More

    ಬ್ಯಾಂಕ್ ಕೆಲಸ ತೊರೆದು ಕೃಷಿಯಲ್ಲಿ ಗೆದ್ದ ತರುಣ

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಇಲ್ಲೊಬ್ಬ ತರುಣ ಉತ್ತಮ ಆದಾಯವಿದ್ದ ಬ್ಯಾಂಕ್ ಉದ್ಯೋಗ ಮತ್ತು ನಗರ ಜೀವನವನ್ನು ತೊರೆದು ಊರಿಗೆ ಮರಳಿದ್ದಾರೆ. ಮಾತ್ರವಲ್ಲ, ತನ್ನ ವಾರ್ಷಿಕ ಆದಾಯವನ್ನು ಸುಮಾರು ನಾಲ್ಕು ಪಟ್ಟು ಹೆಚ್ಚಿಸಿಕೊಂಡಿದ್ದಾರೆ!

    ಬೆಂಗಳೂರಿನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕಿನ ಬ್ಯಾಕ್ ಆಫೀಸ್ ಪ್ರಾಜೆಕ್ಟ್ ಇನ್‌ಚಾರ್ಜ್ ಆಗಿದ್ದ ಮಂಗಳೂರು ಕುಪ್ಪೆಪದವು ನಿವಾಸಿ 34 ವರ್ಷದ ಸದಾಶಿವ ಅವರು ಮೂರೂವರೆ ವರ್ಷ ಹಿಂದೆ ಕೆಲಸಕ್ಕೆ ರಾಜೀನಾಮೆ ನೀಡಿ, ‘ಕೃಷಿ ಮಾಡುತ್ತೇನೆ’ ಎಂದು ಊರಿಗೆ ಮರಳಿದಾಗ ‘ಇವರಿಗೆ ಹುಚ್ಚು’ ಎಂದವರೇ ಹೆಚ್ಚು.

    ನರೇಗಾವೇ ಬಂಡವಾಳ: ಊರಿಗೆ ಮರಳಿದ ಸದಾಶಿವ, ಕುಟುಂಬದಲ್ಲಿ ತನ್ನ ಪಾಲಿನ ಐದು ಎಕರೆ ಜಮೀನಿನಲ್ಲಿ ಕೈಗೊಳ್ಳಬಹುದಾದ ಕೃಷಿ ಕಾರ್ಯಗಳ ಬಗ್ಗೆ ಅಧ್ಯಯನ ನಡೆಸಿ ಏನು ಮಾಡಬಹುದು ಎಂಬುದನ್ನು ನಿರ್ಧರಿಸಿದರು. ಉದ್ಯೋಗ ಚೀಟಿ ಪಡೆದು ತಮ್ಮ ಹೊಲದಲ್ಲಿ ದುಡಿದು ಸರ್ಕಾರದಿಂದ ತಾವೇ ವೇತನ ಪಡೆಯಲು ಅವಕಾಶವಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅವರನ್ನು ವಿಶೇಷವಾಗಿ ಆಕರ್ಷಿಸಿತು.

    ಅಪ್ಪ, ಅಮ್ಮ ಮತ್ತು ಸಹೋದರನ ಜತೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ಚೀಟಿ ಪಡೆದ ಸದಾಶಿವ ವಿಸ್ತಾರವಾದ ಕೋಳಿ ಫಾರ್ಮ್ ಕಟ್ಟಡ ನಿರ್ಮಿಸಿದ್ದಾರೆ. ಈ ಕಟ್ಟಡದಲ್ಲಿ ಮಾಸಿಕ ನಿಶ್ಚಿತ ಆದಾಯದ ಖಾತರಿ ಇರುವ ಖಾಸಗಿ ಕಂಪನಿಗಳ 3200 ಮಾಂಸದ ಕೋಳಿಗಳನ್ನು ಸಾಕುತ್ತಿದ್ದಾರೆ. ಗೂಡು ನಿರ್ಮಿಸಿ ಒಳ್ಳೆಯ ತೂಕ ತರುವ ಪಂಜಾಬ್‌ನ ಬೀಟಲ್, ರಾಜಸ್ಥಾನದ ಶಿರೋಹಿ ತಳಿಯ ಆಡುಗಳನ್ನು ಸಾಕತೊಡಗಿದ್ದಾರೆ. ಜತೆಗೆ ಜೇನು ಸಾಕಾಣೆ, ಪಶುಸಂಗೋಪನೆಯಲ್ಲೂ ತೊಡಗಿದ್ದಾರೆ. ನರೇಗಾದಲ್ಲೇ 100 ಗುಂಡಿ ತೋಡಿ ಗೆಂದಾಳಿ ತೆಂಗಿನಗಿಡ ನೆಟ್ಟಿದ್ದಾರೆ. ಸದಾಶಿವ ಅವರ ಈ ಕೆಲಸಕ್ಕೆ ಅವರ ಇಡೀ ಕುಟುಂಬ ಸಾಥ್ ನೀಡಿದೆ.

    ಯುವಕರಿಗೆ ಪ್ರೇರಣೆ: ವಿದೇಶ ಹಾಗೂ ಹೊರರಾಜ್ಯಗಳಲ್ಲಿ ಉದ್ಯೋಗ ಸಲುವಾಗಿ ನೆಲೆಸಿರುವ ಗಮನಾರ್ಹ ಸಂಖ್ಯೆಯ ಯುವಜನರು ಲಾಕ್‌ಡೌನ್ ಬಳಿಕ ಊರಿನಲ್ಲಿ ವ್ಯವಸಾಯ ಮಾಡಲು ಮುಂದಾಗಿರುವ ಸಂದರ್ಭ ಅನೇಕರು ಸದಾಶಿವ ಅವರ ಫಾರ್ಮ್‌ಗೆ ಭೇಟಿ ನೀಡುತ್ತಿದ್ದು, ಸಲಹೆ, ಮಾರ್ಗದರ್ಶನ ಪಡೆಯುತ್ತಿದ್ದಾರೆ. ಸದ್ಯ ಮಾಂಸದ ಕೋಳಿ ಜತೆಗೆ ನಾಟಿ ಕೋಳಿ ಫಾರ್ಮ್ ಆರಂಭಿಸಲು ಸದಾಶಿವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೋಳಿ ಮೊಟ್ಟೆಗಳಿಂದ ಮರಿ ಪಡೆಯುವ ಸರಳ ವ್ಯವಸ್ಥೆಯೊದನ್ನು ಅವರೇ ನಿರ್ಮಿಸಿಕೊಂಡಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯಲ್ಲೇ ಬಚ್ಚಲು ಗುಂಡಿ, ದನದ ಹಟ್ಟಿ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದಾರೆ.

    ಮೊದಲು ಇರುವ ಕೆಲಸ ಬಿಟ್ಟು ತಪ್ಪು ಮಾಡಿದೆ ಎಂದವರೇ ಈಗ ‘ನೀನು ಸರಿಯಾದ ಕೆಲಸವನ್ನೇ ಮಾಡಿದ್ದೀಯ’ ಎಂದು ಬೆನ್ನು ತಟ್ಟುತ್ತಿದ್ದಾರೆ. ಹಿಂದೆ ಇದ್ದ ಕೆಲಸದಲ್ಲಿ ಒಂದು ಜೀವನ ಮಾರ್ಗ ಇತ್ತು. ಆದರೆ ಕೃಷಿ ಅಗಾಧ ಅವಕಾಶಗಳನ್ನು ಒಳಗೊಂಡಿದೆ. ಇಲ್ಲಿ ಸಾಧಿಸಲು ತುಂಬಾ ಇದೆ.
    -ಸದಾಶಿವ ಕುಪ್ಪೆಪದವು, ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts