More

    ಶಿಕ್ಷಕ ಹುದ್ದೆಗೆ ಸಹೋದರರು ಆಯ್ಕೆ: ಏಕಕಾಲದಲ್ಲಿ ಬಿ.ಇಡಿ ತರಬೇತಿ, ಒಂದೇ ಬಾರಿಗೆ ಸೆಲೆಕ್ಷನ್

    ಕುಷ್ಟಗಿ: ಸರ್ಕಾರಿ ನೌಕರಿ ಪಡೆಯಲು ಸಾಮರ್ಥ್ಯದ ಜತೆ ಅದೃಷ್ಟವೂ ಇರಬೇಕು ಎಂಬ ಮಾತಿದೆ. ಒಟ್ಟಿಗೆ ಬಿ.ಇಡಿ ತರಬೇತಿ ಪೂರ್ಣಗೊಳಿಸಿ ಪರೀಕ್ಷೆ ಬರೆದ ಸಹೋದರರಿಬ್ಬರಿಗೆ ಏಕಕಾಲದಲ್ಲಿ ಅದೃಷ್ಟ ಒಲಿದಿದ್ದು, ಶಿಕ್ಷಕ ಹುದ್ದೆಗೆ ಆಯ್ಕೆಯಾಗಿದ್ದಾರೆ.

    ಸದ್ಯ ಪ್ರಕಟಿಸಲಾದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ತಾಲೂಕಿನ ನಾಗರಾಳದ ವೀರಭದ್ರಪ್ಪ ಹಾಗೂ ರವಿಕುಮಾರರ ಹೆಸರಿದ್ದು, ಪಾಲಕರ ಸಂತಸಕ್ಕೆ ಕಾರಣವಾಗಿದೆ. ಮೂಲತಃ ತಾಲೂಕಿನ ಜಿ.ಗಂಗನಾಳದ ಇವರು ನಾಗರಾಳದಲ್ಲಿ ನೆಲೆಯೂರಿದ್ದಾರೆ. ಹಮಾಲಿ ಹಾಗೂ ಇತರ ಕೂಲಿ ಕೆಲಸ ಮಾಡುತ್ತಲೇ ಮಕ್ಕಳಿಗೆ ತಂದೆ ಬಸವರಾಜ ಯಾಪಲದಿನ್ನಿ ಶಿಕ್ಷಣ ಕೊಡಿಸಿದ್ದಾರೆ. ಈ ಸಹೋದರರು ಪಪಂ ಮೀಸಲಾತಿಯಡಿ ಅರ್ಜಿ ಸಲ್ಲಿಸಿದ್ದರು. ವೀರಭದ್ರಪ್ಪ ಶೇ.75.42 ಅಂಕ ಪಡೆದು ಜನರಲ್ ಮೆರಿಟ್‌ನಲ್ಲಿ ಆಯ್ಕೆಯಾದರೆ, ರವಿಕುಮಾರ್ ಶೇ.72.03 ಅಂಕ ಪಡೆದು ಪಪಂ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದಾರೆ. 2020ರಲ್ಲಿ ಬಿಇಡಿ ಪೂರ್ಣಗೊಳಿಸಿರುವ ಸಹೋದರರು ಮೊದಲ ಪ್ರಯತ್ನದಲ್ಲಿಯೇ ಆಯ್ಕೆಯಾಗಿರುವುದು ವಿಶೇಷ.

    ಶಿಕ್ಷಕ ತರಬೇತಿ ಪೂರ್ಣಗೊಳಿಸಿದ ನಂತರ ನಿರಂತರ ಅಧ್ಯಯನಶೀಲರಾಗಿರಬೇಕು. ಯಾವುದೇ ವಿಷಯವನ್ನು ಆಳವಾಗಿ ಅರ್ಥೈಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ. ತಂದೆ ಹಮಾಲಿ, ಕೂಲಿ ಕೆಲಸ ಮಾಡುತ್ತಲೇ ಶಿಕ್ಷಣ ಕೊಡಿಸಿದ್ದಾರೆ. ಅವರ ಆಸೆಯಂತೆ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿರುವುದು ಪಾಲಕರ ಶ್ರಮ ಸಾರ್ಥಕಗೊಳಿಸಿದಂತಾಗಿದೆ.
    | ವೀರಭದ್ರಪ್ಪ, ರವಿಕುಮಾರ್ ಶಿಕ್ಷಕ ಹುದ್ದೆಗೆ ಆಯ್ಕೆಯಾದ ಸಹೋದರರು

    ನಮ್ಮಂತೆ ನಮ್ಮ ಮಕ್ಕಳಾಗಬಾರದು ಎಂದು ಶಿಕ್ಷಣ ಕೊಡಿಸಿದೆ. ಇಬ್ಬರು ಮಕ್ಕಳೂ ಶಿಕ್ಷಕ ಹುದ್ದೆಗೆ ಆಯ್ಕೆಯಾಗಿರುವುದು ಸಂತಸದ ಜತೆಗೆ ಹೆಮ್ಮೆ ಎನಿಸುತ್ತಿದೆ. ಮನೆಯ ಪರಿಸ್ಥಿತಿ ಹೇಗೆಯೇ ಇರಲಿ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ಭವಿಷ್ಯದಲ್ಲಿ ಸ್ವಾವಲಂಬಿಗಳಾಗುತ್ತಾರೆ.
    | ಬಸವರಾಜ ಯಾಪಲದಿನ್ನಿ ಸಹೋದರರ ತಂದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts