More

    ಪ್ರತಿಯೊಬ್ಬರೂ ಪ್ರವಾದಿಯ ಸಂದೇಶ ಅಳವಡಿಸಿಕೊಳ್ಳಿ

    ಕುಶಾಲನಗರ: ಪಟ್ಟಣದ ಶಾದಿ ಮಹಲ್‌ನಲ್ಲಿ ದಾರುಲ್ ಮದರಸ ಹಾಗೂ ಹಿಲಾಲ್ ಮಸೀದಿ ಆಡಳಿತ ಮಂಡಳಿ ಸಂಯುಕ್ತಾಶ್ರಯದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್ ಜನ್ಮದಿನದ ಪ್ರಯುಕ್ತ ಅದ್ದೂರಿಯಾಗಿ ಈದ್ ಮಿಲಾದ್ ಆಚರಿಸಲಾಯಿತು.

    ಹಿಲಾಲ್ ಮಸೀದಿಯ ಖತೀಬರಾದ ನಾಸರ್ ಫೈಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ ಶಾಂತಿ, ಸಹೋದರತೆ ಸಂದೇಶವನ್ನು ಸಾರಿದ್ದಾರೆ. ಸಮಾಜದಲ್ಲಿ ವರ್ಣಭೇದ ನೀತಿ ಹಾಗೂ ಇನ್ನಿತರ ಕೆಟ್ಟ ಪದ್ಧತಿ ಜಾರಿಯಲ್ಲಿದ್ದ ಕಾಲಘಟ್ಟದಲ್ಲಿ ಶಾಂತಿ ಪಸರಿಸಿದ್ದರು. ಪ್ರವಾದಿಯ ಜೀವನ ಸಂದೇಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಮುಖ್ಯ ಅತಿಥಿಯಾಗಿದ್ದ ಡಿವೈಎಸ್ಪಿ ಗಂಗಾಧರಪ್ಪ ಮಾತನಾಡಿ, ಪ್ರತಿಯೊಂದು ಧರ್ಮವೂ ಶಾಂತಿಯನ್ನು ಸಾರುತ್ತದೆ. ಕುಶಾಲನಗರದಲ್ಲಿ ಪ್ರತಿಯೊಂದು ಧರ್ಮದವರು ಪರಸ್ಪರ ಸಹೋದರರಂತೆ ಜೀವನ ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಅಧ್ಯಕ್ಷತೆ ವಹಿಸಿದ್ದ ಹಿಲಾಲ್ ಮಸೀದಿ ಅಧ್ಯಕ್ಷ ಎಂ.ಎಂ.ಹುಸೇನ್ ಮಾತನಾಡಿ, ಸರ್ವಧರ್ಮವೂ ಶಾಂತಿಯನ್ನು ಸಾರುತ್ತದೆ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

    ಮುಖ್ಯ ಭಾಷಣಕಾರ ದಾರುಲ್ ಉಲೂಂ ಮದ್ರಸದ ಪ್ರಾಂಶುಪಾಲ ತಮ್ಲೀಕ್ ದಾರಿಮಿ ಅವರು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ ಚರಿತ್ರೆ ಬಗ್ಗೆ ಭಾಷಣ ಮಾಡಿದರು. ಜಾಮಿಯಾ ಮಸೀದಿ ಮಾಜಿ ಅಧ್ಯಕ್ಷ ಮುಜೀಬುರ್ರಹಮಾನ್, ಹಿಲಾಲ್ ಮಸೀದಿ ಮಾಜಿ ಅಧ್ಯಕ್ಷ ಸಲೀಂ ಹಾಜಿ ಮಾತನಾಡಿದರು. ದಾರುಲ್ ಉಲೂಂ ಮದರಸದ 1ರಿಂದ 12 ನೇ ತರಗತಿವರೆಗಿನ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

    ಅಲ್ ಅಮೀಮ್ ಜಿಲ್ಲಾಧ್ಯಕ್ಷ ಬಿ.ಎಚ್.ಅಹಮದ್, ಹಿಲಾಲ್ ಮಸೀದಿ ಉಪಾಧ್ಯಕ್ಷ ಹಂಸ, ತಾಲೂಕು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಕರೀಂ, ಗೊಂದಿ ಬಸವನಹಳ್ಳಿ ಮದರಸ ಕಾರ್ಯದರ್ಶಿ ಹಮೀದ್, ಮಾದಾಪಟ್ಟಣ ಮದರಸ ಅಧ್ಯಕ್ಷ ಶರ್ಫುದ್ದೀನ್, ಫಾಳಿಲಾ ಶರೀಅತ್ ಕಾಲೇಜಿನ ವ್ಯವಸ್ಥಾಪಕ ಅಬ್ದುಲ್ಲಾ, ಮಹಮ್ಮದ್ ಅಲಿ, ಕೂಡುಮಂಗಳೂರು ಗ್ರಾಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ದಾರುಲ್ ಉಲೂಂ ಮದರಸದ ಶಿಕ್ಷಕ ವೃಂದ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts