More

    ಕುಷ್ಟಗಿಯಲ್ಲಿ ಜನರ ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ್!

    ಕುಷ್ಟಗಿ: ಪಟ್ಟಣದ ಸಂತೆ ಮೈದಾನದಲ್ಲಿ ಶನಿವಾರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತರಕಾರಿ ಹರಾಜು ಮಾಡುತ್ತಿದ್ದವರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ.

    ತರಕಾರಿ ಹರಾಜು ಹಾಗೂ ಖರೀದಿಗೆ ಬೆಳಗಿನ ಜಾವ 4ರಿಂದ 6ರವರೆಗೆ ಅವಕಾಶ ಕಲ್ಪಿಸಲಾಗಿದೆ. ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಕಮಿಷನ್ ಏಜೆಂಟರು ಹಾಗೂ ಖರೀದಿದಾರರು ಮುಗಿ ಬಿದ್ದಿದ್ದಾರೆಂದು ಸಾರ್ವಜನಿಕರ ದೂರು ಆಧರಿಸಿ ಪೊಲೀಸರು ಲಾಠಿ ಚಾರ್ಜ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಪುರಸಭೆಯ ಕೆಲ ಸಿಬ್ಬಂದಿಗೂ ಏಟು ಬಿದ್ದಿವೆ. ಲಾಠಿ ಚಾರ್ಜ್ ನಂತರ ಪುರಸಭೆ ಆವರಣದಲ್ಲಿ ಸಮಾವೇಶಗೊಂಡ ಕಮಿಷನ್ ಏಜೆಂಟರು ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.

    ಪುರಸಭೆಗೆ ಭೇಟಿ ನೀಡಿದ ತಹಸೀಲ್ದಾರ್ ಎಂ.ಸಿದ್ದೇಶ, ಸಿಪಿಐ ಜಿ.ಚಂದ್ರಶೇಖರ, ಪಿಎಸ್‌ಐ ಚಿತ್ತರಂಜನ್, ಕಮಿಷನ್ ಏಜೆಂಟರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿದ ಪಿಎಸ್‌ಐ ಚಿತ್ತರಂಜನ್, ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬೀಳುತ್ತಿದ್ದಾರೆ. ಪೊಲೀಸರು ಹಾಗೂ ತಹಸೀಲ್ದಾರರು ಏನು ಮಾಡುತ್ತಿದ್ದಾರೆ ಎಂದೆಲ್ಲ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಈ ಸಂಬಂಧ ಹಲವರು ಕರೆ ಮಾಡಿ ದೂರುತ್ತಿದ್ದಾರೆ. ಹೀಗಾಗಿ ಕ್ರಮ ಕೈಗೊಳ್ಳಬೇಕಾಯಿತೆಂದು ತಿಳಿಸಿದರು.

    ತಹಸೀಲ್ದಾರ್ ಎಂ.ಸಿದ್ದೇಶ ಮಾತನಾಡಿ, ಪಟ್ಟಣದಲ್ಲಿ ದಿನಸಿ ವಸ್ತುಗಳನ್ನು ಮನೆ ಬಾಗಿಲಿಗೆ ವಿತರಿಸಲಾಗುತ್ತಿದೆ. ರೈತರು ಅನಗತ್ಯವಾಗಿ ಮಾರುಕಟ್ಟೆಗೆ ಬರುವಂತಿಲ್ಲ. ಹರಾಜು ಪ್ರಕ್ರಿಯೆ ವೇಳೆಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಸಾಮಾಜಿಕ ಕಳಕಳಿಯಿಂದಲೇ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ್, ವ್ಯವಸ್ಥಾಪಕ ಪ್ರಹ್ಲಾದ ಜೋಶಿ, ಕಮಿಷನ್ ಏಜೆಂಟ್ ಪರಸಪ್ಪ ಕತ್ತಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts