More

    ಬೆಳೆ ರಕ್ಷಣೆಗೆ ಟ್ಯಾಂಕರ್ ನೀರು

    ಕುರುಗೋಡು: ಮಳೆ ಕೊರತೆ ಹಾಗೂ ಎಚ್‌ಎಲ್ ಕಾಲುವೆಗಳಿಗೆ ನೀರು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ತಾಲೂಕಿನ ಕೆಲ ರೈತರು ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ.

    ತಾಲೂಕಿನಲ್ಲಿ ಮೆಣಸಿನಕಾಯಿ, ಜೋಳ, ಮೆಕ್ಕೆಜೋಳ, ಭತ್ತ ಸೇರಿ ವಿವಿಧ ಬೆಳೆಗಳು ಕಟಾವು ಹಂತಕ್ಕೆ ಬಂದಿರುವ ಸಮಯದಲ್ಲಿ ಕಾಲುವೆಗೆ ನೀರು ಸ್ಥಗಿತಗೊಂಡಿದ್ದು, ಬೆಳೆಗಳು ಒಣಗುತ್ತಿವೆ. ಹೀಗಾಗಿ ಟ್ಯಾಂಕರ್ ನೀರು ಉಣಿಸುತ್ತಿದ್ದಾರೆ.

    ತಾಲೂಕಿನ ಜ್ವಾಲಬೆಂಚಿ ಗ್ರಾಮದ ರೈತ ಪಾಲಾಕ್ಷಿ 4 ಎಕರೆಯಲ್ಲಿ ಮೆಣಿಸಿನಕಾಯಿ ಬಿತ್ತನೆ ಮಾಡಿದ್ದು, ಈಗ ಗಿಡಗಳಲ್ಲಿ ಕಾಯಿಗಳು ಬಿಡುತ್ತಿವೆ. ಆದರೆ, ನೀರಿಲ್ಲದೆ ಬೆಳೆ ಒಣಗುತ್ತಿರುವ ಹಿನ್ನೆಲೆಯಲ್ಲಿ ಬಾಡಿಗೆ ರೂಪದಲ್ಲಿ ಟ್ರಾೃಕ್ಟರ್ ಟ್ಯಾಂಕರ್ ನೀರು ಪಡೆದು ಬೆಳೆಗಳಿಗೆ ಸಿಂಪಡಿಸುತ್ತಿದ್ದಾರೆ. ನೀರಿನ ಟ್ಯಾಂಕರ್ ಒಂದು ದಿನದ ಬಾಡಿಗೆ 4 ಸಾವಿರ ರೂ. ಪಾವತಿಸುತ್ತಿದ್ದಾರೆ.

    ಒಂದು ಟ್ರಿಪ್ ನೀರು ತುಂಬಿಸಿಕೊಂಡು ಬರುವುದಕ್ಕೆ 100 ರೂ. ವೆಚ್ಚ ಭರಿಸುತ್ತಿದ್ದು, 1 ಎಕರೆಗೆ 30 ರಿಂದ 40 ಟ್ಯಾಂಕರ್ ನೀರು ಹರಿಸುತ್ತಿದ್ದಾರೆ. ಒಂದು ಎಕರೆಗೆ ಟ್ರ್ಯಾಕ್ಟರ್ ಬಾಡಿಗೆ, ಡೀಸೆಲ್, ಕೂಲಿ ಕಾರ್ಮಿಕ ಕೂಲಿ ಸೇರಿ ಒಟ್ಟು 8 ರಿಂದ 10 ಸಾವಿರ ರೂ. ಖರ್ಚು ಮಾಡಿ ಬೆಳೆ ಉಳಿಸಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಇನ್ನೂ ಕೆಲ ರೈತರು ಬಾವಿ ಹಾಗೂ ಬೋರ್‌ವೆಲ್ ನೀರು ಪಡೆದು ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

    ನಾಲ್ಕು ಎಕರೆಯಲ್ಲಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದೇನೆ. ಕಾಲುವೆಗೆ ನೀರು ಸ್ಥಗಿತಗೊಂಡಿದ್ದರಿಂದ ಬೆಳೆಗಳು ಒಣಗುತ್ತಿವೆ. ಆದ್ದರಿಂದ ಟ್ರ್ಯಾಕ್ಟರ್ ಟ್ಯಾಂಕರ್‌ನಿಂದ ನೀರುಣಿಸಲಾಗುತ್ತಿದೆ. ನಾಲೆಗೆ ನೀರು ಬಿಡುತ್ತಾರೆ ಎನ್ನಲಾಗಿದ್ದು, ನೋಡಬೇಕು.
    | ಪಾಲಾಕ್ಷಿ
    ಮೆಣಸಿನಕಾಯಿ ಬೆಳೆಗಾರ, ಜ್ವಾಲಬೆಂಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts