More

    ಕುಲಕಸುಬು ಬದಿಗಿಟ್ಟ ನೇಕಾರರು: ಬದುಕಿಗಾಗಿ ಕಾರ್ಖಾನೆಗಳಲ್ಲಿ ಕೆಲಸ

    ಕುದೂರು: ಕರೊನಾ ಹೊಡೆತಕ್ಕೆ ನೇಕಾರಿಕೆ ಸಂಪೂರ್ಣ ಸ್ತಬ್ಧಗೊಂಡಿದ್ದು, ಕುದೂರು ಗ್ರಾಮದಲ್ಲಿನ ನೇಕಾರರು ಕುಲಕಸುಬು ಬದಿಗಿಟ್ಟು ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡು ಕರೊನಾ ಜತೆಗೆ ಜೀವನ ಬಂಡಿ ಸಾಗಿಸಲು ಸಿದ್ಧವಾಗಿದ್ದಾರೆ.

    ಮಾಗಡಿ ತಾಲೂಕು ಕುದೂರಿನಲ್ಲಿ ನೇಕಾರಿಕೆಯನ್ನೇ ಕುಲ ಕಸುಬನ್ನಾಗಿಸಿಕೊಂಡು ಬದುಕುತ್ತಿರುವ ಅನೇಕ ಕುಟುಂಬಗಳಿವೆ. ಎರಡು ತಿಂಗಳಿನಿಂದ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ ನೇಕಾರರು ಈಗ ದಾಬಸ್‌ಪೇಟೆಯ ಕಾರ್ಖಾನೆಗಳತ್ತ ಮುಖ ಮಾಡಿದ್ದು, ಬದುಕು ಸಾಗಿಸಲು ಯಾವ ಕೆಲಸ ಸಿಕ್ಕಿದರೂ ಸಾಕು ಎನ್ನುವ ಮನಸ್ಥಿತಿಯೊಂದಿಗೆ ಹೆಜ್ಜೆ ಇಟ್ಟಿದ್ದಾರೆ. ಮನೆಯಲ್ಲಿದ್ದ ಕೈಮಗ್ಗ ಮತ್ತು ವಿದ್ಯುತ್ ಚಾಲಿತ ಮಗ್ಗಗಳಲ್ಲಿ ದುಡಿದು ವಾರಕ್ಕೆ ಸುಮಾರು 2 ಸಾವಿರ ರೂ. ಸಂಪಾದಿಸುತ್ತಿದ್ದ ನೇಕಾರರು, ಈಗ ನಮಗೆ ಕೆಲಸ ಕೊಡಿ ಎಂದು ಕಾರ್ಖಾನೆಗಳ ಬಳಿ ಎರಡು ವಾರದಿಂದ ಅಂಗಲಾಚುತ್ತಿದ್ದಾರೆ.

    ಈ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದ ಉತ್ತರ ಭಾರತದ ಕಾರ್ಮಿಕರೂ ಸಹ ಊರುಗಳತ್ತ ತೆರಳಿದ್ದು, ಕೆಲಸ ಹುಡುಕಿ ಬಂದ ನೇಕಾರರ ಮನವಿಗೆ ಸ್ಪಂದಿಸಿರುವ ಖಾಸಗಿ ಸಂಸ್ಥೆಯೊಂದು ಇತ್ತೀಚೆಗೆ ಕುದೂರು ಗ್ರಾಮಕ್ಕೆ ಬಂದು ನೇಕಾರರ ಮನೆಗಳಿಗೆ ಭೇಟಿ ನೀಡಿ ಕೆಲಸ ಮಾಡಲಿಚ್ಚಿಸುವ ನೇಕಾರರನ್ನು ನೇಮಕ ಮಾಡಿಕೊಂಡಿದೆ. ಗ್ರಾಮದಿಂದ ಹೋಗಿಬರಲು ಬಸ್ ವ್ಯವಸ್ಥೆಯನ್ನೂ ಮಾಡಿದೆ. ಹೀಗಾಗಿ ಸಂಕಷ್ಟದಲ್ಲಿದ್ದ ನೂರಾರು ನೇಕಾರರಿಗೆ ಇದರಿಂದ ನೆರವಾಗಿದೆ.

    ಇತರ ಕೆಲಸಗಳತ್ತ ನೇಕಾರರು: ಕುದೂರು ಗ್ರಾಮದಲ್ಲಿರುವ ನೇಕಾರರಲ್ಲಿ ಹಲವರು ವಯಸ್ಕರಿದ್ದು, ಅವರೂ ಸಹ ಕೆಲಸ ಮಾಡಲು ಮುಂದಾಗಿದ್ದು, ಮಾವಿನಕಾಯಿ ದಲ್ಲಾಳಿಗಳ ಜತೆ ತೋಟಗಳಲ್ಲಿ ಮಾವಿನಕಾಯಿ ಕಿತ್ತು ವಾಹನಗಳಿಗೆ ತುಂಬುತ್ತ ದಿನಕ್ಕೆ 400 ರೂ.ವರೆಗೆ ಸಂಪಾದಿಸುತ್ತಿದ್ದಾರೆ. ರೇಷ್ಮೆ ಸೀರೆಗಳ ಜತೆ ಬದುಕು ನೋಡುತ್ತಿದ್ದ ಮತ್ತೆ ಕೆಲವು ನೇಕಾರರು ಈಗ ಮನೆ ಕಟ್ಟುವ ಕೆಲಸದವರ ಜತೆ ಸಿಮೆಂಟ್ ಕಲೆಸುವ, ಮರಳು ಜರಡಿ ಹಿಡಿಯುವ ಕಾಯಕದಲ್ಲಿ ತೊಡಗಿದ್ದಾರೆ. ಒಟ್ಟಾರೆ ಕರೊನಾ ಬದುಕಿನ ಪಾಠ ಕಲಿಸಿದೆ ಎನ್ನುತ್ತಿದ್ದಾರೆ ಗ್ರಾಮದ ನೇಕಾರರು.
    ಸೀರೆಗಳಿಗೆ ಬೇಡಿಕೆ ಇಲ್ಲ: ಕುದೂರು ಗ್ರಾಮದಿಂದ ನೇಯ್ದ ಸೀರೆಗಳನ್ನು ಬೆಂಗಳೂರಿಗೆ ತಲುಪಿಸುತ್ತಿದ್ದ ಗುತ್ತಿಗೆದಾರರೂ ಸಹ ಬೆಂಗಳೂರು ಮಾರುಕಟ್ಟೆಗಳಲ್ಲಿ ವ್ಯಾಪಾರವಿಲ್ಲದೆ ಸುಮ್ಮನೆ ಕುಳಿತಿದ್ದು, ಸೀರೆಗಳಿಗೆ ಬೇಡಿಕೆ ಇಲ್ಲವಾಗಿದೆ. ಸದ್ಯಕ್ಕೆ ಮಗ್ಗದ ಸೀರೆಗಳು ಬೇಡ ಎಂದು ಹೇಳುತ್ತಿದ್ದಾರೆ.

    ಸರ್ಕಾರದ ಯೋಜನೆಗಳ ಲಾಭ ಪಡೆಯುವ ಹೊತ್ತಿಗೆ ನಮ್ಮ ಬದುಕು ಬೀದಿಗೆ ಬಂದಿರುತ್ತದೆ. ಆದ್ದರಿಂದ ನೇಕಾರಿಕೆಯನ್ನೇ ಬಿಟ್ಟು ಇತರ ಕೆಲಸಗಳತ್ತ ಮುಖ ಮಾಡಿದ್ದೇವೆ.
    >ರಂಗನಾಥ ನೇಕಾರ, ಕುದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts