More

    ಮೈತ್ರಿ ಧರ್ಮಕ್ಕೆ ಕಟ್ಟುಬಿದ್ದು ಕೆಲಸ ಮಾಡಲು ಕುಮಾರಸ್ವಾಮಿ ತಾಕೀತು

    ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಮುಖಂಡರ ಜತೆ ಸಭೆ ನಡೆಸಿ ಚರ್ಚಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮೈತ್ರಿ ಧರ್ಮಕ್ಕೆ ಕಟ್ಟುಬಿದ್ದು ಕೆಲಸ ಮಾಡಲು ತಾಕೀತು ಮಾಡಿದ್ದಾರೆ.

    ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಅಭ್ಯರ್ಥಿ ಯಾರೇ ಆದರೂ ಕೆಲಸ ಮಾಡಬೇಕು. ಎನ್‌ಡಿಎ ಅಭ್ಯರ್ಥಿ ಪರ ನಾವೆಲ್ಲರೂ ಕೆಲಸ ಮಾಡಬೇಕು ಎಂದು ಸೂಚಿಸಿದರು.

    ಜೆಡಿಎಸ್-ಬಿಜೆಪಿ ಮೈತ್ರಿ ವಿಷಯಗಳನ್ನು ಮುಖಂಡರಿಗೆ ತಿಳಿಸಿದ ಕುಮಾರಸ್ವಾಮಿ, ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ಸಾಧಕ-ಬಾಧಕಗಳ ಬಗ್ಗೆ ಮುಖಂಡರಿಂದ ಸಲಹೆ ಪಡೆದರು.

    ಕ್ಷೇತ್ರದಲ್ಲಿ ಪಕ್ಷಕ್ಕೆ ಅನ್ಯಾಯ ಆಗದಂತೆ ಎಚ್ಚರಿಕೆ ಹೆಜ್ಜೆಗಳನ್ನು ಇಡುವಂತೆ ಮುಖಂಡರು ಮನವಿ ಮಾಡಿದರು. ಜತೆಗೆ ಆಕಾಂಕ್ಷಿಗಳ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಹಲವು ಅಭ್ಯರ್ಥಿಗಳ ಬಗ್ಗೆ ಪ್ರಸ್ತಾಪವಾಯಿತು.

    ಜೆಡಿಎಸ್-ಬಿಜೆಪಿ ಒಂದಾಗಿ ಚುನಾವಣೆ ಎದುರಿಸಿದರೆ ಖಚಿತವಾಗಿ ಗೆಲ್ಲಬಹುದು. ಹಿಂದೆ ಬಿ.ಎನ್. ಬಚ್ಚೇಗೌಡರ ಗೆಲುವಿನಲ್ಲಿ ಜೆಡಿಎಸ್ ಪಾತ್ರ ದೊಡ್ಡದಿದೆ. ಈ ಕಾರಣಕ್ಕೆ ಈ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಬಿಜೆಪಿಯನ್ನು ಕೇಳಬೇಕು ಎಂದು ಮುಖಂಡರು ಆಗ್ರಹಿಸಿದರು.
    ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು, ಕೇಂದ್ರ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸುವುದಾಗಿ ಮುಖಂಡರಿಗೆ ತಿಳಿಸಿದರು.

    ಸ್ಪರ್ಧೆಗೆ ನಯವಾಗಿ ತಿರಸ್ಕಾರ

    ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಮುಖಂಡರು ಒತ್ತಾಯ ಮಾಡಿದಾಗ ಅವರಿಬ್ಬರೂ ಬೇಡಿಕೆ ನಯವಾಗಿ ತಿರಸ್ಕರಿಸಿದರು. ಮಾಜಿ ಉಪ ಸ್ಪೀಕರ್ ಕೆ.ಎಂ.ಕೃಷ್ಣಾರೆಡ್ಡಿ, ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕರಾದ ಇ.ಕೃಷ್ಣಪ್ಪ, ಎಚ್.ಎಂ.ರಮೇಶ್ ಗೌಡ, ಡಾ.ಶ್ರೀನಿವಾಸ ಮೂರ್ತಿ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಮುನೇಗೌಡ, ಕ್ಷೇತ್ರದ ಹಿರಿಯ ಮುಖಂಡರಾದ ಮುನೇಗೌಡ, ಡಿ. ಜೆ.ನಾಗರಾಜ್ ರೆಡ್ಡಿ, ನರಸಿಂಹ ಮೂರ್ತಿ, ಹರೀಶ್ ಗೌಡ , ಅಪ್ಪಣ್ಣಯ್ಯ, ಮಧು, ಹೊಸಕೋಟೆ ಶ್ರೀಧರ್ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts