More

    ಕನ್ನಡದಲ್ಲಿ ಅದ್ವೀತಿಯ ಕಾದಂಬರಿಕಾರ ಕುಂವೀ: ಪ್ರೊ. ಮಲ್ಲೇಪುರಂ

    ಬೆಂಗಳೂರು: ಕನ್ನಡದಲ್ಲಿ ಬೃಹತ್ ಕಾದಂಬರಿಗಳನ್ನು ಬರೆಯುವ ಪರಂಪರೆಯಲ್ಲಿ ರಾಷ್ಟ್ರಕವಿ ಕುವೆಂಪು, ವಿ.ಕೃ. ಗೋಕಾಕ್, ಕಾರಂತರು ಪ್ರಮುಖರು. ಈ ಹಳೆಯ ಪೀಳಿಗೆ ಹೊರತುಪಡಿಸಿದರೆ ಸಮಕಾಲೀನ ಲೇಖಕರಲ್ಲಿ ಭೈರಪ್ಪ ಹಾಗೂ ಇತರರನ್ನು ನೋಡಬಹುದು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಹೇಳಿದರು.

    ವಸಂತ ಪ್ರಕಾಶನ ಹಾಗೂ ಬುಕ್ ಬ್ರಹ್ಮ ಸಹಯೋಗದಲ್ಲಿ ನಗರದ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಶನಿವಾರ ನಡೆದ ಲೇಖಕ ಕುಂ. ವೀರಭದ್ರಪ್ಪ ಅವರ ‘ಮಾಕನಡುಕು’ ಮತ್ತು ‘ಶಾಮಣ’್ಣ ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

    ಎರಡು ತಲೆಮಾರಿನ ನಂತರ ನೋಡುವುದಾದರೆ ಕನ್ನಡದಲ್ಲಿ ಏಕಮೇವ ಅದ್ವೀತಿಯ ಕಾದಂಬರಿಕಾರ ಕುಂ. ವೀರಭದ್ರಪ್ಪ. ಇವರು ತನ್ನ ಕೃತಿಯಲ್ಲಿ ಕೇವಲ ಸಾಹಿತ್ಯಿಕ ವಿಚಾರಗಳನ್ನು ಮಾತ್ರವಲ್ಲದೆ ಒಂದು ಸಾಹಿತ್ಯದ ಗರ್ಭದಲ್ಲಿ ಸಾಮಾಜಿಕತೆ, ಸಾಂಸ್ಕೃತಿಕ ನಿರ್ವಾಣ, ರಾಜಕೀಯ ನಿಲುವುಗಳು ಹೀಗೆ ಬೇರೆ ಬೇರೆ ಕೇಂದ್ರಗಳನ್ನೆಲ್ಲಾ ಒಂದು ಭಾಷಿಕ ಆವರಣದಲ್ಲಿಟ್ಟು ನೋಡುವ ವಿಶಿಷ್ಟ ಕಲಾಗಾರಿಕೆ ಹೊಂದಿದ್ದಾರೆ. ಇವರ ಹೊರತಾಗಿ ಇನ್ಯಾರಿಗೂ ಈ ಪ್ರಮಾಣದ ಸಿದ್ಧಿ ಸಾಧ್ಯವಿಲ್ಲ ಎಂದು ಬಣ್ಣಿಸಿದರು.

    ಶಾಮಣ್ಣ ಕಾದಂಬರಿಯನ್ನು ನೋಡಿದಾಗ ತಿಳಿಯುತ್ತೆ. ಶಾಮಣ್ಣ ಕಾದಂಬರಿ ಕುಂ.ವೀ ಅವರ ಸಾಹಿತ್ಯದ ಉತ್ಕಟತೆಯನ್ನು ತನ್ನ ಭಾಷಿಕ ಆವರಣದಲ್ಲಿ ಕಟ್ಟಿಕೊಡುವುದು ಸುಲಭವಲ್ಲ. ಇದು ಇವರ ಶಾಮಣ್ಣ ಕಾದಂಬರಿಯನ್ನು ನೋಡಿದಾಗ ತಿಳಿಯುತ್ತದೆ. ಈ ಕಾದಂಬರಿ ಕುಂ.ವೀ ಅವರ ಆತ್ಮಸ್ಥೈರ್ಯ ಮತ್ತು ಆತ್ಮ ಪ್ರತಿಭೆಯಿಂದ ಕೂಡಿದೆ ಎಂದು ಶಾಮಣ್ಣ ಕೃತಿ ಪರಿಚಯ ಮಾಡಿಕೊಟ್ಟರು.

    ‘ಮಾಕನಡುಕು’ ಕೃತಿಯ ಕುರಿತು ಮಾತನಾಡಿದ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಎಚ್.ಎಲ್. ಪುಷ್ಪ, ಕುಂ.ವೀ ಅವರು ಅದ್ಭುತ ಪ್ರತಿಭೆ. ಅವರಿಗೆ ಬರೆಯುವುದಕ್ಕೆ ಇಂಥಾದ್ದೇ ನಿರ್ದಿಷ್ಟ ವಸ್ತು ಬೇಕು ಅಂತಿಲ್ಲ, ಯಾವ ವಸ್ತುವನ್ನು ಕೊಟ್ಟರು ಸಹ ಅದರ ಮೇಲೆ ಅದ್ಭುತ ಕೃತಿ ಬರೆಯಬಲ್ಲರು. ಅವರು ಒಂದು ಹುಲ್ಲು ಎಸಳಿನ ಮೇಲೆ ಅರಮನೆ ಕಟ್ಟಬಲ್ಲ ವಿಶಿಷ್ಟ ಪ್ರತಿಭೆ ಎಂದು ಬಣ್ಣಿಸಿದರು.

    ಕುಂವೀ ಅವರು ಆರಂಭ ಘಟ್ಟದಲ್ಲಿ ಬರೆದ ಕತೆಗಳಲ್ಲಿ ದಲಿತಪ್ರಜ್ಞೆ ಇತ್ತು. ಆದರೆ ಇಂದು ನಮ್ಮಲ್ಲಿ ಒಂದು ವರ್ಗೀಕರಣ ಇದೆ. ದಲಿತರು ಬರೆದರಷ್ಟೇ ದಲಿತ ಸಾಹಿತ್ಯ ಆಗುತ್ತಾ ಅನ್ನೋ ಚರ್ಚೆ ನಡೆದಿದೆ. ಆದರೆ ಕುಂವೀ ಅವರು ದಲಿತರಿಗಿಂತಲೂ ಚೆನ್ನಾಗಿ ದಲಿತಲೋಕವನ್ನ ಕಟ್ಟಿಕೊಡುತ್ತಾರೆ ಇದನ್ನ ಹೇಗೆ ನೋಡಬೇಕು ಎಂಬ ಗೊಂದಲವಿದೆ ಎಂದ ಅವರು, ಮಾಕನಡುಕು ಕಾದಂಬರಿ 35 ವರ್ಷಗಳ ಹಿಂದಿನ ಶಿಕ್ಷಣ ವೃತ್ತಿಯ ಅನುಭವದ ಮೂಸೆಯಲ್ಲಿ ರಚಿಸಿದ್ದಾರೆ ಎಂದರು.

    ಕಥೆಗಾರ ಕುಂ. ವೀರಭದ್ರಪ್ಪ ಮಾತನಾಡಿ, ಕತೆ ಬರೆಯೋ ವಾತಾವರಣ ನಮ್ಮನ್ನು ಕತೆಗಾರರನ್ನಾಗಿಸುತ್ತೆ. ಯಾರೂ ಊಹಿಸಿಕೊಳ್ಳಲಾಗದಂತಹ ಗ್ರಾಮಗಳಲ್ಲಿ ನಾನು ಕೆಲಸ ಮಾಡಿದೆ. ಅಲ್ಲಿನ ಅನುಭವದಿಂದ ಬರೆದ ‘ಕಪ್ಪು’ ಕಾದಂಬರಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ನನ್ನ ಈ ಬರವಣಿಗೆಗೆ ಕನ್ನಡ ಸಾಹಿತ್ಯದ ಹಲವಾರು ಬರಹಗಾರರು ಹಾಗೂ ಕನ್ನಡ ಪತ್ರಿಕೆಗಳೇ ಕಾರಣ ಎಂದು, ಬಾಲ್ಯ, ಶಿಕ್ಷಣ, ಬರಹಗಳ ಕುರಿತು ಮಾತನಾಡಿದರು.

    ಕಾರ್ಯಕ್ರಮದಲ್ಲಿ ರೇವಣಸಿದ್ಧಯ್ಯ, ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ, ಕವಿ ಪ್ರವರ ಕೊಟ್ಟೂರ್, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts