More

    ಇಲಾಖೆ ಹೊಲಸು ಇದ್ದರೆ ಅದನ್ನು ಸರಿಪಡಿಸಲಿ

    ತಾಪಂ ಸದಸ್ಯರ ಹೇಳಿಕೆಗೆ ಅಂಗನವಾಡಿ ನೌಕರರ ಖಂಡನೆ

    ಅವಮಾನಿಸುವುದು ಸರಿಯಲ್ಲ ಎಂದ ಸಂಘದ ತಾಲೂಕು ಅಧ್ಯಕ್ಷೆ ಕಲಾವತಿ ಮೇಣೆಧಾಳ

    ಕುಷ್ಟಗಿ: ಇಲಾಖೆ ಹೊಲಸು ಇದ್ದರೆ ಸರಿಪಡಿಸಲಿ ಅದಕ್ಕಾಗಿ ಕಾರ್ಯಕರ್ತೆಯರನ್ನು ಅವಮಾನಿಸುವುದು ಸರಿಯಲ್ಲ ಎಂದು ಇತ್ತೀಚೆಗೆ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ತಾಪಂ ಸದಸ್ಯರ ಹೇಳಿಕೆಗೆ ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಕಲಾವತಿ ಮೇಣೆಧಾಳ ಅಸಮಾಧಾನ ವ್ಯಕ್ತಪಡಿಸಿದರು.

    ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆ ತಯಾರಿಸುವುದಿಲ್ಲ ಎಂದಾದರೆ ಸಾರ್ವಜನಿಕರು ಇಲಾಖೆಗೆ ದೂರಬೇಕಾಗಿತ್ತು. ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ ತಿನ್ನಲು ಯೋಗ್ಯವಿಲ್ಲದ ಕಾರಣ ದನಗಳಿಗೆ ಹಾಕಲಾಗುತ್ತಿದೆ. ಹೀಗಿರುವಾಗ ಕಿರಾಣಿ ಅಂಗಡಿಗಳಲ್ಲಿ ಮಾರಾಟ ಮಾಡಿದರೆ ಯಾರು ಖರೀದಿಸುತ್ತಾರೆ? ವ್ಯಾನಿಟಿ ಬ್ಯಾಗ್ ಎಲ್ಲ ಇಲಾಖೆಯ ನೌಕರರೂ ಕೊಂಡೊಯ್ಯುತ್ತಾರೆ.

    ಹಾಗೆಂದ ಮಾತ್ರಕ್ಕೆ ಅವರೆಲ್ಲರೂ ಇಲಾಖೆಗೆ ಪೂರೈಕೆಯಾಗುವ ವಸ್ತುಗಳ ಸಾಗಣೆ ಮಾಡುತ್ತಾರೆಯೇ? ದೂಷಣೆ ಮಾಡುವ ಬದಲು ಆಹಾರ ಘಟಕಕ್ಕೆ ತೆರಳಿ ಗುಣಮಟ್ಟದ ಆಹಾರ ತಯಾರಿಕೆಗೆ ತಾಕೀತು ಮಾಡಬೇಕು. ಕೇಂದ್ರಗಳ ದುಸ್ಥಿತಿ ಬಗ್ಗೆ ಚರ್ಚಿಸಬೇಕು. ಅಲ್ಪ ಗೌರವ ಧನ ಪಡೆದು ಸರ್ಕಾರದ ಎಲ್ಲ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಶ್ರಮಿಸುವ ನೌಕರರ ಮೇಲೆ ಈ ರೀತಿ ಆರೋಪಿಸುವುದು ಸರಿ ಅಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರಿಸಿದರು.

    ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ ಬಿಡುಗಡೆಯಾಗುವ ಅನುದಾನ ದುರುಪಯೋಗ ಬಗ್ಗೆಯೂ ಗೊತ್ತಿದೆ. ಆ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಪ್ರತಿ ಕೇಂದ್ರಗಳಲ್ಲಿ ಫ್ಯಾನ್ ಅಳವಡಿಸಿ ಮೂರು ವರ್ಷವಾದರೂ ನಿರುಪಯುಕ್ತವಾಗಿವೆ. ಶುದ್ಧ ನೀರು ಪೂರೈಕೆಯೂ ಇಲ್ಲ. ಗೋಡೆ ಬರಹಕ್ಕೆ ತಲಾ ಕೇಂದ್ರಕ್ಕೆ 10ಸಾವಿರದಂತೆ ಬಿಡುಗಡೆಯಾದರೂ ಎಲ್ಲಿಯೂ ಬರಹ ಕಾಣಸಿಗುತ್ತಿಲ್ಲ. ಕೇಂದ್ರಗಳ ನಿರ್ವಹಣೆಗೆ ಗ್ರಾಪಂಗಳಿಗೆ ಸಾಕಷ್ಟು ಅನುದಾನ ಬಿಡುಗಡೆಯಾದರೂ ಮೂಲಸೌಕರ್ಯ ವಂಚಿತವಾಗಿಯೇ ಇವೆ. ಇಷ್ಟೆಲ್ಲ ಹುಳುಕುಗಳನ್ನು ತಮ್ಮಲ್ಲಿ ಇಟ್ಟುಕೊಂಡು ಬೇರೊಬ್ಬರ ಬಗ್ಗೆ ಮಾತನಾಡುವುದು ಸರಿಯಲ್ಲ. ಮುಂದೆಯೂ ಇಂತಹ ಹೇಳಿಕೆ ನೀಡಿದರೆ ತಾಲೂಕಿನ ಎಲ್ಲ ಅಂಗನವಾಡಿ ನೌಕರರೊಂದಿಗೆ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಸಿಐಟಿಯುನ ಪದಾಧಿಕಾರಿಗಳಾದ ದೊಡ್ಡನಗೌಡ, ಹನುಮಂತ ಸಿಡ್ಲಬಾವಿ, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಉಮಾ ಅಂಗಡಿ, ತಾಲೂಕಿನ ವಿವಿಧ ವಲಯಗಳ ಪ್ರತಿನಿಧಿಗಳಾದ ಶಾರದಾ ಹುಲಸಗೇರಾ, ಗೀತಾ ಕುಷ್ಟಗಿ, ಪಾರ್ವತಿ ಕಲ್ಲುಗೋನಾಳ, ರೇಣುಕಾ ಮನ್ನೇರಾಳ, ಅನ್ನಪೂರ್ಣ ಗುಡಿ, ನಾಗರತ್ನ ಮಿಯಾಪುರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts