More

    ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ; ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಸೂಚನೆ

    ಕುಷ್ಟಗಿ: ಸರ್ಕಾರದ ಕೆಲಸ ಎಂದರೆ ಕಳಪೆ ಎನ್ನುವ ಜನರ ಮನೋಭಾವ ಬದಲಿಸುವ ಕಾರ್ಯವನ್ನು ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮಾಡಬೇಕಿದೆ. ಗುಣಮಟ್ಟ ಕಾಯ್ದುಕೊಳ್ಳುವುದರಿಂದ ಮಾತ್ರವಿದು ಸಾಧ್ಯ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

    ಪಟ್ಟಣದ ಬಸ್ ನಿಲ್ದಾಣದ ನೂತನ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಂಗಳವಾರ ಮಾತನಾಡಿದರು. ಕಟ್ಟಡ ಕಾಮಗಾರಿ ಆರಂಭವಾದ ನಂತರ ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದೆ ಪೂರ್ಣಗೊಳಿಸುವ ಕಾರ್ಯವಾಗಬೇಕು. ಗುತ್ತಿಗೆದಾರರು ತಮ್ಮ ಪಾಲಿನ ಲಾಭಾಂಶ ಮಾತ್ರ ಪಡೆದರೆ ಕಾಮಗಾರಿಗಳು ಕಳಪೆಯಾಗುವುದಿಲ್ಲ ಎಂದರು.

    ಸದ್ಯದ ಬಸ್ ನಿಲ್ದಾಣ ಕಟ್ಟಡವನ್ನು ಯಾಥಾಸ್ಥಿತಿಯಲ್ಲಿ ಉಳಿಸಿಕೊಂಡು ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಹೊಸ ಕಟ್ಟಡವನ್ನು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸಾರಿಗೆ ಇಲಾಖೆಯೇ ಕಾಮಗಾರಿ ನಿರ್ವಹಿಸಲಿದೆ ಎಂದರು.

    ಮಾಜಿ ಶಾಸಕ ಹಸನಸಾಬ್ ದೋಟಿಹಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೀಂದ್ರಪ್ಪ ಬಳೂಟಗಿ, ಮಹಿಳಾ ಕಾಂಗ್ರೆಸ್‌ನ ರಾಜ್ಯ ಕಾರ್ಯದರ್ಶಿ ಭಾರತಿ ನೀರಗೇರಿ, ಪುರಸಭೆ ಸದಸ್ಯರಾದ ನಾಗರಾಜ ಹಿರೇಮಠ, ವಸಂತಪ್ಪ ಮೇಲಿನಮನಿ, ಮಾಜಿ ಸದಸ್ಯ ಉಮೇಶ ಮಂಗಳೂರು, ಪ್ರಮುಖರಾದ ಎಸ್.ಎಚ್.ಹಿರೇಮಠ, ಸಾರಿಗೆ ಇಲಾಖೆಯ ಡಿಸಿ ಎಂ.ಎಂ.ಮುಲ್ಲಾ, ಘಟಕ ವ್ಯವಸ್ಥಾಪಕ ಸಂತೋಷಕುಮಾರ ಶೆಟ್ಟಿ, ಎಇಇ ವಸಂತ, ಸಾರಿಗೆ ನಿಯಂತ್ರಕ ಖಾಸೀಂಸಾಬ್ ಕಾಯಿಗಡ್ಡಿ ಇತರರು ಇದ್ದರು.

    24x7 ನೀರು ಪೂರೈಕೆಗೆ ಕ್ರಮ ಕರೊನಾ ಎಮರ್ಜೆನ್ಸಿ ಮಧ್ಯೆಯೂ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಪಟ್ಟಣದಲ್ಲಿ ಕೆಲವೇ ವಾರ್ಡ್‌ಗಳಿಗೆ 24x7 ಯೋಜನೆ ಅಡಿ ನೀರು ಪೂರೈಸಲಾಗುತ್ತಿದೆ. ಯೋಜನೆಯನ್ನು ಎಲ್ಲ ವಾರ್ಡ್‌ಗಳಿಗೆ ವಿಸ್ತರಿಸಲಾಗುತ್ತಿದೆ. ಇದಕ್ಕಾಗಿ 44 ಕೋಟಿ ರೂ. ತಾಂತ್ರಿಕ ಮಂಜೂರಾತಿ ದೊರೆತಿದೆ. ಒಳಚರಂಡಿ ವ್ಯವಸ್ಥೆಗೂ ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಬಯ್ಯಪುರ ಸುದ್ದಿಗಾರರಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts