More

    ಇನ್ನೆರಡು ದಿನದಲ್ಲಿ ತೊಗರಿ ಖರೀದಿ ಕೇಂದ್ರ ಆರಂಭ

    ತಹಸೀಲ್ದಾರ್ ಎಂ.ಸಿದ್ದೇಶ ಮಾಹಿತಿ ಗುಣಮಟ್ಟದ ಉತ್ಪನ್ನ ತರಲು ರೈತರಲ್ಲಿ ಮನವಿ

    ಕುಷ್ಟಗಿ: ಬೆಂಬಲ ಬೆಲೆ ಯೋಜನೆ ಅಡಿ ತೊಗರಿ ಖರೀದಿಸಲು ಕೊಪ್ಪಳದಲ್ಲಿ ಈಗಾಗಲೇ ಕೇಂದ್ರ ಆರಂಭವಾಗಿದ್ದು, ಇನ್ನೆರಡು ದಿನಗಳಲ್ಲಿ ತಾಲೂಕಿನಲ್ಲಿಯೂ ಆರಂಭಿಸಲಾಗುವುದು ಎಂದು ತಹಸೀಲ್ದಾರ್ ಎಂ.ಸಿದ್ದೇಶ ಹೇಳಿದರು.

    ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಸರ್ಕಾರದ ಆದೇಶದಂತೆ ಗುಣಮಟ್ಟದ ತೊಗರಿ ಖರೀದಿಸಲಾಗುವುದು. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಪ್ರಕ್ರಿಯೆ ನಡೆಸಲಾಗುವುದು. ಗುಣಮಟ್ಟದ ಉತ್ಪನ್ನ ತರಲು ರೈತರಿಗೆ ತಿಳಿಸುವಂತೆ ರೈತ ಮುಖಂಡರಲ್ಲಿ ತಹಸೀಲ್ದಾರ್ ಮನವಿ ಮಾಡಿದರು.

    ನವೆಂಬರ್ ಅಂತ್ಯಕ್ಕೆ ಕೇಂದ್ರ ಆರಂಭಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಬಹುತೇಕ ರೈತರು ಈಗಾಗಲೇ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿದ್ದಾರೆ. ಬೆಂಬಲ ಬೆಲೆ ಯೋಜನೆಯಿಂದ ಮಾರುಕಟ್ಟೆಯ ವರ್ತಕರಿಗೆ ಅನುಕೂಲವಾಗುತ್ತಿದೆ. ಪ್ರತಿ ವರ್ಷ ಇದೇ ರೀತಿ ವಿಳಂಬವಾಗಿ ಬಹುತೇಕ ರೈತರು ಯೋಜನೆಯಿಂದ ವಂಚಿತರಾದರೂ ಸರ್ಕಾರ ಮತ್ತೇ ಅದೇ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

    ಹಮಾಲರಿಗೆ ಕಡಿವಾಣ ಹಾಕಿ

    ರೈತರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಅನುಕೂಲವಾಗಲೆಂದು ಬೆಂಬಲ ಬೆಲೆ ಯೋಜನೆ ಅಡಿ ಖರೀದಿಸಲಾಗುತ್ತಿದೆ. ಖರೀದಿ ವೇಳೆ ತೂಕ ಮಾಡುವ ಹಮಾಲರು ಮಣ್ಣುಗಾಳು ಹೆಸರಿನಲ್ಲಿ ತಲಾ ರೈತರಿಂದ 10-20ಕೆಜಿ ವರೆಗೆ ಉತ್ಪನ್ನ ಪಡೆಯುತ್ತಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ರೈತರ ಉತ್ಪನ್ನವನ್ನು ಯಾವುದೇ ಕಾರಣಕ್ಕೂ ಪಡೆಯದಂತೆ ಹಮಾಲರಿಗೆ ಕಟ್ಟುನಿಟ್ಟಿನ ಆದೇಶ ಮಾಡುವಂತೆ ರೈತರು ಆಗ್ರಹಿಸಿದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಸಿದ್ದೇಶ ತಿಳಿಸಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಹಾದೇವಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ನಜೀರ್‌ಸಾಬ್ ಮೂಲಿಮನಿ, ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ದೇಸಾಯಿ, ರೈತ ಮುಖಂಡರಾದ ಮಹಾಂತಗೌಡ, ಶಿವಪುತ್ರಪ್ಪ ಕೋಳೂರು, ಬಸವರಾಜ ಕಂದಕೂರು, ಶಂಕರಗೌಡ ಬೀಳಗಿ, ಮೆಹಬೂಬಸಾಬ ಗದ್ವಾಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts