More

    ಪೊಲೀಸರ ಕಾರ್ಯಕ್ಕೆ ನೆರವಾಗುವ ಗೃಹರಕ್ಷಕರು: ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಹೇಳಿಕೆ

    ಕುಷ್ಟಗಿ: ಸೇವಾ ಮನೋಭಾವದಿಂದ ಕೆಲಸ ಮಾಡುವ ಗೃಹರಕ್ಷಕ ಸಿಬ್ಬಂದಿ ಪೊಲೀಸರಿಗೆ ನೆರವಾಗುವ ಮೂಲಕ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು ಹೇಳಿದರು.

    ಜಿಲ್ಲಾ ಹಾಗೂ ತಾಲೂಕು ಗೃಹರಕ್ಷಕ ದಳದ ಸಹಯೋಗದಲ್ಲಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಖಿಲ ಭಾರತ ಗೃಹರಕ್ಷಕ ದಳದ ದಿನಾಚರಣೆ ಹಾಗೂ ಕುಷ್ಟಗಿ ಘಟಕದ 30ನೇ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಯಂಪ್ರೇರಣೆಯಿಂದ ಸೇರುವ ಇಚ್ಛೆ ಇರುವವರು ಮಾತ್ರ ಗೃಹರಕ್ಷಕರಾಗಿ ಕಾರ್ಯನಿರ್ವಹಿಸುತ್ತಾರೆ. ಜಾತ್ರೆ, ಉತ್ಸವ, ಗಲಭೆ ಇತರ ಸಂದರ್ಭಗಳಲ್ಲಿ ಭದ್ರತಾ ಕಾರ್ಯ ಕೈಗೊಳ್ಳುವ ಗೃಹರಕ್ಷಕರು ಕೋವಿಡ್‌ನ ಸಂದಿಗ್ಧ ಪರಿಸ್ಥಿತಿಯಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸಿದ್ದು ಶ್ಲಾಘನೀಯ ಎಂದರು.

    ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ.ಜಿ.ಪಿ.ಗವಿಸಿದ್ದಪ್ಪ ಮಾತನಾಡಿ, ಶಿಸ್ತು, ಸಂಯಮ, ತಾಳ್ಮೆಯೊಂದಿಗೆ ಪೊಲೀಸರ ಜತೆ ಗುರುತರ ಜವಾಬ್ದಾರಿ ನಿರ್ವಹಿಸುವ ಗೃಹರಕ್ಷಕರಿಗೆ ಕೆಲಸದ ಅವಕಾಶಗಳು ಕಡಿಮೆಯಾಗುತ್ತಿವೆ. ವಿವಿಧ ಇಲಾಖೆ ಹಾಗೂ ಅಗತ್ಯ ಸಂದರ್ಭಗಳಲ್ಲಿ ವರ್ಷಪೂರ್ತಿ ಕೆಲಸ ನೀಡುವ ಕಾರ್ಯವನ್ನು ಸರ್ಕಾರ ಮಾಡಬೇಕಿದೆ ಎಂದರು.

    ಸೀನಿಯರ್ ಪ್ಲಟೂನ್ ಕಮಾಂಡರ್ ರವೀಂದ್ರ ಬಾಕಳೆ ಮಾತನಾಡಿ, ಗೃಹರಕ್ಷಕರಿಗೆ ವೇತನ ತಾರತಮ್ಯ ಮಾಡಲಾಗುತ್ತಿದೆ. ಲಭ್ಯ ಸಿಬ್ಬಂದಿ ಪೈಕಿ ಎಲ್ಲರಿಗೂ ಸಮಪರ್ಕ ಕೆಲಸ ಸಿಗುತ್ತಿಲ್ಲ. ಸರ್ಕಾರ ಗೃಹರಕ್ಷಕ ಸಿಬ್ಬಂದಿ ಸಮಸ್ಯೆಗೆ ಸ್ಪಂದಿಸಬೇಕಿದೆ ಎಂದು ಒತ್ತಾಯಿಸಿದರು. ತಹಸೀಲ್ದಾರ್ ಗುರುರಾಜ ಛಲವಾದಿ ಮಾತನಾಡಿದರು.

    ಸಿಪಿಐ ನಿಂಗಪ್ಪ ರುದ್ರಪ್ಪಗೋಳ, ಪ್ಲಟೂನ್ ಕಮಾಂಡರ್ ನಾಗರಾಜ ಬಡಿಗೇರ, ಕುಷ್ಟಗಿಯ ಘಟಕಾಧಿಕಾರಿ ಶಿವಪ್ಪ ಚೂರಿ, ಗಂಗಾವತಿ ಘಟಕಾಧಿಕಾರಿ ಎಸ್.ನೀರಸಾಬ್, ಕೊಪ್ಪಳದ ರುದ್ರಪ್ಪ ಪತ್ತಾರ್, ಯಲಬುರ್ಗಾದ ಬಸವರಾಜ ತುಮರಗುದ್ದಿ, ಕನಕಗಿರಿಯ ಗೋಪಾಲ ಶಾಸ್ತ್ರಿ, ಕಾರಟಗಿಯ ಅಶೋಕ ಬಳಿಗಾರ, ಅಳವಂಡಿಯ ಮೆಹಬೂಬ್, ಬೇವೂರಿನ ರಾಮಚಂದ್ರ ಬಡಿಗೇರ್, ತಾವರಗೇರಾದ ರವೀಂದ್ರನಾಥ ಬಳಿಗಾರ, ಹನುಮಸಾಗರದ ಹನುಮಂತಪ್ಪ, ಮುನಿರಾಬಾದ್ ನ ರಾಮಲಿಂಗಪ್ಪ, ಅಗ್ನಿ ಶಾಮಕ ದಳದ ಅಧಿಕಾರಿ ರಾಜು ನರಸಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts