More

    ಏಕರೂಪ ದರ ನಿಗದಿಪಡಿಸಿ

    ಕುಷ್ಟಗಿ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ವಿಜಯಪುರ ಹಾಗೂ ಬಾಗಲಕೋಟೆಯಲ್ಲಿ ರೈತರಿಗೆ ನೀಡಿದ ಭೂ ಪರಿಹಾರ ಮೊತ್ತವನ್ನು ನಮಗೂ ನೀಡಬೇಕು ಎಂದು ಯೋಜನೆಯ ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ ಅಬೀದ್ ಗದ್ಯಾಳಗೆ ಕೃಷಿಕರು ಆಗ್ರಹಿಸಿದರು.

    ತಾಲೂಕಿನ ಚಿಕ್ಕನಂದಿಹಾಳ ಕ್ರಾಸ್‌ನ ಖಾಸಗಿ ಕಟ್ಟಡವೊಂದರಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಖುಷ್ಕಿ ಜಮೀನುಗಳಿಗೆ ಎಕರೆಗೆ 20ಲಕ್ಷ ರೂ. ಹಾಗೂ ನೀರಾವರಿ ಜಮೀನು ಇದ್ದಲ್ಲಿ ಎಕರೆಗೆ 25 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಕೊಪ್ಪಳ ಜಿಲ್ಲೆಯಲ್ಲಿ ಕಂದಾಯ ಇಲಾಖೆ ನಿಗದಿಪಡಿಸಿದ ದರ ಆಧರಿಸಿ ಕೊಡಲಾಗುತ್ತಿದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಏಕರೂಪ ದರ ನಿಗದಿಗೊಳಿಸುವುದಾಗಿ ಸರ್ಕಾರ ಹೇಳಿದೆ. ಅದರಂತೆ ನೀಡುವಂತೆ ರೈತರು ಒತ್ತಾಯಿಸಿದರು. ಏಕರೂಪ ದರ ನಿಗದಿ ಕುರಿತು ಸರ್ಕಾರ ಅಧಿಕೃತ ಆದೇಶ ಹೊರಡಿಸಿಲ್ಲ. ಹೊರಡಿಸಿದರೆ ನೀಡಲಾಗುವುದು ಎಂದು ಭೂಸ್ವಾಧೀನಾಧಿಕಾರಿ ಅಬೀದ್ ತಿಳಿಸಿದರು.

    ಭೂಸ್ವಾಧೀನಪಡಿಸಿಕೊಂಡು ಮೂರು ವರ್ಷ ಗತಿಸಿದರೂ ಪರಿಹಾರ ನೀಡಿಲ್ಲ ಎಂದು ರೈತರು ಅಲವತ್ತುಕೊಂಡರು. ಆರಂಭದಲ್ಲಿ ಬೆಳೆ ಆಧರಿಸಿ ಬೆಳೆ ಪರಿಹಾರ ನೀಡಲಾಗಿದೆ. ಕರೊನಾ ತೀವ್ರತೆ ಹೆಚ್ಚಿ 2 ವರ್ಷ ಯಾವುದೇ ಚಟುವಟಿಕೆ ನಡೆಯಲಿಲ್ಲ. ಹೀಗಾಗಿ ಜಮೀನಿಗೆ ಸಂಬಂಧಿಸಿದ ಪರಿಹಾರ ನೀಡಲು ವಿಳಂಬವಾಗಿದೆ. ಆದ್ದರಿಂದ ಪರಿಹಾರ ಘೋಷಣೆಯಾದ ದಿನಾಂಕದಿಂದ ಶೇ.12 ಬಡ್ಡಿ ಸೇರಿಸಿ ಹಣ ನೀಡಲಾಗುತ್ತದೆ ಎಂದು ಅಬೀದ್ ಪ್ರತಿಕ್ರಿಯಿಸಿದರು. ಈ ಭಾಗದಲ್ಲಿ ಒಂದೇ ಪಹಣಿಯಲ್ಲಿ 10ಕ್ಕಿಂತ ಹೆಚ್ಚು ರೈತರ ಹೆಸರುಗಳು ಇರುವುದರಿಂದ ಅಂತಹವರಿಗೆ ಪರಿಹಾರ ನೀಡುವುದು ಸಮಸ್ಯೆಯಾಗಿದೆ. ವಿಭಾಗ ಮಾಡಿಸಿ ಪ್ರತ್ಯೇಕ ಪಹಣಿ ಮಾಡಿಸಿದರೆ ಪರಿಶೀಲಿಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಭೂಸ್ವಾಧೀನವಾದರೂ ಪಟ್ಟಿಯಿಂದ ಹೆಸರು ಕೈಬಿಟ್ಟಿದ್ದರೆ ಅಂತಹ ರೈತರು ಸಂಬಂಧಿಸಿದ ಇಂಜಿನಿಯರ್‌ಗಳಿಗೆ ಮಾಹಿತಿ ನೀಡಿದರೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅಬೀದ್ ಗುದ್ಯಾಳ ತಿಳಿಸಿದರು.

    ಕೃಷ್ಣಾ ಭಾಗ್ಯ ಜಲನಿಗಮದ ಇಇ ತಂಬಿದೊರೆ, ಎಇಇ ಚನ್ನಪ್ಪ, ಪಿಎಸ್‌ಐ ಮೌನೇಶ ರಾಠೋಡ್ ಇತರ ಅಧಿಕಾರಿಗಳು ಇದ್ದರು. ತಾಲೂಕಿನ ಹಿರೇನಂದಿಹಾಳ, ಚಿಕ್ಕನಂದಿಹಾಳ, ಯಲಬುರ್ತಿ, ಶಾಖಾಪುರ, ಪರಸಾಪುರ ಕೊರಡಕೇರಾ, ಕಲಾಲಬಂಡಿ ಇತರ ಗ್ರಾಮಗಳ ರೈತರು ಪಾಲ್ಗೊಂಡಿದ್ದರು.

    ಕೊಪ್ಪಳ ರೈತರು ಒಳ್ಳೆಯವರು: ನೀರಾವರಿ ಯೋಜನೆ ಅನುಷ್ಠಾನಕ್ಕೆ ರೈತರು ಸಹಕರಿಸಬೇಕು. ನೀರಾವರಿ ನಂತರ ಜಮೀನುಗಳಿಗೆ ಭಾರಿ ಬೇಡಿಕೆ ಉಂಟಾಗಿ ಕೃಷಿಕರ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಒಳಪಡುವ ವಿವಿಧ ಜಿಲ್ಲೆಯ ರೈತರಿಗೆ ಹೋಲಿಸಿದರೆ ಕೊಪ್ಪಳ ಜಿಲ್ಲೆಯ ಕೃಷಿಕರು ಒಳ್ಳೆಯವರಾಗಿದ್ದಾರೆ. ಕಾಮಗಾರಿಗೆ ಸಹಕರಿಸುತ್ತಿದ್ದಾರೆ. ಈ ವಿಚಾರ ಸಚಿವರ ಹಂತದ ಸಭೆಗಳಲ್ಲಿಯೂ ಪ್ರಸ್ತಾಪವಾಗಿದೆ ಎಂದು ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ ಅಬೀದ್ ಗುದ್ಯಾಳ ಹೊಗಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts