More

    ಮಾರ್ಚ್ ೩೦ ರಿಂದ ಕುಂಡ್ಯೋಳಂಡ ಹಾಕಿ ಹಬ್ಬ

    ಮಡಿಕೇರಿ: ಕೊಡವ ಕುಟುಂಬಗಳ ನಡುವಿನ ಪ್ರತಿಷ್ಠಿತ ಕುಂಡ್ಯೋಳಂಡ ಹಾಕಿ ಹಬ್ಬ ಮಾ.೩೦ ರಿಂದ ಏ.೨೮ ರವರೆಗೆ ನಾಪೋಕ್ಲುವಿನ ಕೆಪಿಎಸ್ ಶಾಲೆಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ತಿಳಿಸಿದರು.


    ದಾಖಲೆಯ ೩೬೦ ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಕೂರ್ಗ್ ೧೧ ಮತ್ತು ಇಂಡಿಯನ್ ನೇವಿ ನಡುವೆ ಉದ್ಘಾಟನಾ ಪಂದ್ಯವನ್ನು ಆಯೋಜಿಸಲಾಗಿದೆ. ೨೪ನೇ ವರ್ಷದ ಹಾಕಿ ಹಬ್ಬವನ್ನು ಕುಂಡ್ಯೋಳಂಡ ಕುಟುಂಬದ ಸಾರಥ್ಯದಲ್ಲಿ ನಡೆಸಲಾಗುತ್ತಿದೆ. ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್, ಹಾಕಿ ಕರ್ನಾಟಕ ಹಾಗೂ ಸ್ಥಳೀಯ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡುತ್ತಿದ್ದು, ಕುಂಡ್ಯೋಳಂಡ ಹಾಕಿ ಕಾರ್ನಿವಲ್ ೨೦೨೪ರ ಅಂತಿಮ ಪಂದ್ಯಾಟವನ್ನು ಸುಮಾರು ೫೦ ಸಾವಿರ ಕ್ರೀಡಾಭಿಮಾನಿಗಳು ವೀಕ್ಷಿಸುವ ನಿರೀಕ್ಷೆ ಇದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.


    ಹಾಕಿ ಹಬ್ಬದೊಂದಿಗೆ ಮ್ಯಾರಥಾನ್ ಓಟ, ವಧುವರರ ಸಮಾವೇಶ, ಆಹಾರ ಉತ್ಸವ, ಆರೋಗ್ಯ ಶಿಬಿರ, ವೃತ್ತಿ ಮಾರ್ಗದರ್ಶನ, ಹಾಕಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಆಟಗಾರರ ಪುನರ್ ಮಿಲನ ಮತ್ತು ಬಾಳೋಪಾಟ್ ತರಬೇತಿ ಮತ್ತಿತರ ಕಾರ್ಯಕ್ರಮಗಳು ಕೂಡ ನಡೆಯಲಿದೆ. ಅನೇಕ ಆಕರ್ಷಕ ಸ್ಟಾಲ್‌ಗಳು ಗಮನ ಸೆಳೆಯಲಿವೆ. ಪ್ರತಿಷ್ಠಿತ ವಿವಿಧ ವಾಹನ ಸಂಸ್ಥೆಗಳು, ಕಾಫಿ ಸಂಸ್ಥೆಗಳು ಸೇರಿದಂತೆ ವೈವಿಧ್ಯಮಯ ಸ್ಟಾಲ್ ಗಳು ಇರಲಿವೆ ಎಂದು ಮಾಹಿತಿ ನೀಡಿದರು.


    ಮಾ.೩೦ ರಂದು ನಡೆಯುವ ಉದ್ಘಾಟನಾ ಪಂದ್ಯ ಕೂರ್ಗ್ ೧೧ ಮತ್ತು ಇಂಡಿಯನ್ ನೇವಿ ನಡುವೆ ನಡೆಯಲಿದೆ. ಕೂರ್ಗ್ ೧೧ ತಂಡದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾರವರು ಆಡುವ ಸಾಧ್ಯತೆಗಳಿದೆ. ಇದಕ್ಕೂ ಮೊದಲು ಸಾಯಿ ಮಡಿಕೇರಿ ಮತ್ತು ಸಾಯಿ ಪೊನ್ನಂಪೇಟೆ ಬಾಲಕಿಯರ ತಂಡಗಳ ನಡುವೆ ಪಂದ್ಯಾಟವನ್ನು ಆಯೋಜಿಸಲಾಗಿದೆ.


    ಕುಂಡ್ಯೋಳಂಡ ಹಾಕಿ ಹಬ್ಬದ ವಿಜೇತ ತಂಡಕ್ಕೆ ರೂ.೪ಲಕ್ಷ, ದ್ವಿತೀಯ ೩ಲಕ್ಷ, ತೃತೀಯ ೨ಲಕ್ಷ ಮತ್ತು ನಾಲ್ಕನೇ ಸ್ಥಾನದ ತಂಡಕ್ಕೆ ರೂ.೧ ಲಕ್ಷ ನಗದು ಮಾತ್ರವಲ್ಲದೆ ಬಹುಮಾನಗಳನ್ನು ನೀಡಲಾಗುವುದು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಹಾಕಿ ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಖ್ಯಾತ ಬರಹಗಾರ ಕಂಬೇರಂಡ ಕಾವೇರಿ ಪೊನ್ನಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ದಿನೇಶ್ ಕಾರ್ಯಪ್ಪ ಹೇಳಿದರು.


    ಹಾಕಿ ಅಕಾಡೆಮಿಯ ಉಪಾಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮಾತನಾಡಿ, ಹಾಕಿ ಅಕಾಡೆಮಿಯು ೨೦೨೫ರಲ್ಲಿ ೨೫ನೇ ಆವೃತ್ತಿಯ ಕೊಡವ ಕುಟುಂಬಗಳ ನಡುವಿನ ಹಾಕಿಹಬ್ಬ ನಡೆಸಲು ಮುದ್ದಂಡ ಕುಟುಂಸ್ಥರಿಗೆ ಅವಕಾಶ ನೀಡಿದೆ. ಈ ಹಾಕಿಹಬ್ಬ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವುದು ವಿಶೇಷ. ನಾಪೋಕ್ಲುವಿನಲ್ಲಿ ಈ ಬಾರಿ ನಡೆಯುವ ಕುಂಡ್ಯೋಳಂಡ ಹಾಕಿ ಹಬ್ಬವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.


    ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ರಮೇಶ್ ಮುದ್ದಯ್ಯ, ಖಜಾಂಚಿ ಕುಂಡ್ಯೋಳಂಡ ವಿಶು ಪೂವಯ್ಯ, ಕಾರ್ಯಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts