More

    ಪುಷ್ಪಾಲಂಕೃತ ರಥದಲ್ಲಿ ಸುಬ್ರಹ್ಮಣ್ಯನ ಹೂತೇರ ಉತ್ಸವ

    ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರೋತ್ಸವ ಪ್ರಯುಕ್ತ ಶುಕ್ರವಾರ ಪುಷ್ಪಾಲಂಕೃತ ರಥದಲ್ಲಿ ದೇವರ ಹೂವಿನ ತೇರಿನ ಉತ್ಸವ ನೆರವೇರಿತು.
    ಮಹಾಪೂಜೆ ನಂತರ ದೇವಳದ ಹೊರಾಂಗಣದಲ್ಲಿ ಬಂಡಿ ಉತ್ಸವ, ಪಾಲಕಿ ಉತ್ಸವ ಹಾಗೂ ಸಂಗೀತ, ಮಂಗಳವಾದ್ಯ, ನಾದಸ್ವರ, ಬ್ಯಾಂಡ್ ಸುತ್ತುಗಳ ಬಳಿಕ ರಥಬೀದಿಗೆ ದೇವರ ಪ್ರವೇಶವಾಯಿತು. ಬಳಿಕ ಉತ್ತರಾದಿ ಮಠದಲ್ಲಿ ಮಯೂರ ವಾಹನ ಸುಬ್ರಹ್ಮಣ್ಯ ದೇವರಿಗೆ ಪೂಜೆ ನೆರವೇರಿತು.

    ಪೂಜೆ ಬಳಿಕ ಸೇವಂತಿಗೆ, ಚೆಂಡು, ಗೊಂಡೆ, ಮಲ್ಲಿಗೆ, ತುಳಸಿ, ಕಾಕಡ, ಸುಗಂದರಾಜ, ಜೀನ್ಯ ಮೊದಲಾದ ಹೂವಿನಿಂದ ಅಲಂಕೃತವಾದ ಹೂವಿನ ತೇರಿನಲ್ಲಿ ದೇವರು ಉತ್ಸವದಲ್ಲಿ ಕಾಶಿಕಟ್ಟೆಗೆ ತೆರಳಿದರು. ಆನೆ ಸೇರಿದಂತೆ ಬಿರುದಾವಳಿಗಳು, ತಂಬಿಲಾಲ, ಬಟ್ಟೆಯ ನಿಶಾನಿ, ಮಕರ ತೋರಣ, ಸತ್ತಿಗೆ, ಜಾಲರಿಕೊಡೆ, ಬೆಳ್ಳಿಯ ಪಂಚ ದೀವಟಿಕೆಗಳು ಉತ್ಸವಕ್ಕೆ ಹೆಚ್ಚಿನ ಮೆರುಗು ನೀಡಿದವು.

    ಸಹೋದರರ ಸಮಾಗಮ: ಹೂವಿನ ತೇರಿನಲ್ಲಿ ಸುಬ್ರಹ್ಮಣ್ಯ ದೇವರು ಸಹೋದರ ಕಾಶಿಕಟ್ಟೆ ಮಹಾಗಣಪತಿಯ ಸನ್ನಿಧಿಗೆ ಆಗಮಿಸಿದರು. ಮಹಾಗಣಪತಿ ಸನ್ನಿಧಾನದಲ್ಲಿ ವಿಶೇಷ ಹೂ ಮತ್ತು ಹಣತೆಗಳ ಶೃಂಗಾರದ ನಡುವೆ ಮಹಾಗಣಪತಿಗೆ ರಂಗಪೂಜೆ ನೆರವೇರಿತು. ಬಳಿಕ ವಾಸುಕಿ ಛತ್ರದ ಕಟ್ಟೆಯಲ್ಲಿ ಕಟ್ಟೆಪೂಜೆ, ಶಿವರಾತ್ರಿ ಕಟ್ಟೆಯಲ್ಲಿ ಮತ್ತು ಸವಾರಿ ಮಂಟಪದಲ್ಲಿ ಕಟ್ಟೆಪೂಜೆ ನೆರವೇರಿತು. ಸವಾರಿ ಮಂಟಪದಲ್ಲಿ ಆಕರ್ಷಕ ಸುಡುಮದ್ದಿನ ಪ್ರದರ್ಶನ ನಡೆಯಿತು.

    ಇಂದು ಪಂಚಮಿ ರಥೋತ್ಸವ
    ದೇವಳದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರೆ ಪ್ರಯುಕ್ತ ಡಿ.19ರಂದು ತೈಲಾಭ್ಯಂಜನ ಮತ್ತು ಪಂಚಮಿ ರಥೋತ್ಸವ ನೆರವೇರಲಿದೆ.
    ಮಧ್ಯಾಹ್ನ ಪಲ್ಲಪೂಜೆ, ರಾತ್ರಿ ವಿಶೇಷ ಪಾಲಕಿ ಉತ್ಸವ ಮತ್ತು ಬಂಡಿ ಉತ್ಸವ ಜರುಗಲಿದೆ. ರಥೋತ್ಸವ ಬಳಿಕ ಸವಾರಿ ಕಟ್ಟೆಯಲ್ಲಿ ಕಟ್ಟೆ ಪೂಜೆ ಮತ್ತು ಆಕರ್ಷಣೀಯ ಕುಕ್ಕೆಬೆಡಿ ಪ್ರದರ್ಶಿತವಾಗಲಿದೆ. 20ರಂದು ಷಷ್ಠಿ ದಿನ ಬ್ರಹ್ಮರಥೋತ್ಸವ ನೆರವೇರಲಿದೆ.

    ಎಡೆಸ್ನಾನ ಇಲ್ಲ
    ಕೋವಿಡ್-19 ಕಾರಣದಿಂದ ಈ ಬಾರಿ ಎಡೆಸ್ನಾನ ಸೇವೆ ನೆರವೇರಲಿಲ್ಲ. ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ನಡೆಸುವ ಉರುಳು ಸೇವೆಗೆ ಕರೊನಾ ಅಡ್ಡಿಯಾಯಿತು. ಚಂಪಾ ಷಷ್ಠಿಯ ಚೌತಿ, ಪಂಚಮಿ ಮತ್ತು ಷಷ್ಠಿಯಂದು ಭಕ್ತರು ಸ್ವಯಂಪ್ರೇರಿತರಾಗಿ ಎಡೆಸ್ನಾನವನ್ನು ನೆರವೇರಿಸುತ್ತಿದ್ದರು. ಆದರೆ ಚೌತಿಯ ದಿನವಾದ ಶುಕ್ರವಾರ ಎಡೆಸ್ನಾನ ಸೇವೆ ಇರಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts