More

    ಅಮೃತ ಸರೋವರದ ಕೆರೆ ಪ್ರವೇಶದ್ವಾರಕ್ಕಿಲ್ಲ ಗೇಟ್: ಅಪಾಯಕ್ಕೆ ಆಹ್ವಾನ

    ಕುಷ್ಟಗಿ: ತಾಲೂಕಿನ ಮಾದಾಪುರದಲ್ಲಿ ಅಮೃತ ಸರೋವರ ಯೋಜನೆಯಡಿ ನಿರ್ಮಿಸಿರುವ ಕೆರೆಯ ಪ್ರವೇಶದ್ವಾರಕ್ಕೆ ಗೇಟ್ ಅಳವಡಿಸದಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.

    ಆಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮೊದಲ ಹಂತಕ್ಕೆ ಆಯ್ಕೆಯಾಗಿದ್ದ ಮಾದಾಪುರ ಕೆರೆ ಕಾಮಗಾರಿಯನ್ನು ಆ.15ರೊಳಗೆ ಪೂರ್ಣಗೊಳಿಸಿ ಸ್ವಾತಂತ್ರ್ಯ ದಿನಾಚರಣೆಯಂದು ಅಲ್ಲಿಯೇ ಧ್ವಜಾರೋಹಣ ನೆರವೇರಿಸಲಾಗಿತ್ತು. ಗೇಟ್ ಅಳವಡಿಕೆ ಹಾಗೂ ಸಣ್ಣ ಪುಟ್ಟ ಕಾಮಗಾರಿಗಳನ್ನು ನಂತರದಲ್ಲಿ ಪೂರ್ಣಗೊಳಿಸಲು ನಿರ್ಧರಿಸಿದ್ದ ಅಧಿಕಾರಿಗಳು, ಕೆರೆ ಉದ್ಘಾಟನೆಗೊಂಡು ಎರಡೂವರೆ ತಿಂಗಳಾದರೂ ಬಾಕಿ ಕಾರ್ಯ ಕೈಗೊಂಡಿಲ್ಲ.

    ಗ್ರಾಮಕ್ಕೆ ಹತ್ತಿರದಲ್ಲಿ ಹಾಗೂ ಜೆ.ರಾಂಪುರ ಸಂಪರ್ಕಿಸುವ ಮುಖ್ಯರಸ್ತೆಗೆ ಹೊಂದಿಕೊಂಡು ಕೆರೆ ನಿರ್ಮಿಸಲಾಗಿದೆ. ರೈತರು ವಿವಿಧ ಜಮೀನುಗಳಿಗೆ ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಬಹುತೇಕ ರೈತರು ತಮ್ಮೊಟ್ಟಿಗೆ ಮಕ್ಕಳನ್ನೂ ಕರೆದೊಯ್ಯುವುದು ಸಾಮಾನ್ಯವಾಗಿರುವುದರಿಂದ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಹಳ್ಳ-ಕೊಳ್ಳಗಳು ಭರ್ತಿಯಾಗಿವೆ. ಕೆರೆಯಲ್ಲಿ ಮಕ್ಕಳು ಬಿದ್ದು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಅವಘಡ ಸಂಭವಿಸುವ ಮುನ್ನವೇ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಮಾದಾಪುರ ಕೆರೆಯ ಪ್ರವೇಶದ್ವಾರಕ್ಕೆ ಗೇಟ್ ಅಳವಡಿಸುವ ಕಾಮಗಾರಿ ಬಾಕಿ ಇದೆ. ಇತ್ತೀಚೆಗೆ ನಿರಂತರ ಮಳೆಯಾಗಿದ್ದರಿಂದ ಕೆಲಸ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
    | ಶಿವಪ್ಪ ಸುಬೇದಾರ್, ತಾಪಂ ಇಒ, ಕುಷ್ಟಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts