More

    ಕುಕ್ಕೆ ದೇವಳ ಅಭಿವೃದ್ಧಿ ಸಮಿತಿ ಅಸ್ತಿತ್ವಕ್ಕೆ, ರಾಜ್ಯದ ಶ್ರೀಮಂತ ದೇಗುಲದ ಪ್ರಾಧಿಕಾರ ರಚನೆಗೆ ಮುನ್ನುಡಿ

    ಸುಬ್ರಹ್ಮಣ್ಯ/ಮಂಗಳೂರು: ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯದ ಆಡಳಿತವನ್ನು ಅಭಿವೃದ್ಧಿ ಸಮಿತಿ ಅಥವಾ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ತರಬೇಕೇ ಎನ್ನುವ ವಿಚಾರಕ್ಕೆ ತೆರೆಬಿದ್ದಿದೆ. ರಾಜ್ಯ ಸರ್ಕಾರ ಧಾರ್ಮಿಕ ದತ್ತಿ ಇಲಾಖೆ ಮೂಲಕ ಕುಕ್ಕೆ ದೇವಳಕ್ಕೆ ಅಭಿವೃದ್ಧಿ ಸಮಿತಿ ರಚಿಸಿದ್ದು, ಇದು ಪ್ರಾಧಿಕಾರ ರಚನೆಯ ಪ್ರಥಮ ಹೆಜ್ಜೆ ಎಂದೇ ವ್ಯಾಖ್ಯಾನಿಸಲಾಗಿದೆ.

    ದೇವಳದ ವ್ಯವಸ್ಥಾಪನಾ ಸಮಿತಿ ಅವಧಿ ಮುಗಿದು ವರ್ಷ ಪೂರ್ಣಗೊಂಡಿತ್ತು. ನೂತನ ಆಡಳಿತ ಸಮಿತಿ ರಚನೆ ಆಗಾಗ ಪ್ರಸ್ತಾಪವಾಗುತ್ತಿದ್ದರೂ ಸರ್ಕಾರ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಪ್ರಾಧಿಕಾರ ರಚನೆಗಾಗಿ ಸರ್ಕಾರ ಒಲವು ತೋರಿಸಿದ್ದರಿಂದ ವ್ಯವಸ್ಥಾಪನಾ ಸಮಿತಿ ರಚನೆ ಪ್ರಕ್ರಿಯೆಗಳು ನಡೆದಿರಲಿಲ್ಲ. ಈಗ ಅಭಿವೃದ್ಧಿ ಸಮಿತಿ ರಚನೆಯೊಂದಿಗೆ ಗೊಂದಲಕ್ಕೆ ತೆರೆಬಿದ್ದಿದೆ.
    9 ಮಂದಿ ಸದಸ್ಯರ ವ್ಯವಸ್ಥಾಪನಾ ಸಮಿತಿ ಬದಲು ಐವರು ಸದಸ್ಯರ ಅಭಿವೃದ್ಧಿ ಸಮಿತಿ ರಚಿಸಲಾಗಿದ್ದು, ಪ್ರಾಧಿಕಾರ ರಚನೆಯಾಗುವ ತನಕ ಈ ಸಮಿತಿ ಕಾರ್ಯನಿರ್ವಹಿಸಲಿದೆ.

    ಐವರು ಸದಸ್ಯರ ಸಮಿತಿ: ಅಭಿವೃದ್ಧಿ ಸಮಿತಿಗೆ ಐವರು ಸದಸ್ಯರನ್ನು ನೇಮಿಸಿ ಸರ್ಕಾರ ಶುಕ್ರವಾರ ಆದೇಶ ನೀಡಿದೆ. ಪಿ.ಜಿ.ಎಸ್.ಎನ್. ಪ್ರಸಾದ್, ಕೃಷ್ಣ ಶೆಟ್ಟಿ ಕಡಬ, ಪ್ರಸನ್ನ ದರ್ಬೆ, ಎಸ್.ಮೋಹನ್‌ರಾಂ ಸುಳ್ಳಿ, ವನಜಾ ವಿ.ಭಟ್ ಅವರನ್ನು ನೇಮಿಸಲಾಗಿದೆ. ಸಮಿತಿಯ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯಾಗಿ ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್. ನೇಮಕಗೊಂಡಿದ್ದಾರೆ. ಸೋಮವಾರ ಈ ಸಮಿತಿಯು ಅಧಿಕಾರ ವಹಿಸಿಕೊಂಡು, ಮೂರು ವರ್ಷ ಕಾರ್ಯನಿರ್ವಹಿಸಲಿದೆ.

    ಶಾಸಕರೇ ಅಧ್ಯಕ್ಷರು: ಅಭಿವೃದ್ಧಿ ಸಮಿತಿ ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದ್ದರೂ ಗೊಂದಲ ಮುಂದುವರಿದಿದೆ. ದೇವಳದ ಕಾರ್ಯನಿರ್ವಹಣಾಧಿಕಾರಿಯನ್ನು ಸಮಿತಿಯ ಕಾರ್ಯದರ್ಶಿ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಅಧ್ಯಕ್ಷರ ಆಯ್ಕೆ ಬಗ್ಗೆ ಯಾವುದೇ ಸ್ಪಷ್ಟ ಸೂಚನೆ ಇಲ್ಲ. ಈ ಬಗ್ಗೆ ವಿಜಯವಾಣಿಯೊಂದಿಗೆ ಮಾತನಾಡಿದ ಧಾರ್ಮಿಕ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅಭಿವೃದ್ಧಿ ಸಮಿತಿಗೆ ಸ್ಥಳೀಯ ಶಾಸಕರನ್ನು (ಎಸ್.ಅಂಗಾರ) ಅಧ್ಯಕ್ಷರಾಗಿ ನೇಮಿಸಲು ಸೂಚಿಸಲಾಗಿತ್ತು. ಆದೇಶ ಪ್ರಕಟಿಸುವಾಗ ಬಿಟ್ಟು ಹೋಗಿದೆ. ನಾಳೆಯೇ (ಶನಿವಾರ) ಅಧ್ಯಕ್ಷರ ಹೆಸರು ನಮೂದಿಸಿ ಮರು ಆದೇಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರಾಧಿಕಾರ ರಚಿಸುವ ಚಿಂತನೆ ಇದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗ ಅಭಿವೃದ್ಧಿ ದೃಷ್ಟಿಯಿಂದ ಅಭಿವೃದ್ಧಿ ಸಮಿತಿ ರಚಿಸಲಾಗಿದೆ. ಹಾಗಾಗಿ ವ್ಯವಸ್ಥಾಪನಾ ಸಮಿತಿ ರಚಿಸಿಲ್ಲ.
    – ಕೋಟ ಶ್ರೀನಿವಾಸ ಪೂಜಾರಿ, ಧಾರ್ಮಿಕ ದತ್ತಿ ಇಲಾಖೆ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts