More

  ದೇವಳಗಳಲ್ಲಿ ವಸ್ತ್ರಸಂಹಿತೆ ಶೀಘ್ರ ತೀರ್ಮಾನ

  ಸುಬ್ರಹ್ಮಣ್ಯ: ರಾಜ್ಯ ಮುಜರಾಯಿ ಇಲಾಖೆ ಅಧೀನದ ದೇವಳಗಳಲ್ಲಿ ವಸ್ತ್ರಸಂಹಿತೆ ಅಳವಡಿಸುವ ಬಗ್ಗೆ ಅನೇಕ ಸಂಘಟನೆಗಳ ಕಾರ್ಯಕರ್ತರು ಮನವಿ ನೀಡುತ್ತಿದ್ದಾರೆ. ದೇವಳಗಳ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಂಬಂಧ ಎಲ್ಲ ಅಭಿಪ್ರಾಯ ಪಡೆಯಲಾಗುವುದು. ಭಕ್ತರ ಮೇಲೆ ವಸ್ತ್ರಸಂಹಿತೆಯ ಪರಿಣಾಮ, ವಸ್ತ್ರವಿನ್ಯಾಸದ ಬಗೆ ಮತ್ತು ದೇವಳಗಳ ಧಾರ್ಮಿಕ ವಿಚಾರಗಳನ್ನು ಸಮಗ್ರವಾಗಿ ಪರಿಶೀಲಿಸಿ, ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು. ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ವಸ್ತ್ರಸಂಹಿತೆ ಅಳವಡಿಕೆ ಮಾಡಬೇಕು ಎಂದು ಭಕ್ತರು ಮನವಿ ಮಾಡಿದ್ದಾರೆ ಎಂದರು.

  ಶೀಘ್ರ ವ್ಯವಸ್ಥಾಪನಾ ಸಮಿತಿ: ಮುಜರಾಯಿ ವ್ಯಾಪ್ತಿಯ 100ಕ್ಕೂ ಹೆಚ್ಚು ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ಅವಧಿ ಮುಗಿದಿದ್ದು, ಹೊಸ ಸಮಿತಿಗೆ ಅರ್ಜಿ ಕರೆಯಲು ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಬೆಂಗಳೂರಿನಲ್ಲಿ ನಡೆದ ಧಾರ್ಮಿಕ ಪರಿಷತ್‌ನ ಸಭೆಯಲ್ಲಿ ಸೂಚಿಸಲಾಗಿದೆ. ವಾರದೊಳಗೆ ಪ್ರಕ್ರಿಯೆ ಆರಂಭವಾಗಲಿದೆ. ಧಾರ್ಮಿಕ ಪರಿಷತ್ ಅಂತಿಮವಾಗಿ 9 ಜನರ ತಂಡವನ್ನು ಆಯ್ಕೆ ಮಾಡಲಿದೆ. ಒಟ್ಟು ಪ್ರಕ್ರಿಯೆ ಒಂದು ತಿಂಗಳ ಅವಧಿಯೊಳಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

  ಏ.26ರಂದು ಸಾಮೂಹಿಕ ವಿವಾಹ: ಶಾಸಕರ ನೇತೃತ್ವದಲ್ಲಿ ಸಮಿತಿ ರಚಿಸಿ ಏ.26ರಂದು ಕುಕ್ಕೆ ದೇವಳದಿಂದ ಸಾಮೂಹಿಕ ವಿವಾಹ ನಡೆಯಲಿದೆ. ಆದಿ ಸುಬ್ರಹ್ಮಣ್ಯದಲ್ಲಿ ನಿರ್ಮಿತವಾದ 180 ಕೊಠಡಿಗಳ ವಸತಿಗೃಹವನ್ನು ಮಾ.24ರಂದು ಲೋಕಾರ್ಪಣೆಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
  ಶಾಸಕ ಎಸ್.ಅಂಗಾರ, ದೇವಳ ಆಡಳಿತಾಧಿಕಾರಿ, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್., ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್ ಉಪಸ್ಥಿತರಿದ್ದರು.

  ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ
  ಕುಕ್ಕೆ ದೇವಳದ 400ಕ್ಕೂ ಅಧಿಕ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು 15 ದಿನದೊಳಗೆ ಅಳವಡಿಸಲು ಸೂಚಿಸಲಾಗಿದೆ. ಮಾಸ್ಟರ್ ಪ್ಲಾನ್ ಯೋಜನೆಯ 68 ಕೋಟಿ ರೂ. ವೆಚ್ಚದ ಚತುಷ್ಪಥ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಆಗಸ್ಟ್ ಒಳಗೆ ಪೂರ್ಣಗೊಳಿಸಬೇಕು ಎಂದು ಆದೇಶಿಸಲಾಗಿದೆ. ದೇವಳದ ಸಿಬ್ಬಂದಿಗೆ ಭದ್ರತಾ ವಿಚಾರವಾಗಿ ತರಬೇತಿ ಆಯೋಜಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

  ದೇವಳಗಳ ಪುಷ್ಕರಣಿ ಅಭಿವೃದ್ಧಿಗೆ ಅನುದಾನ
  ಪುತ್ತೂರು: ರಾಜ್ಯ ಸರ್ಕಾರ ದೇವಾಲಯಗಳ ಪುಷ್ಕರಣಿಗಳ ಅಭಿವೃದ್ಧಿಗಾಗಿ ಯೋಜನೆ ರೂಪಿಸಿದ್ದು, ಈ ಬಾರಿಯ ಬಜೆಟ್‌ನಲ್ಲಿ ಅನುದಾನ ಮಂಜೂರಾಗಲಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಕೆರೆ ಅಭಿವೃದ್ಧಿಗೂ ಅನುದಾನ ನೀಡಲಾಗುವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
  ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಕೆರೆ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದ ಕೆರೆಯಲ್ಲಿ ದೇವರ ಉತ್ಸವ ನಡೆಯುತ್ತಿರುವ ಹಿನ್ನೆಲೆ ಧಾರ್ಮಿಕ ಮಹತ್ವ ಹೊಂದಿರುವುದರಿಂದ ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.

  ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಪುತ್ತೂರು ಮಂಡಲ ಬಿಜೆಪಿ ನಿಯೋಜಿತ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಬಿಜೆಪಿ ನಿಯೋಜಿತ ಅಧ್ಯಕ್ಷ ಪಿ.ಜಿ.ಜಗನ್ನಿವಾಸ್ ರಾವ್, ದೇವಸ್ಥಾನದ ಆಡಳಿತಾಧಿಕಾರಿ ಲೋಕೇಶ್, ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

  ಏ.26ರಂದು ಸಾಮೂಹಿಕ ವಿವಾಹ: ವಾರ್ಷಿಕ ಜಾತ್ರೆ ಹಿನ್ನೆಲೆಯಲ್ಲಿ ಪುತ್ತೂರು ಸೀಮೆಯಲ್ಲಿ ಏಪ್ರಿಲ್ 10ರಿಂದ 19ರವರೆಗೆ ಯಾವುದೇ ಮಂಗಳ ಕಾರ್ಯ ನಡೆಯುವುದಿಲ್ಲ. ಏ.26ರಂದು ದೇವಾಲಯದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಸುವಂತೆ ಸಚಿವ ಪೂಜಾರಿ ಸೂಚಿಸಿದರು.

  ಸುಳ್ಯದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ
  ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುಳ್ಯದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದರು. ಜನರಿಗೆ ಗುಣಮಟ್ಟದ ಊಟ ಮತ್ತು ಉಪಾಹಾರ ಸಿಗಬೇಕಿದ್ದು, ಆಹಾರ ಗುಣಮಟ್ಟದ ಖಾತ್ರಿಪಡಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನಹರಿಸಬೇಕು ಎಂದು ಹೇಳಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts