More

    ದಕ್ಷಿಣ ಭಾರತದ ಕುಂಭಮೇಳಕ್ಕೆ ಕ್ಷಣಗಣನೆ

    ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಕೊಪ್ಪಳದ ಗವಿಮಠ ಅನ್ನ-ಅಕ್ಷರ-ಅಧ್ಯಾತ್ಮ (ಶಿಕ್ಷಣ) ದಾಸೋಹದ ಮೂಲಕ ನಾಡಿನ ಮನೆ ಮಾತಾಗಿದೆ. ರಥೋತ್ಸವದೊಂದಿಗೆ ಪ್ರತಿ ವರ್ಷ ಒಂದಿಲ್ಲೊಂದು ಸಾಮಾಜಿಕ ಕಳಕಳಿ ಮೆರೆಯುವುದು ಗವಿಸಿದ್ಧೇಶ್ವರ ಜಾತ್ರೆಯ ವಿಶೇಷ.

    | ವಿ.ಕೆ. ರವೀಂದ್ರ ಕೊಪ್ಪಳ
    ಕೋವಿಡ್ ಕರಿನೆರಳಿನಿಂದ ಈ ಬಾರಿ ಅಜ್ಜನ ಜಾತ್ರೆ ಸರಳ ಆಚರಣೆಗೆ ಸೀಮಿತವಾಗಿದೆ. ಭಕ್ತರ ಅಪೇಕ್ಷೆ, ಸರ್ಕಾರದ ನಿರ್ಧಾರಂತೆ ಪರಿಸ್ಥಿತಿ ಹಾಗೂ ಪರಿಸರಕ್ಕೆ ಅನುಕೂಲವಾಗುವಂತೆ ಮೂರು ದಿನ ಮಾತ್ರ ಜಾತ್ರೋತ್ಸವ ನಡೆಸಲು ಗವಿಶ್ರೀಗಳು ಮುಂದಡಿ ಇಟ್ಟಿದ್ದಾರೆ. ಈ ಬಾರಿ ಜನವರಿ 30ರಂದು ಮಹಾ ರಥೋತ್ಸವ ನಡೆಯಲಿದ್ದು, ಅದೂ ಸಹ ಭಕ್ತರ ನಿರ್ಬಂಧದೊಂದಿಗೆ ಮಾಡುವ ಮೂಲಕ ನಾಡಿಗೆ ಮಾದರಿಯಾಗಲು ಶ್ರೀಗಳು ಸಂಕಲ್ಪ ಮಾಡಿದ್ದಾರೆ.

    ಪರಂಪರೆ: ಬಸವ ಪಟ ಆರೋಹಣ ಮೂಲಕ ಅಜ್ಜನ ಜಾತ್ರೆಗೆ ಅಧಿಕೃತ ಚಾಲನೆ ದೊರೆಯುವುದು. ಪಟದಲ್ಲಿ ನಂದಿ, ಈಶ್ವರ, ಸೂರ್ಯ, ಚಂದ್ರ, ವರುಣ, ಪ್ರಣವ ಮಂತ್ರವಿರಲಿದ್ದು, ಇದು ನಾಡಿನ ಸಮೃದ್ಧಿ ಸಂಕೇತ. 11ನೇ ಪೀಠಾಧಿಪತಿ, ಪವಾಡ ಪುರುಷ ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಗವಿಮಠಕ್ಕೆ ಆಗಮಿಸುವ ಪೂರ್ವದಲ್ಲಿ ಕೊಪ್ಪಳದ ಜಡೇಗೌಡರ ಮನೆಯಲ್ಲಿ ಲಿಂಗಾನುಷ್ಠಾನ ನಿರತರಾಗಿದ್ದರು. ಗವಿಮಠಕ್ಕೆ ಬರುವ ಪೂರ್ವದಲ್ಲಿ ಗೌಡರ ಧರ್ಮಪತ್ನಿಗೆ ತಮ್ಮ ಶಿಖೆ (ಜಡೆ)ಯನ್ನೇ ತೆಗೆದುಕೊಟ್ಟರು. ಅಂದಿನಿಂದ ಮಠದಲ್ಲಿ ಪೂಜೆಗೊಂಡ ಗವಿಸಿದ್ಧೇಶ್ವರ ಮೂರ್ತಿಯನ್ನು ಜಡೇಗೌಡರ ಮನೆಯಲ್ಲಿ ಮುಹೂರ್ತಗೊಳಿಸಿ ಪೂಜಾದಿಗಳನ್ನು ಸಲ್ಲಿಸಿದ ತರುವಾಯ ವಾದ್ಯಗಳ ಸಮೇತ ಪಲ್ಲಕ್ಕಿಯನ್ನು ಕೊಪ್ಪಳದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಮಠಕ್ಕೆ ತರಲಾಗುತ್ತದೆ. ಹಲಗೇರಿ, ಮುದ್ದಾಬಳ್ಳಿ, ಮಂಗಳಾಪುರ ಗ್ರಾಮದಿಂದ ಕಳಸ, ಮೂರ್ತಿ ಮೆರವಣಿಗೆಯಲ್ಲಿ ಆಗಮಿಸಲಿವೆ. ಶನಿವಾರ ಸಂಜೆ ‘ಉಘೇ… ಉಘೇ… ಗವಿಸಿದ್ಧೇಶ’ ಎಂಬ ಜಯಘೊಷದೊಂದಿಗೆ ರಥೋತ್ಸವ ನಡೆಯಲಿದೆ.

    ದಕ್ಷಿಣ ಭಾರತದ ಕುಂಭಮೇಳಕ್ಕೆ ಕ್ಷಣಗಣನೆಉಜ್ವಲ ಇತಿಹಾಸ: ಗವಿಮಠಕ್ಕೆ 800 ವರ್ಷಗಳ ಇತಿಹಾಸವಿದೆ. ಮಠದ ಮೊದಲ ಪೀಠಾಧಿಪತಿ ರುದ್ರಮುನಿ ಶಿವಾಚಾರ್ಯರು ಕ್ರಿ.ಶ.12ನೆಯ ಶತಮಾನದ ಬಸವಾದಿ ಶಿವಶರಣರಿಗಿಂತ ಪೂರ್ವದಲ್ಲಿ ಕರ್ನಾಟಕದಲ್ಲಿ ವೀರಶೈವಧರ್ಮವನ್ನು ಜನಪ್ರಿಯಗೊಳಿಸಿದವರು. ಮಠದಲ್ಲಿರುವ ಹೋಳಿ ಹಂಪಯ್ಯನ ಕ್ರಿ.ಶ. 1086 ಶಾಸನದ ಪ್ರಕಾರ, ಕಾಶಿಯ ಜಂಗಮವಾಡಿಯಿಂದ ಧರ್ಮಪ್ರಸಾರ ಕೈಗೊಳ್ಳುತ್ತ ಬಂದ ರುದ್ರಮುನಿ ಶಿವಯೋಗಿಗಳು ಕೊಪ್ಪಳದ ಪೂರ್ವಬೆಟ್ಟದ ಗವಿಯಲ್ಲಿ ನೆಲೆಸಿ, ಧಾರ್ವಿುಕ-ಸಾಮಾಜಿಕ ಸುಧಾರಣೆಯಲ್ಲಿ ನಿರತರಾದರು. ಇವರು ನೆಲೆಸಿದ ಸ್ಥಳವೇ ಗವಿಮಠವಾಯಿತು. ರುದ್ರಮುನಿ ಶಿವಾಚಾರ್ಯರ ನಂತರ ಮಠದ ಉತ್ತರಾಧಿಕಾರತ್ವದ ಪರಂಪರೆ ಮುಂದುವರಿದಿದೆ. 11ನೇ ಪೀಠಾಧಿಪತಿ ಗವಿಸಿದ್ಧೇಶ್ವರ ಸ್ವಾಮೀಜಿ ಪವಾಡ ಪುರುಷರಾಗಿದ್ದರು. ಸತ್ತ ಆಕಳಿಗೆ ಮರುಜನ್ಮ ನೀಡಿದ್ದು, ನವಾಬನ ಕುಷ್ಠರೋಗ ನಿವಾರಿಸಿದ್ದು ಸೇರಿ ಅನೇಕ ಪವಾಡ ಮಾಡಿದ್ದಾರೆ. ತಮ್ಮ ಗುರುಗಳಿಗಾಗಿ ನಿರ್ವಿುಸಿದ್ದ ಸಮಾಧಿಯಲ್ಲಿ ಶಾಲಿ ವಾಹನ ಶಕೆ 1735 (ಕ್ರಿ.ಶ 1816) ನೇ ಶ್ರೀಮುಖನಾಮ ಸಂವತ್ಸರ ಪುಷ್ಯ ಬಹುಳ ಬಿದಗಿಯಂದು ಲಿಂಗೈಕ್ಯರಾದರು. ಅವರು ಲಿಂಗೈಕ್ಯರಾದ ದಿನವನ್ನೇ ಪ್ರತಿ ವರ್ಷ ಜಾತ್ರೆ ನೆರವೇರಿಸಲಾಗುತ್ತದೆ. ಸದ್ಯ 18ನೇ ಪೀಠಾಧಿಪತಿ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಠವನ್ನು ಮುನ್ನಡೆಸುತ್ತಿದ್ದಾರೆ.

    ಸಾಮಾಜಿಕ ಜಾಗೃತಿ: ಈಗಿನ ಶ್ರೀಗಳು ರಥೋತ್ಸವದ ಜತೆಗೆ ಜಾತ್ರೆಯಲ್ಲಿ ಸಾಮಾಜಿಕ ಸಂದೇಶ ನೀಡಲು ನಿರ್ಧರಿಸಿ ಪ್ರತಿ ವರ್ಷ ಒಂದೊಂದು ವಿಷಯದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. 2016ರಲ್ಲಿ ಕೊಪ್ಪಳ ಜಿಲ್ಲೆ ಬಾಲ್ಯವಿವಾಹದ ಕೇಂದ್ರವಾಗಿತ್ತು. ಅದೇ ವರ್ಷ ಜಾತ್ರೆಯಲ್ಲಿ ಬಾಲ್ಯವಿವಾಹ ಜಾಗೃತಿ ಮೂಡಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬೀದಿಗಳಿದು ಜಾಥಾದಲ್ಲಿ ಪಾಲ್ಗೊಂಡರು. ಬಾಲ್ಯವಿವಾಹದಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದ ಕೊಪ್ಪಳ ಜಿಲ್ಲೆ ಇಂದು 12ನೇ ಸ್ಥಾನಕ್ಕೆ ಕುಸಿದಿದೆ. 2017ರಲ್ಲಿ ಬರಗಾಲದಿಂದ ಬಳಲಿದ್ದ ಜನರಿಗೆ ಜಲದೀಕ್ಷೆ ಕಾರ್ಯಕ್ರಮದಡಿ ನೀರು ಸಂಗ್ರಹಣೆ ಅರಿವು ಮೂಡಿಸಲಾಗಿದೆ. ಇಡೀ ವಿಶ್ವವನ್ನು ಬಾಧಿಸುತ್ತಿರುವ ಒತ್ತಡದ ಬದುಕು, ಅದರ ಪರಿಣಾಮ, ನಿವಾರಣೆ ಕುರಿತು 2018ರಲ್ಲಿ ಜಾಗೃತಿ ಮೂಡಿಸಲಾಯಿತು. ದೃಷ್ಟಿ ಇಲ್ಲದವರಿಗೆ ಬೆಳಕಾಗುವ ನೇತ್ರದಾನ ಸಂದೇಶ ಸಾರುವ ‘ಕೃಪಾದೃಷ್ಟಿ ಅಭಿಯಾನ’ 2019ರಲ್ಲಿ ಆರಂಭಿಸಲಾಯಿತು. ಸಾವಿರಾರು ಜನರು ಜಾತ್ರೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ನೇತ್ರದಾನ ಮಾಡಿದರು. ಗಿಡ-ಮರಗಳ ಮಹತ್ವ ಸಾರುವ ಲಕ್ಷವೃಕ್ಷ ಅಭಿಯಾನ 2020ರಲ್ಲಿ ನಡೆದಿದ್ದು, ಕೊಪ್ಪಳದ ಹಿರೇಹಳ್ಳ ಸೇರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗಿಡ ನೆಡುವ ಮೂಲಕ ಪರಿಸರ ಕಾಳಜಿ ಮೆರೆಯಲಾಗಿದೆ.

    ಈ ಬಾರಿ ಸರಳ ಜಾತ್ರೆ: ಅಜ್ಜನ ಜಾತ್ರೆ ಈ ಬಾರಿ ಜನವರಿ 29ರಿಂದ 31ವರೆಗೆ ನಡೆಯಲಿದೆ. ಮೂರು ದಿನ ಮಾತ್ರ ಪ್ರಸಾದ ವ್ಯವಸ್ಥೆಯಿದೆ. ಜ.29 ಲಘುರಥೋತ್ಸವ, ಜ.30ಕ್ಕೆ ಮಹಾ ರಥೋತ್ಸವ, ಜ.31ರಂದು ಸಿದ್ಧೇಶ್ವರ ಮೆರವಣಿಗೆ ನಡೆಯಲಿದೆ. ರಥೋತ್ಸವಕ್ಕೆ ಭಕ್ತರ ನಿರ್ಬಂಧವಿರಲಿದೆ. ಗವಿಸಿದ್ಧೇಶ್ವರ ಮಹಾ ರಥೋತ್ಸವ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಸ್ಥಳೀಯ ಚಾನಲ್​ಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಭಕ್ತರು ಮಠದ ಆವರಣಕ್ಕೆ ಬರದೆ ತಾವಿರುವ ಸ್ಥಳದಲ್ಲಿಯೇ ರಥದರ್ಶನ ಮಾಡಿಕೊಳ್ಳಬೇಕು. ತಮಗೆಲ್ಲ ಗವಿಸಿದ್ಧೇಶ್ವರನ ಕೃಪೆ ಸದಾ ಇರಲೆಂದು ಶ್ರೀಗಳು ಆಶೀರ್ವದಿಸಿದ್ದಾರೆ.

    ದಕ್ಷಿಣ ಭಾರತದ ಕುಂಭಮೇಳಕ್ಕೆ ಕ್ಷಣಗಣನೆಜಾತ್ರೋತ್ಸವ, ಮಠದ ಪರಂಪರೆ ಹಾಗೂ ಸಾಮಾಜಿಕ ಜಾಗೃತಿ ಕಾರ್ಯಗಳ ಕುರಿತು ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ವಿಜಯವಾಣಿಯೊಂದಿಗೆ ಮಾತನಾಡಿದ್ದಾರೆ.

    • ಕೋವಿಡ್ ಹಿನ್ನೆಲೆಯಲ್ಲಿ ಜಾತ್ರೆ ಹೇಗಿರಲಿದೆ?

    ಒಂದೆಡೆ ದೈವೀಶಕ್ತಿ ಇನ್ನೊಂದೆಡೆ ಜನರ ಭಕ್ತಿಯ ಶಕ್ತಿ. ಈ ಎರಡೂ ದಿವ್ಯಶಕ್ತಿಯ ಸಂಗಮವನ್ನು ನಾನು ಕೂಡಿಸುವೆನೆಂದಾಗಲಿ ಅಥವಾ ನಿಲ್ಲಿಸುವೆನೆಂದಾಗಲಿ ಹೇಳಿದರೆ ಅಹಂಕಾರದ ಮಾತಾದೀತು. ಬಸವಣ್ಣನವರು ಹೇಳುವಂತೆ ‘ಆನು ದೇವಾ ಹೊರಗಣವನು ಕೂಡಲ ಸಂಗಮದೇವಾ’, ನಿಮ್ಮ ನಾಮವಿಡಿದ ಅನಾಮಿಕ ನಾನು. ಇಂದು ದೈವ ಇಚ್ಛೆ, ಭಕ್ತರ ನಿರೀಕ್ಷೆ… ಇವರೆಡರ ಪರೀಕ್ಷೆಯ ಸಂಧಿಕಾಲ. ಜಾತ್ರೆಯನ್ನೂ ನಡೆಸಬೇಕು, ಸರ್ಕಾರದ ಆದೇಶವನ್ನೂ ಪಾಲಿಸಬೇಕು ಮತ್ತು ಕಾನೂನು ಮತ್ತು ಸಂಪ್ರದಾಯವನ್ನು ಮೀರಬಾರದು. ಪರಿಸರಸ್ನೇಹಿ ಜಾತ್ರೆಯೊಂದಿಗೆ ಪರಿಸ್ಥಿತಿಸ್ನೇಹಿ ಜಾತ್ರೆಯನ್ನು ಮಾಡುವ ಮಧ್ಯಮ ಮಾರ್ಗ ಅನುಸರಿಸಬೇಕಾಗಿದೆ. ಸರ್ಕಾರವಾಗಲಿ, ಜಿಲ್ಲಾಡಳಿತ ವಾಗಲಿ ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಒಳಿತಿಗಾಗಿ ಎನ್ನುವ ಭಾವದೊಂದಿಗೆ ಈ ವರ್ಷದ ಜಾತ್ರೆ ಧಾರ್ವಿುಕ ವಿಧಿವಿಧಾನಗಳೊಂದಿಗೆ ಆಚರಿಸೋಣ.

    • ಕೋವಿಡ್ ಹಿನ್ನೆಲೆ ಭಕ್ತರು ವಹಿಸಬೇಕಾದ ಎಚ್ಚರಿಕೆ ಏನು?

    ಇಷ್ಟು ವರ್ಷ ಮಠದ ಅಂಗಳದಲ್ಲಿ ಗವಿಸಿದ್ಧೇಶ್ವರನ ರಥೋತ್ಸವ ನಡೆಯುತ್ತಿತ್ತು. ಭಕ್ತರು ಅದನ್ನು ನೋಡಲು ಬರುತ್ತಿದ್ದರು. ಈ ವರ್ಷ ನಿಮ್ಮ ಹೃದಯದ ಅಂಗಳದಲ್ಲಿ ಆತನ ದಿವ್ಯಸ್ಮರಣೆಯ ರಥ ಎಳೆಯಿರಿ. ಅದನ್ನು ನೋಡಲು ಗವಿಸಿದ್ಧೇಶ್ವರನೇ ನಿಮ್ಮ ಮನೆಗೆ ಬರುತ್ತಾನೆಂದು ನನ್ನ ಭಾವನೆ. ಗವಿಸಿದ್ಧೇಶ್ವರ ಗದ್ದುಗೆ ದರ್ಶನಕ್ಕೆ ಅವಕಾಶವಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ಭಕ್ತರು ದರ್ಶನ ಪಡೆಯಬಹುದು. ಆದರೆ, ಎಲ್ಲಿಯೂ ಗುಂಪುಗೂಡುವಂತಿಲ್ಲ. ಸದ್ಭಕ್ತರಲ್ಲಿ ಅರಿಕೆ ಮಾಡಿಕೊಳ್ಳುವುದೇನೆಂದರೆ ಮಠ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಭಕ್ತರು ಸೇರಿ ತೆಗೆದುಕೊಂಡ ನಿರ್ಣಯವನ್ನು ಪ್ರೀತಿಯಿಂದ ಒಪ್ಪಿಕೊಂಡು ಜಾತ್ರೆಯನ್ನು ಸರಳವಾಗಿ ಆಚರಿಸೋಣ.

    • ಜಾತ್ರೆಯೊಂದಿಗೆ ಸಾಮಾಜಿಕ ಜಾಗೃತಿ ಕಾರ್ಯ ಮಾಡಲು ಪ್ರೇರಣೆಯಾದದ್ದು ಹೇಗೆ?

    ಅಜ್ಜ ಹಾಗೂ ಭಕ್ತರೇ ಪ್ರೇರಣೆ. ನಾವು ಮಾಡುವ ಕೆಲಸದಿಂದ ಜನರು, ಭಕ್ತರಿಗೆ ಏನಾದರೂ ಅನುಕೂಲವಾಗಬೇಕು. ಅದೇ ನಮ್ಮ ಮುಖ್ಯ ಉದ್ದೇಶವಾಗಿದೆ. ಭಕ್ತರೇ ನಮಗೆ ಮಾರ್ಗದರ್ಶನ ಮಾಡುವಷ್ಟು ವಿಚಾರವಂತರಿರುತ್ತಾರೆ. ಅವರಿವರಿಂದ ಬಂದ ವಿಚಾರದ ಎಳೆ ಹಿಡಿದು ಅದಕ್ಕೆ ನಾವು ಹಾಗೂ ಭಕ್ತರು, ಅಧಿಕಾರಿಗಳು ಸೇರಿ ಎಲ್ಲರ ಸಲಹೆ ಸಹಕಾರ ಪಡೆದು ಅನುಷ್ಠಾನಗೊಳಿಸುತ್ತೇವೆ. ರಕ್ತದಾನ, ನೇತ್ರದಾನಕ್ಕೆ ಪ್ರೋತ್ಸಾಹ, ಬಾಲ್ಯವಿವಾಹ ತಡೆ, ಒತ್ತಡದ ಜೀವನದಿಂದ ಮುಕ್ತಿ, ಜಲದೀಕ್ಷೆ , ಲಕ್ಷವೃಕ್ಷೋತ್ಸವ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗಿದೆ.

    • ಬೇರೆ ಜಾತ್ರೆಗಳಿಗಿಂತ ಗವಿಮಠ ಜಾತ್ರೆ ಭಿನ್ನವಾಗಿದ್ದು ಹೇಗೆ?

    ಎಲ್ಲ ಭಕ್ತರು ಮಾಡಿದ್ದು. ಸ್ವಚ್ಛತೆಗೆ ನಮ್ಮ ಆದ್ಯತೆ. ಅದನ್ನು ಭಕ್ತರೇ ನಮಗೆ ಕಲಿಸಿಕೊಟ್ಟಿದ್ದಾರೆ. ಜಾತ್ರೋತ್ಸವದಲ್ಲಿ ನಾನು ನೆಪ ಮಾತ್ರ. ಜಿಲ್ಲೆ ಸೇರಿ ನಾಡಿನ ಮೂಲೆ ಮೂಲೆಯಿಂದ ಭಕ್ತರು ಬಂದು ಸೇವೆ ಮಾಡುತ್ತಾರೆ. ನಾನು ಅವರೆಲ್ಲರ ನಡುವಿನ ಸಂಪರ್ಕಕೊಂಡಿ ಅಷ್ಟೆ. ದಾಸೋಹ ಮಂಟಪ, ವಸತಿಗೃಹ, ಅಂಗಡಿಗಳು ಸೇರಿ ಎಲ್ಲವನ್ನೂ ನಿರ್ವಹಿಸಲು ತಂಡಗಳಿವೆ. ಅವರವರ ಕೆಲಸವನ್ನು ಅವರೇ ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಭಕ್ತರಿಂದಲೇ ಭಿನ್ನವೆನಿಸಿಕೊಂಡಿದೆ ನನ್ನದೇನಿಲ್ಲ.

    •  ಜಾಗೃತಿಗೆ ಸಂಬಂಧಿಸಿದಂತೆ ಮುಂದಿನ ಯೋಜನೆಗಳು ಏನು?

    ಈ ಬಾರಿ ಕರೊನಾದಿಂದಾಗಿ ಯಾವೊಂದು ಸಾಮಾಜಿಕ ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳದ ಬಗ್ಗೆ ಬೇಸರವಿದೆ. ಆದರೂ, ಅನಿವಾರ್ಯವಾಗಿದೆ. ಗವಿಸಿದ್ಧೇಶನ ಪ್ರೇರಣೆಯಂತೆ ನನ್ನ ಕೈಲಾದಷ್ಟು ಸೇವೆ ಮಾಡಬೇಕೆಂದುಕೊಂಡಿರುವೆ. ಭಕ್ತರು, ಸಾಮಾನ್ಯ ಜನರಿಗೆ ಅನುಕೂಲವಾಗುವ ಯಾವ ಕೆಲಸವಾದರೂ ನಾವೆಲ್ಲ ಕೂಡಿ ಮಾಡಬೇಕಿದೆ. ಸಾಮಾಜಿಕ ಪಿಡುಗುಗಳ ನಿವಾರಣೆ ಹಾಗೂ ಸಮಾಜಸುಧಾರಣೆಗೆ ಶ್ರಮಿಸೋಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts