More

    ಬದಲಾವಣೆ ತಂದರೂ ಹೊರಬರುತ್ತಿವೆ ಹೊಸ ಸಮಸ್ಯೆಗಳು

    ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಕುಂದಾಪುರದಲ್ಲಿ ವಾಹನ ದಟ್ಟಣೆ, ನಿಲುಗಡೆ ಸಮಸ್ಯೆ, ಸಂಚಾರ ವ್ಯವಸ್ಥೆ ಬದಲಾವಣೆ ಹಿನ್ನೆಲೆಯಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದ್ದು ಈ ನಡುವೆ ಸಮಸ್ಯೆಗಳೂ ಒಂದೊಂದಾಗಿ ಬಯಲಾಗುತ್ತಿವೆ. ಕುಂದಾಪುರ ಬಸ್ ನಿಲ್ದಾಣದಲ್ಲಿ ಎಲ್ಲವೂ ಸರಿಯಾಗಿ ನಡೆಯಬೇಕು ಎಂದು ಫೆರ‌್ರಿ ರಸ್ತೆಯಲ್ಲಿ ಬಸ್‌ಗಳ ನಿಲುಗಡೆಗೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಆದರೆ ಮೂಲಸೌಲಭ್ಯ ಕೊರತೆಯಿಂದ ಚಾಲಕ, ನಿರ್ವಾಹಕರು ಸಮಸ್ಯೆ ಎದುರಿಸುವಂತಾಗಿದೆ. ಫೆರ‌್ರಿ ರಸ್ತೆ ಎಂಡ್ ಪಾಯಿಂಟ್ ಬಳಿ ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಿದ್ದು, ಅಲ್ಲಿ ತ್ಯಾಜ್ಯ ರಾಶಿ ಚಾಲಕ -ನಿರ್ವಾಹಕರಿಗೆ ನರಕ ದರ್ಶನ ಮಾಡಿಸುತ್ತಿದೆ. ಮನೆ, ಕಟ್ಟಡಗಳ ವೇಸ್ಟ್, ಪ್ಲಾಸ್ಟಿಕ್, ಬಾಟಲಿಗಳ, ಇಲೆಕ್ಟ್ರಾನಿಕ್ ವಸ್ತುಗಳ ಪಳೆಯುಳಿಕೆಗಳು, ಒಡೆದ ಗಾಜು ರಾಶಿ ಬೀಳುತ್ತಿವೆ. ಈ ಎಲ್ಲ ಕೃತ್ಯ ಜನ ಸಂಚಾರ ಇಲ್ಲದಿರುವಾಗ ನಡೆಯುತ್ತಿದ್ದು, ಆರೋಪ ಪುರಸಭೆ ಮೇಲೆ ಹೊರಿಸಲಾಗುತ್ತಿದೆ. ಇಂಥ ಪರಿಸರದಲ್ಲಿ ಬಸ್ ನಿಲ್ಲುತ್ತಿದ್ದು, ಅದರ ಪರಿಣಾಮ ಬಸ್ ಸಿಬ್ಬಂದಿ ಮೇಲಾಗುತ್ತಿದೆ. ಹೊಸ ಬದಲಾವಣೆಗೆ ನಾವು ಸಿದ್ಧ, ಆದರೆ ನಮಗೆ ನೀರು, ನೆರಳು ಒದಗಿಸಿ, ಧೂಳಿನಿಂದ ಮುಕ್ತಿ ಕೊಟ್ಟು ಶೌಚಗೃಹ ವ್ಯವಸ್ಥೆ ಮಾಡಿಕೊಡಬೇಕು ಎನ್ನುತ್ತಾರೆ ಸಿಬ್ಬಂದಿ.

    ಕುಂದಾಪುರದಲ್ಲಿ ಈಗಿರುವ ಬಸ್ ನಿಲ್ದಾಣದಲ್ಲಿ 10 ನಿಮಿಷ ಬಸ್ ನಿಲ್ಲಲು ಅವಕಾಶವಿದೆ. 10 ನಿಮಿಷದಲ್ಲಿ ಪ್ರಯಾಣಿಕರು, ಚಾಲಕ, ನಿರ್ವಾಹಕರು ಅಗತ್ಯ ಕೆಲಸ ಮಾಡಿಕೊಳ್ಳುವುದು ಕಷ್ಟ ಎಂದು ಕುಂದಾಪುರ ಪೊಲೀಸ್ ಅಧಿಕಾರಿ ಹರಿರಾಮ್ ಶಂಕರ್ ಹೇಳಿದ್ದಾರೆ. ಇಲ್ಲಿನ ಸಮಸ್ಯೆ ಕುಂದಾಪುರ ಎಸಿ, ಪುರಸಭೆ ಮುಖ್ಯಾಧಿಕಾರಿ ಜತೆ ಚರ್ಚಿಸಿ, ಹೊಸ ನಿಲ್ದಾಣಕ್ಕೆ ಇಂಟರ್‌ಲಾಕ್ ಅಳವಡಿಕೆ, ಧೂಳು ಪರಿಹಾರಕ್ಕೆ ಲೋಕೋಪಯೋಗಿ ಇಲಾಖೆ ಮೂಲಕ ನೀರು ಹಾಕುವ ವ್ಯವಸ್ಥೆ ಬಗ್ಗೆ ಪ್ರಯತ್ನ ಮಾಡಲಾಗುತ್ತದೆ. ಹೊಸ ನಿಲ್ದಾಣದಲ್ಲಿ ನಾಲ್ಕು ಸಿಸಿಟಿವಿ ಅಳವಡಿಸಲಾಗುತ್ತದೆ. ಕುಂದಾಪುರದಲ್ಲಿ ಸಂಚಾರ, ಟ್ರಾಫಿಕ್ ಸಮಸ್ಯೆ ಪರಿಹಾರದ ದೊಡ್ಡ ಬದಲಾವಣೆಗೆ ಹೆಜ್ಜೆ ಇಟ್ಟಿದ್ದು, ಎಲ್ಲವನ್ನೂ ಹಂತಹಂತವಾಗಿ ಪರಿಹರಿಸಲಾಗುವುದು ಎಂದು ಹೇಳಿದ್ದಾರೆ.

    ಫೆರ‌್ರಿ ರಸ್ತೆ ಎಂಡ್ ಪಾಯಿಂಟ್ ಬಳಿ ಬಸ್ ನಿಲುಗಡೆಗೂ ಮುನ್ನ ಮೂಲಸೌಲಭ್ಯ ಒದಗಿಸಲು ಅಗತ್ಯ ಕ್ರಮ ಕೈಗೊಂಡು ಸಂಪೂರ್ಣ ವ್ಯವಸ್ಥೆ ಆದ ಬಳಿಕ ನಿಲುಗಡೆಗೆ ಅವಕಾಶ ಕಲ್ಪಿಸಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಬಟಾ ಬಯಲಲ್ಲಿ, ನೀರು ನೆರಳಿಲ್ಲದೆ ನಾವು ಸಮಯ ಕಳೆಯುವ ಕಷ್ಟ ಯಾರಿಗೂ ಬೇಡ.
    -ಪ್ರದೀಪ್, ಬಸ್ ಚಾಲಕ, ಕೋಟೇಶ್ವರ ಹಳವಳ್ಳಿ.

    ಹೊಸ ಬಸ್ ನಿಲ್ದಾಣದಲ್ಲಿ ಶೌಚಗೃಹವಿಲ್ಲ. ಒಂದು ತೊಟ್ಟು ನೀರೂ ಸಿಗದು. ಊಟ, ಉಪಾಹಾರಕ್ಕೂ ತತ್ವಾರ. ಬೀದಿನಾಯಿಗಳೊಟ್ಟಿಗೆ ಸಮಯ ಕಳೆಯುವಂತಾಗಿದೆ. ಹೊಸ ಬಸ್ ನಿಲ್ದಾಣಕ್ಕೆ ಬರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಮೂಲಸೌಲಭ್ಯ ಒದಗಿಸಿ ಬಳಿಕ ತಂಗುದಾಣ ಬದಲಾಯಿಸಿದ್ದರೆ ಒಳ್ಳೆಯದಾಗುತ್ತಿತ್ತು.
    -ನಿತಿನ್, ಬಸ್ ಚಾಲಕ ಬೈಂದೂರು.

    ಹೊಳೆ ಬದಿ ಪುರಸಭೆ ಕಸ ಹಾಕುತ್ತಿಲ್ಲ. ಯಾರೋ ತಂದು ಸುರಿಯುತ್ತಿದ್ದು, ಸಿಸಿಟಿವಿ ಅಳವಡಿಸಿ, ಕಸ ಹಾಕುವುದು ಯಾರು ಎಂದು ಪತ್ತೆ ಮಾಡಲಾಗುವುದು. ಬಸ್‌ಗಳು ಇಲ್ಲಿ ನಿಲ್ಲುವುದರಿಂದ ಹೊಳೆ ಬದಿ ಕಸ ಹಾಕುವುದು ನಿಯಂತ್ರಣಕ್ಕೆ ಬರುತ್ತದೆ. ಇನ್ನೆರಡು ದಿನಗಳಲ್ಲಿ ಬಸ್ ನಿಲ್ದಾಣದಲ್ಲಿ ತಾತ್ಕಾಲಿಕ ಶೌಚಗೃಹ ನಿರ್ಮಿಸಲಾಗುತ್ತದೆ. ಅಲ್ಲಿ ತನಕ ಪಾರ್ಕ್‌ನಲ್ಲಿರುವ ಶೌಚಗೃಹ ಬಳಸಲು ಅವಕಾಶ ಮಾಡಿಕೊಡಲಾಗುತ್ತದೆ.
    -ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಕುಂದಾಪುರ ಪುರಸಭೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts