More

    ನೀರಾವರಿ, ವಿದ್ಯುತ್ ಯೋಜನೆಗಳ ಅನುಷ್ಠಾನಕ್ಕೆ ಬದ್ಧ ; ಸಂಸದ ಡಿ.ಕೆ.ಸುರೇಶ್ ಹೇಳಿಕೆ ; ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ

    ಕುಣಿಗಲ್ : ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹಾಗೂ ರೈತರ, ಜನರ ಜೀವನಮಟ್ಟ ಸುಧಾರಣೆಗೆ ಕೈಗೆತ್ತಿಕೊಂಡಿರುವ ನೀರಾವರಿ, ವಿದ್ಯುತ್ ಯೋಜನೆಗಳ ಅನುಷ್ಠಾನಕ್ಕೆ ಹಗಲಿರುಳು ಶ್ರಮಿಸುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

    ಹುತ್ರಿದುರ್ಗ ಹೋಬಳಿ ಕೆಂಪನಹಳ್ಳಿಯಿಂದ ಹುಣಸೆಕುಪ್ಪೆ ಮಾರ್ಗ ಇಪ್ಪಾಡಿ ಗ್ರಾಮದವರೆಗೆ ಸುಮಾರು 4.8 ಕೋಟಿ ರೂ., ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 25 ವರ್ಷಗಳಿಂದ ಎಡೆಯೂರು ಹೋಬಳಿ ಕೆರೆಗಳಿಗೆ ಜೆಡಿಎಸ್, ಬಿಜೆಪಿಗೆ ನೀರು ಹರಿಸಲು ಸಾಧ್ಯವಾಗಿಲ್ಲ. ಈ ಭಾಗದ ನೀರಿನ ಸಮಸ್ಯೆಯು ಕಾಂಗ್ರೆಸ್ ಶಾಸಕ ಡಾ.ಎಚ್.ಡಿ.ರಂಗನಾಥ್ ಅವರ ಇಚ್ಚಾಶಕ್ತಿಯಿಂದ ಬಗೆಹರಿದಿದೆ ಎಂದರು.

    ಕೆಂಪೇಗೌಡ ಸ್ಮಾರಕ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 30 ಕೋಟಿ ರೂಪಾಯಿಗೂ ಹೆಚ್ಚಿನ ಅನುದಾನದಲ್ಲಿ ಹುತ್ರಿದುರ್ಗ ಬೆಟ್ಟದ ಅಭಿವೃದ್ಧಿ ಕೈಗೊಳ್ಳಲಾಗಿದೆ. ಡಿ.ಕೆ.ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ ಮಂಜೂರು ಮಾಡಿದ್ದ 400 ಮೆಗಾ ವ್ಯಾಟ್ ವಿದ್ಯುತ್ ಹುಲಿಯೂರುದುರ್ಗದಲ್ಲಿ ಸ್ವೀಕರಣ ಕೇಂದ್ರ ಶೀಘ್ರದಲ್ಲೆ ಉದ್ಘಾಟನೆಯಾಗಲಿದ್ದು, ಇದರಿಂದ ತಾಲೂಕಿನ ವಿದ್ಯುತ್ ಸಮಸ್ಯೆ ನಿವಾರಣೆಯಾಗಲಿದೆ. ಕ್ಷೇತ್ರದ ಅಭಿವೃದ್ಧಿಯನ್ನು ಕಂಡು ಬಿಜೆಪಿ, ಜೆಡಿಎಸ್‌ಗೆ ಸಹಿಸಲಾಗುತ್ತಿಲ್ಲ. ಅವರು ಏನೇ ಟೀಕೆ ಮಾಡಿದರೂ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲ್ಲ ಎಂದು ತಿರುಗೇಟು ನೀಡಿದರು.

    ಹುತ್ರಿದುರ್ಗ ಹೋಬಳಿಯಲ್ಲಿ ರಸ್ತೆಗಳ ಅಭಿವೃದ್ಧಿಗೆ ಈವರೆಗೆ 70 ಕೋಟಿ ರೂ., ವೆಚ್ಚ ಮಾಡಲಾಗಿದೆ. ಇನ್ನು 2 ರಸ್ತೆಗಳನ್ನು ಶೀಘ್ರದಲ್ಲೆ ಅಭಿವೃದ್ಧಿಗೊಳಿಸಲು ಕ್ರಮಕೈಗೊಂಡಿದ್ದು, ಎಲ್ಲ ರಸ್ತೆಗಳ ಅಭಿವೃದ್ಧಿ ಮಾಡಿದಂತಾಗಲಿದೆ. ಹುತ್ರಿದುರ್ಗ ಹೋಬಳಿಯ 18ಕೆರೆಗಳಿಗೆ ಹೇಮೆ ನೀರು ಹರಿಸಲು ಶ್ರೀರಂಗ ಏತ ನೀರಾವರಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು ಕೆರೆಗಳಿಗೆ ನೀರು ಹರಿಸುವ ಭರವಸೆ ಈಡೇರಲಿದೆ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಹೇಳಿದರು.

    ಗ್ರಾಪಂ ಅಧ್ಯಕ್ಷೆ ಪ್ರಮೀಳಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಮುಖಂಡರಾದ ಇಪ್ಪಾಡಿವಿಶ್ವನಾಥ್,ಬೇಗೂರು ನಾರಾಯಣ,ಬೋರೆಗೌಡ, ಲೋಕೇಶ್, ಅಂದಾನಿಗೌಡ ಮತ್ತಿತರರು ಉಪಸ್ಥಿತರಿದ್ದರು.

    ಕ್ರೀಡಾಂಗಣಕ್ಕೆ 5 ಕೋಟಿ ರೂ., ಭರವಸೆ : ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಕ್ರೀಡಾ ಸಚಿವ ಕೆ.ನಾರಾಯಣಗೌಡ ಚಾಲನೆ ನೀಡಿದ್ದು, ಈ ಸಂದರ್ಭದಲ್ಲಿ ಸಂಸದ ಡಿ.ಕೆ.ಸುರೇಶ್ ಅವರ ಮನವಿ ಮೇರೆಗೆ ಆಗಮಿಸಿದ್ದಾಗಿ ತಿಳಿಸಿದರು. ಕುಣಿಗಲ್ ಪಟ್ಟಣದ ಕ್ರೀಡಾಂಗಣದ ಅಭಿವೃದ್ಧಿಗೆ 5 ಕೋಟಿ ರೂ., ನೀಡುವುದಾಗಿ ಸಚಿವರು ಭರವಸೆ ಕೊಟ್ಟಿರುವುದಾಗಿ ಸಂಸದ ಸುರೇಶ್ ಪ್ರಕಟಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts