More

    ಕೋಟಿಲಿಂಗನ ಜಾತ್ರೆಗೆ ನಾಥ ಪಂತ ಕರೆಯೋಲೆ!: ಮನೆಗೆ ಬಂದು ಹಬ್ಬಕ್ಕೆ ಆಹ್ವಾನಿಸುವ ಜೋಗಿ ಸಮಾಜ ಕಾಲಭೈರವ ವೇಷಧಾರಿ

    ಕುಂದಾಪುರ: ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥೋತ್ಸವ ಉಡುಪಿ ಜಿಲ್ಲೆಯ ಮೊದಲ ಜಾತ್ರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಕೊಡಿಹಬ್ಬಕ್ಕೆ ಬನ್ನಿ ಎಂದು ಮನೆ ಮನೆಗೆ ಭೇಟಿ ನೀಡಿ ಆಹ್ವಾನಿಸುವ ನಾಥ ಪಂತದ ಪದ್ಧತಿಯ ಬಗ್ಗೆ ಹೆಚ್ಚಿನವರಿಗೆ ಗೊತ್ತಿಲ್ಲ.

    ಮತ್ತೆಲ್ಲಿಯೂ ಕಾಣಸಿಗದ ವಿನೂತನ ಪದ್ಧತಿ ಶ್ರೀ ಕೋಟಿಲಿಂಗೇಶ್ವರ ಜಾತ್ರೆ ಸಮಯದಲ್ಲಿ ಕಾಣಸಿಗುತ್ತದೆ. ಕೋಟೇಶ್ವರ ಕೊಡಿಹಬ್ಬ ಹಾಗೂ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಜಾತ್ರೆಯಲ್ಲಿ ಇಂತಹ ವಿಶೇಷ ಆಚರಣೆ ಇದೆ. ಕಟ್ಟುಕಟ್ಟಳೆ ಬಿಡಬಾರದು ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಬಳಿಕ ನಾಡಾ ಗ್ರಾಮದ ಜೋಗಿ ಸಮಾಜದವರು ಕೊಡಿಹಬ್ಬಕ್ಕೆ ಬನ್ನಿ ಎಂದು ಆಹ್ವಾನಿಸುತ್ತಾ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ.

    ಕುಂದಾಪುರ ತಾಲೂಕಿನ ಪ್ರಸಿದ್ಧ ಕೋಟೇಶ್ವರ ಕೋಟಿಲಿಂಗೇಶ್ವರ ಹಾಗೂ ಉಪ್ಪುಂದ ಜಾತ್ರೆ ಪ್ರಯುಕ್ತ ಹಬ್ಬದ ಎಂಟು ದಿನ ಮುಂಚೆ ಬಳೆಗಾರರು ನಾಡ ಗ್ರಾಮದಲ್ಲಿ ಸಂಪ್ರದಾಯಬದ್ಧವಾಗಿ ಜಾತ್ರೆಗೆ ಬರುವಂತೆ ಆಹ್ವಾನ ಆರಂಭಿಸಿದ್ದಾರೆ. ಹಬ್ಬದ ಸಂದರ್ಭದಲ್ಲಿ ಸೇವಾ ರೂಪದಲ್ಲಿ ಮನೆ ಮನೆಗೆ ತಿರುಗಿ ಈಶ್ವರನ ಜಾತ್ರೆಗೆ ಹೇಳಿಕೆ ಕೊಡುವ ಸಂಪ್ರದಾಯ ಈ ರೀತಿಯಾಗಿ ಮುಂದುವರಿದಿದೆ.

    ಹೀಗಿದೆ ಸಂಪ್ರದಾಯ: ಕಾಲಭೈರವ ವೇಷಧಾರಿ ಸಹಿತ ಮನೆಗೆ ಭೇಟಿ ನೀಡಿದಾಗ ಮನೆಯವರು ಕಾಲಭೈರವನ ಬಾಗಿಲಿಗೆ ಬಂದಿದ್ದಾನೆ ಎಂದು ಕಾಲಿಗೆ ನೀರೆರೆದು, ಹಣೆಗೆ ಕುಂಕುಮ, ಕೆನ್ನೆಗೆ ಅರಿಶಿಣ ಹಚ್ಚಿ ಮನೆ ಒಳಗೆ ಆಹ್ವಾನಿಸುತ್ತಾರೆ. ನಂತರ ಮನೆಯವರಿಗೆ ಹರಿವಾಣದಲ್ಲಿ ಪ್ರಸಾದವಿಟ್ಟು ಕೊಡಿಹಬ್ಬಕ್ಕೆ ಬರುವಂತೆ ಆಹ್ವಾನ ನೀಡಲಾಗುತ್ತದೆ. ಮನೆಯವರು ಕಾಣಿಕೆ, ಭತ್ತ, ಅಕ್ಕಿ ಕಾಯಿ ನೀಡುತ್ತಾರೆ.
    ಹೇಳಿಕೆ ಹೊರಟ ಜನರ ಮಧ್ಯೆ ಕಾಲಭೈರವ ವೇಷಧಾರಿ ಇರುತ್ತಾನೆ. ಯಕ್ಷಗಾನ ವೇಷದಂತೆ ದೇವರು ಕಟ್ಟುದಾರಿ ಇರುತ್ತಾನೆ. ಅದಕ್ಕೆ ಕೊಡಿಹಬ್ಬದ ವೇಷ ಎಂದು ಕರೆಯುತ್ತಾರೆ. ಕೆಂಪುಪಟ್ಟೆ, ರುದ್ರಾಕ್ಷಿ ಮಾಲೆ, ಕೈಯಲ್ಲಿ ಬಳೆ ಡಮರುಗ, ಕೊಡೆ, ತ್ರಿಶೂಲ, ತಲೆ ಮೇಲೆ ಕಿರೀಟ, ಅದರ ಮೇಲೆ ಕಾಲಭೈರವ ದೇವರು. ವೇಷ ಕೂಡಾ ಜಾನಪದ ತಳಹದಿಯಲ್ಲಿ ಇರುತ್ತದೆ. ಉಳ್ಳೂರು ಮಠದಿಂದ ಕಾಲಭೈರವ ದೇವರನ್ನು ತರಲಾಗುತ್ತದೆ.

    ಶಾಪ ವಿಮೋಚನೆಗಾಗಿ ತಿರುಗಾಟ: ಹಿಂದೆ ಬಳೆಗಾರರು ಪಾವರ್ತಿ ದೇವಿಗೆ ಬಳೆ ತೊಡಿಸಿದಾಗ ದೇವಿ ಸಂತುಷ್ಟಳಾಗಿ ಬಳೆಗಾರನಿಗೆ ಒಂದಿಷ್ಟು ದುಡ್ಡು ಹಾಗೂ ಚಿನ್ನ ಕೊಡುತ್ತಾಳೆ. ಪಾರ್ವತಿ ಕೊಟ್ಟ ಉಡುಗೊರೆ ಹೆಗಲ ಚೀಲಕ್ಕೆ ಹಾಕಿಕೊಂಡು ಬರುವಾಗ ಈಶ್ವರ ವೇಷಮರೆಸಿಕೊಂಡು ಬಳೆಗಾರರ ಮುಂದೆ ಬಂದು ಚೀಲದಲ್ಲಿ ಇರುವುದು ಏನು ಅಂತ ಪ್ರಶ್ನಿಸುತ್ತಾನೆ. ನಿಜ ಹೇಳಿದರೆ ಎಲ್ಲಿ ಪಾರ್ವತಿ ಕೊಟ್ಟ ಚಿನ್ನ ಹಣ ಅಪಹರಿಸುತ್ತಾನೋ ಎನ್ನುವ ಭಯದಲ್ಲಿ ಬಳೆಗಾರ ಚೀಲದಲ್ಲಿ ಏನೂ ಇಲ್ಲ, ಪಾರ್ವತಿಗೆ ಬಳೆ ಇಡುವಾಗ ಒಡೆದ ಚೂರುಪಾರು ಬಳೆಗಳನ್ನು ಹಾಕಿಕೊಂಡು ಬಂದಿದ್ದು ಎನ್ನುತ್ತಾರೆ. ಸುಳ್ಳು ಹೇಳಿದ್ದರಿಂದ ಕೋಪಗೊಂಡ ಈಶ್ವರ ಬಳೆ ಮಾರಿ ಜೀವನ ಸಾಗದಂತೆ ಆಗಲಿ ಎಂದು ಶಾಪ ಕೊಡುತ್ತಾನೆ. ತಪ್ಪಿನ ಅರಿವಾದ ಬಳೆಗಾರರು ಶಾಪ ವಿಮೋಚನೆಗಾಗಿ ಮೊರೆ ಹೋಗುತ್ತಾರೆ. ಬಳೆಗಾರರ ಮೇಲೆ ಕರುಣೆ ತೋರಿದ ಕಾಲಭೈರವ ನನ್ನ ಹಸರು ಹೇಳಿ ಭಿಕ್ಷೆ ಬೇಡಿ ತಿನ್ನಿ ಎಂದು ತನ್ನ ಕೈಯಲ್ಲಿದ್ದ ಡಮರುಗ ತ್ರಿಶೂಲ ನೀಡುತ್ತಾನೆ. ಅದರ ನಂತರ ಕಾಲಭೈರವ ದೇವರ ರೀತಿ ವೇಷ ಹಾಕಿಕೊಂಡು ಮನೆಮನೆಗೆ ಹೋಗಿ ಕೊಡಿಹಬ್ಬಕ್ಕೆ ಆಹ್ವಾನದ ನೀಡಿ ಮನೆಯವರು ಕೊಟ್ಟ ಕಾಣಿಕೆ, ಕಾಯಿ ಅಕ್ಕಿ ಸ್ವೀಕರಿಸುತ್ತಾರೆ. ಇದು ನಾಥ ಪಂತದವರು ಕೊಡಿಹಬ್ಬಕ್ಕೆ ಆಹ್ವಾನ ನೀಡುವ ಪದ್ಧತಿ ಹಿಂದಿನ ಪುರಾಣ ಕಥೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಹಿಂದಿನ ಕಟ್ಟುಕಟ್ಟಳೆ ಮುಂದುವರಿಸುವಂತೆ ಸೂಚನೆ ಬಂದ ಕಾರಣ ಈ ಜಾನಪದ ಪರಂಪರೆಯನ್ನು ನಾಥ ಪಂತದವರು ಮುಂದುವರಿಸಿಕೊಂಡು ಬಂದಿದ್ದಾರೆ.

    ಉಪ್ಪುಂದ ಹಾಗೂ ಕೋಟೇಶ್ವರ ಜಾತ್ರೆಗೆ ಆಹ್ವಾನ ಕೊಡುವ ಪದ್ಧತಿ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಅನಾದಿಕಾಲದ ಸಂಪ್ರದಾಯವಾಗಿರುವುದರಿಂದ ಅದನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.
    -ಉದಯ ಜೋಗಿ, ನಾಡ ಗ್ರಾಪಂ ಸದಸ್ಯ ನಾಥ ಪಂತದ ಮುಖಂಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts