More

    ಅಷ್ಟಮಿ ವೇಳೆ ಮಡಕೆ ತಯಾರಿ ಕಾಯಕಕ್ಕೆ ಚುರುಕು

    ಧನಂಜಯ ಗುರುಪುರ
    ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಮೊಸರುಕುಡಿಕೆ ಉತ್ಸವ ಹಿನ್ನೆಲೆಯಲ್ಲಿ ಕುಂಬಾರರ ಮನೆಗಳಲ್ಲಿ ಮಡಕೆ ತಯಾರಿ ಚುರುಕು ಪಡೆದಿದೆ. ಗಂಜಿಮಠ ಪಂಚಾಯಿತಿ ಬಡಗಉಳಿಪಾಡಿ ಗ್ರಾಮದ ಮಳಲಿಯ ಕೆಲವು ಮನೆಗಳಲ್ಲಿ ಮಡಕೆ ಕಟ್ಟುವ ಕೆಲಸ ಭರದಿಂದ ಸಾಗಿದೆ.

    ಮಳಲಿಯಲ್ಲಿ ಕುಂಬಾರರ ಸಾಕಷ್ಟು ಮನೆಗಳಿವೆ. ಹಿಂದೆ ಇಲ್ಲಿ ಮನೆ ಮನೆಯಲ್ಲಿ ಮಡಕೆ ತಯಾರಿಸಿ ಊರೂರುಗಳಿಗೆ ಮಾರಾಟ ಮಾಡುತ್ತಿದ್ದರು. ಸ್ಟೀಲ್ ಯುಗದ ಧಾವಂತದಲ್ಲಿ ಮಡಕೆ ಉದ್ಯಮಕ್ಕೆ ಹಿನ್ನೆಡೆಯಾಗಿದೆ. ಆದರೆ ಅಷ್ಟಮಿ ಹಬ್ಬದ ವೇಳೆ ಒಂದಷ್ಟು ಬೇಡಿಕೆ ಕುದುರುತ್ತದೆ.
    ಮಳಲಿಯ ಶಿವಪ್ಪ ಕುಲಾಲ್, ಡೊಂಬಯ್ಯ ಕುಲಾಲ್, ನವೀನ ಕುಲಾಲ್, ವಾಸು ಕುಲಾಲ್ ಮೊದಲಾದ ಬೆರಳೆಣಿಕೆಯ ಕುಲಾಲ ಸಮುದಾಯದ ಮಂದಿ ಮಡಕೆ ಉದ್ಯಮ ನಡೆಸುತ್ತಿದ್ದಾರೆ. ಇವರಿಗೆ ಮೊಸರು ಕುಡಿಕೆ ಸಂದರ್ಭದಲ್ಲಿ ಸಂಘ-ಸಂಸ್ಥೆಗಳು ಮತ್ತು ದೇವಸ್ಥಾನಗಳಿಂದ ಮಡಕೆಗಳಿಗಾಗಿ ಆರ್ಡರ್ ಬರುತ್ತದೆ. ಒಬ್ಬೊಬ್ಬರು ಸುಮಾರು 2,000 ಮಡಕೆ ಮಾಡಿಕೊಡುತ್ತಾರೆ. ಈಗ ಒಂದು ಮಡಕೆಗೆ ಖರೀದಿ ಬೆಲೆ 50ರಿಂದ 75 ರೂ. ಆಗಿದೆ.

    ಮಡಕೆಗಾಗಿ ಸಿದ್ಧತೆ: ಹಿಂದಿನ ಕಾಲದಲ್ಲಿ ಏಪ್ರಿಲ್, ಮೇ ತಿಂಗಳಲ್ಲಿ ಹತ್ತಿರದ ಗದ್ದೆಗಳಿಂದ ಆವೆಮಣ್ಣು ಸಂಗ್ರಹಿಸುತ್ತಿದ್ದ ಇವರು, ನಿರಂತರ ಮಡಕೆ ಮಾಡುತ್ತಿದ್ದರು. ಈಗ ಎಲ್ಲಿಂದಲೋ ಮಣ್ಣು, ಕಟ್ಟಿಗೆ ತರಬೇಕಾಗುತ್ತದೆ. ಎಲ್ಲವೂ ದುಬಾರಿ. ಕುಲಕಸುಬಿನಿಂದ ಯಾವುದೇ ಲಾಭವಿಲ್ಲ ಎಂಬುದನ್ನು ಅರಿತ ಕುಲಾಲ ಸಮಾಜದ ಯುವಜನರು ಅನ್ಯ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಲಾಭವಿಲ್ಲದ ಮಡಕೆ ಉದ್ಯಮ ಇಂದು ಉದ್ಯಮವಾಗಿ ಉಳಿದಿಲ್ಲ. ಕೇವಲ ಅಷ್ಟಮಿಗೆ ಸೀಮಿತವಾಗಿದೆ.

    ಒಂದು ಮಡಕೆ ತಯಾರಿಸಲು ಕನಿಷ್ಠ 20 ದಿನ ಬೇಕಾಗುತ್ತದೆ. ಹದ ಮಾಡಿದ ಮಣ್ಣಿಂದ ಮೊದಲು ಹಸಿ ಮಡಕೆ ತಯಾರಿಸಲಾಗುತ್ತದೆ. ಬಳಿಕ ಬಿಸಿಲಿಗೆ ಒಣಗಲಿಡಬೇಕು. ಬಿಸಿಲ್ಲದಿದ್ದರೆ ಇದು ಕಷ್ಟ. ಒಣಗಿದ ನೂರಾರು ಮಡಕೆಗಳನ್ನು ದೊಡ್ಡದಾದ ಮಣ್ಣಿನ ಕುಲುಮೆಯಲ್ಲಿಟ್ಟು ಬೇಯಿಸಲಾಗುತ್ತದೆ. ಒಂದು ಬಾರಿಗೆ ಸುಮಾರು 500 ಮಡಕೆ ಕುಲುಮೆಯಲ್ಲಿಡಲಾಗುತ್ತದೆ. ಕಟ್ಟಿಗೆಯಿಂದ ಹಿತಮಿತವಾಗಿ ಬೇಯಿಸಿದ ಬಳಿಕ ಮಡಕೆ ಹೊರ ತೆಗೆಯಲಾಗುತ್ತದೆ. ಕೆಲವೊಮ್ಮೆ ಅದೃಷ್ಟ ಚೆನ್ನಾಗಿಲ್ಲದಿದ್ದರೆ ಎಲ್ಲ ಮಡಕೆಗಳು ಒಡೆದು ಹೋಗುವ ಸಾಧ್ಯತೆಯೂ ಇರುತ್ತದೆ.

    ಮಡಕೆ ತಯಾರಿ ವೇಳೆ ಅದೃಷ್ಟ ಕೈಕೊಟ್ಟರೆ ಕುಲುಮೆಯಲ್ಲಿದ್ದ ಎಲ್ಲ ಮಡಕೆ ನಷ್ಟವಾಗುತ್ತದೆ. ಇದು ಹಿಂದಿನಿಂದಲೂ ಕುಂಬಾರರು ಅನುಭವಿಸಿದ ಕಷ್ಟ. ಇವರ ಕಷ್ಟ-ನಷ್ಟಕ್ಕೆ ಅಥವಾ ಉದ್ಯಮಕ್ಕೆ ಸರ್ಕಾರದ ನೆರವು ಸಿಗುತ್ತಿದ್ದರೆ ಖಂಡಿತವಾಗಿಯೂ ಈ ಉದ್ಯಮ ಅಳಿಯುತ್ತಿರಲಿಲ್ಲ. ಸರ್ಕಾರದ ಬೆಂಬಲ ಇದ್ದಲ್ಲಿ ಕುಲಾಲ ಸಮುದಾಯ ಮಡಕೆ ಉದ್ಯದಲ್ಲಿ ಆಸಕ್ತಿ ತೋರಿಸಲಿದೆ.
    -ನಾಗೇಶ್ ಕುಲಾಲ್, ಮಳಲಿ ಕುಲಾಲ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts