More

    ಕುಂಭಮೇಳ ಬಿಜೆಪಿಗೆ ಪ್ರತಿಷ್ಠೆ: ಯಶಸ್ವಿಗೊಳಿಸಲು ಟೊಂಕಕಟ್ಟಿ ನಿಂತಿರುವ ಮುಖಂಡರು

    ಮಂಡ್ಯ: ಜಿಲ್ಲೆಯಲ್ಲಿ ಕಾಂಗ್ರೆಸ್‌ನ ‘ಭಾರತ್ ಜೋಡೋ’ ಯಾತ್ರೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಗೆ ‘ಮಹಾಕುಂಭಮೇಳ’ ಕಾರ್ಯಕ್ರಮ ಪ್ರತಿಷ್ಠೆಯಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರು, ಮುಖಂಡರು ಶ್ರಮ ವಹಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಪಕ್ಷಾತೀತವಾಗಿ ಜನರು ಸ್ಪಂದಿಸುತ್ತಿದ್ದು, ಮಹದೇಶ್ವರ ಜ್ಯೋತಿ ರಥಯಾತ್ರೆಗೆ ಭರ್ಜರಿ ಸ್ವಾಗತ ನೀಡಲಾಗುತ್ತಿದೆ.
    ಮಹಾಕುಂಭಮೇಳ ಉತ್ತರ ಭಾರತದ ಕಡೆ ಹೆಚ್ಚು ಪ್ರಖ್ಯಾತಿ ಹೊಂದಿದೆ. ಹಿಂದುಗಳ ಪಾಲಿಗೆ ಇದೊಂದು ವಿಶೇಷ ಕಾರ್ಯಕ್ರಮ. ಅದೇ ಮಾದರಿಯಲ್ಲಿ ಕೆ.ಆರ್.ಪೇಟೆ ತಾಲೂಕು ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ಅ.13ರಿಂದ 16ರವರೆಗೆ ಮೇಳ ಆಯೋಜನೆಗೊಂಡಿದೆ. ಇದು ಬಿಜೆಪಿ ವರ್ಚಸ್ಸು ಹೆಚ್ಚಿಸುವ ಬ್ರಾೃಡಿಂಗ್ ಕಾರ್ಯಕ್ರಮ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ವಿವಿಧ ಮಠದ ಸ್ವಾಮೀಜಿಗಳು, ಗಣ್ಯರು, ರಾಜಕೀಯ ನಾಯಕರು ಸೇರಿದಂತೆ ಪ್ರಮುಖರು ಪಾಲ್ಗೊಳ್ಳುವುದರಿಂದ ಮಂಡ್ಯ ಮಾತ್ರವಲ್ಲದೆ, ರಾಜ್ಯದ ವಿವಿಧೆಡೆಯಿಂದ ನಾಲ್ಕು ದಿನದ ಅವಧಿಯಲ್ಲಿ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ.
    ಹೆಚ್ಚುತ್ತಿದೆ ಕ್ರೇಜ್: ಮಹಾಕುಂಭಮೇಳದ ಪೂರ್ವಭಾವಿಯಾಗಿ ಮಲೆಮಹದೇಶ್ವರ ಬೆಟ್ಟದಿಂದ ಮೂರು ಮಾರ್ಗಗಳಲ್ಲಿ ಮಹದೇಶ್ವರ ಜ್ಯೋತಿ ರಥಯಾತ್ರೆ ಸಂಚಾರ ಮಾಡುತ್ತಿದೆ. ನಗರ, ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿಯೂ ರಥಕ್ಕೆ ಜನರು ಸ್ವಾಗತ ಕೋರುತ್ತಿದ್ದಾರೆ. ಹಲವು ವರ್ಷಗಳ ನಂತರ ನಡೆಯುತ್ತಿರುವ ‘ಮಹಾಕುಂಭಮೇಳ’ ವಿಶೇಷ ಎನ್ನಿಸಿಕೊಂಡಿರುವುದರಿಂದ ಜನರಿಗೂ ಇದರ ಬಗ್ಗೆ ಕ್ರೇಜ್ ಹೆಚ್ಚುತ್ತಿದೆ. ಇನ್ನು ನಾಲ್ಕು ದಿನದ ಅವಧಿಯಲ್ಲಿ ವಿಶೇಷ ಧಾರ್ಮಿಕ ಕೈಂಕರ್ಯ ನಡೆಯಲಿದೆ. ಇಂತಹ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಭಕ್ತರು ಸಜ್ಜಾಗಿದ್ದಾರೆ.
    ಮತ್ತೊಂದೆಡೆ, ಕುಂಭಮೇಳಕ್ಕೆ ಮೆರುಗು ನೀಡಲು ಸಾಂಸ್ಕೃತಿಕ ಕಲಾತಂಡಗಳು ಸಜ್ಜಾಗುತ್ತಿವೆ. ಇದಲ್ಲದೆ ಸಂಗೀತ ಗಾಯನ, ಹಾಸ್ಯ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದಲ್ಲದೆ, ಪ್ರತಿ ಹಂತದಲ್ಲಿಯೂ ವ್ಯವಸ್ಥೆ ಸರಿಯಾಗಿರಬೇಕೆನ್ನುವ ಕಾರಣಕ್ಕೆ ಸಮಿತಿ ರಚನೆ ಮಾಡಲಾಗಿದೆ. ಆಗಮಿಸುವ ಭಕ್ತರಿಗೆ ಊಟದ ವ್ಯವಸ್ಥೆಗೆಂದು 100 ಕೌಂಟರ್ ತೆರೆಯಲಾಗಿದೆ. ಪಾರ್ಕಿಂಗ್ ವ್ಯವಸ್ಥೆ ಇರಲಿದೆ.
    ಮುಖಂಡರಿಗೆ ಜವಾಬ್ದಾರಿ: ಹಲವು ದಿನಗಳಿಂದ ಕುಂಭಮೇಳಕ್ಕೆ ಸಂಬಂಧಿಸಿದಂತೆ ಪೂರ್ವಸಿದ್ಧತೆ ನಡೆಯುತ್ತಿದೆ. ಅದಕ್ಕೆ ತಕ್ಕಂತೆ ಯೋಜನೆಗಳು ಅನುಷ್ಠಾನವಾಗುತ್ತಿವೆ. ಆದರೆ ಇಷ್ಟೆಲ್ಲ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಮುಖಂಡರ ಜವಾಬ್ದಾರಿ ಹೆಚ್ಚಾಗಿದೆ. ಅಂದರೆ, ಜಿಲ್ಲೆಯ ಪ್ರತಿ ಹಳ್ಳಿಯಿಂದ ಜನರನ್ನು ಕರೆದೊಯ್ಯಬೇಕಾದ ಟಾಸ್ಕ್ ಇದೆ. ಇದಕ್ಕೆಂದು ತಾಲೂಕುವಾರು ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಇನ್ನು ಮಹದೇಶ್ವರ ಜ್ಯೋತಿ ರಥಯಾತ್ರೆಗೆ ಸಿಗುತ್ತಿರುವ ಸ್ಪಂದನೆ ಪೂರ್ವಭಾವಿಯಂತಾಗಿದೆ. ಆದ್ದರಿಂದ ನಾಯಕರು, ಮುಖಂಡರು ಜವಾಬ್ದಾರಿ ನಿರ್ವಹಣೆ ಮಾಡಲೇಬೇಕಿದೆ. ಪ್ರಮುಖವಾಗಿ ಮುಂದಿನ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವವರಿಗೂ ಇದು ಪ್ರಮುಖವಾಗಿದೆ.
    ಕೆರಗೋಡಿನಲ್ಲಿ ಅದ್ದೂರಿ ಸ್ವಾಗತ: ಕೆ.ಎಂ.ದೊಡ್ಡಿ ಮಾರ್ಗದಲ್ಲಿ ಆಗಮಿಸಿದ ಮಹದೇಶ್ವರ ಜ್ಯೋತಿ ರಥಯಾತ್ರೆಗೆ ಭಾನುವಾರ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ನೇತೃತ್ವದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು. ಗ್ರಾಮದ ಇತಿಹಾಸ ಪ್ರಸಿದ್ಧ ಪಂಚಲಿಂಗೇಶ್ವರ ದೇವಸ್ಥಾನದ ಬಳಿ ರಥಯಾತ್ರೆಗೆ ಪೂಜೆ ಸಲ್ಲಿಸಿದ ನಂತರ ಸಂಚಾರಕ್ಕೆ ಚಾಲನೆ ನೀಡಲಾಯಿತು. ಆಗಮಿಸಿದ್ದ ಭಕ್ತರಿಗೆ ಅನ್ನದಾಸೋಹ, ಪ್ರಸಾದ ವಿತರಿಸಲಾಯಿತು.
    ಸಿ.ಪಿ.ಉಮೇಶ್ ಮಾತನಾಡಿ, ಕೆ.ಆರ್.ಪೇಟೆ ತಾಲೂಕು ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ಅ.13ರಿಂದ 16ರವರೆಗೆ ಮಹಾಕುಂಭಮೇಳದ ಐತಿಹಾಸಿಕ ಕಾರ್ಯಕ್ರಮ. ಇದರ ಪೂರ್ವಭಾವಿಯಾಗಿ ಮಹದೇಶ್ವರ ಜ್ಯೋತಿ ರಥಯಾತ್ರೆಯನ್ನು ಸ್ವಾಗತಿಸಲಾಗಿದೆ. ಕುಂಭಮೇಳ ಹಿಂದುಗಳ ಪಾಲಿಗೆ ವಿಶೇಷ. ನಾಲ್ಕು ದಿನದ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಆದ್ದರಿಂದ ಇಂತಹ ವೈಭವಯುತ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತೆ ಮನವಿ ಮಾಡಿದರು.
    ಜಿಪಂ ಮಾಜಿ ಸದಸ್ಯ ಚಂದಗಾಲು ಶಿವಣ್ಣ, ಮುಖಂಡರಾದ ವಸಂತ, ಮಹೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts