲರಿಗೆ ಮೇಲ್ಛಾವಣಿ ನಿರ್ಮಿಸಲಾಯಿತು. ಇದೇ ಅನುದಾನದಡಿ 1.50ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಕ್ರೀಡಾಂಗಣವನ್ನೂ ನಿರ್ಮಿಸಲಾಗಿದೆ.
ಇದನ್ನೂ ಓದಿ: ಹೂವಿನಹಡಗಲಿ ಸ್ಟೇಡಿಯಂಗೆ ಬೇಕು ಕಾಯಕಲ್ಪ
ಕೆಕೆಆರ್‌ಡಿಬಿ ಯೋಜನೆಯಡಿ 2019-20, 20-21ನೇ ಸಾಲಿನಲ್ಲಿ ಬಿಡುಗಡೆಯಾದ 1.70 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ ಜತೆಗೆ ಹೊರಾಂಗಣ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಗೆ ಮೇಲ್ಛಾವಣಿ ನಿರ್ಮಿಸಲಾಗಿದೆ. ಜತೆಗೆ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಗೃಹ ನಿರ್ಮಿಸಲಾಗಿದೆ. ಕ್ರಿಯಾಯೋಜನೆಯಂತೆ ಕ್ರೀಡಾಂಗಣದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ.
ಇರ್ಫಾನ್, ಎಇಇ, ಕೆಆರ್‌ಐಡಿಎಲ್, ಕುಷ್ಟಗಿಕ್ರೀಡಾಂಗಣದಲ್ಲಿ ರನ್ನಿಂಗ್ ಟ್ರ್ಯಾಕ್ ನಿರ್ಮಿಸಬೇಕಿದೆ. ಕುಡಿವ ನೀರಿನ ವ್ಯವಸ್ಥೆ ಮಾಡಬೇಕಾಗಿದೆ. ಕ್ರೀಡಾಂಗಣದಲ್ಲಿ ಮುಳ್ಳಿನ ಗಿಡಗಳು ಬೆಳೆದಿದ್ದು, ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿದೆ. ಮೈದಾನವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು.
ಹುಲ್ಲಪ್ಪ ಭೋವಿ, ರಾಷ್ಟ್ರಮಟ್ಟದ ಕ್ರೀಡಾಪಟು, ಚಳಗೇರಾಕ್ರೀಡಾಂಗಣದಲ್ಲಿ ಟ್ರ್ಯಾಕ್ ನಿರ್ಮಿಸುವ ಅಗತ್ಯವಿದೆ. ಕುಡಿವ ನೀರಿನ ವ್ಯವಸ್ಥೆ ಜತೆಗೆ ಮೈದಾನದಲ್ಲಿ ಬೆಳೆದು ನಿಂತ ಗಿಡಗಂಟಿಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು.
ಮಹಾಂತೇಶ್ ಜಾಲಿಗಿಡದ್, ಸಹಾಯಕ ಕ್ರೀಡಾಧಿಕಾರಿ, ಕ್ರೀಡಾ ಇಲಾಖೆ, ಕುಷ್ಟಗಿ