More

    ಬ್ರಹ್ಮರಥ ಎಳೆಯುವವರಿಗೆ ಗುರುತಿನ ಚೀಟಿ

    ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾಷಷ್ಠಿ ಮಹೋತ್ಸವಕ್ಕೆ ಸಂಬಂಧಿಸಿದ ಉತ್ಸವಗಳಿಗೆ ಸಂಬಂಧಿಸಿ ಡಿ.6ರಂದು ಸಾರ್ವಜನಿಕ ಸಭೆ ಕರೆಯಲಾಗುವುದು ಎಂದು ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ಎಸ್.ಅಂಗಾರ ತಿಳಿಸಿದರು.
    ದೇವಸ್ಥಾನದ ಆಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ರಾತ್ರಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯವಸ್ಥೆಗಳ ಕುರಿತು ಚರ್ಚಿಸಲು ಸ್ಥಳೀಯ ಸಂಘ ಸಂಸ್ಥೆಗಳ, ಜನಪ್ರತಿನಿಧಿಗಳ, ವಿವಿಧ ಇಲಾಖಾಧಿಕಾರಿಗಳ, ಗ್ರಾಮ ಪಂಚಾಯಿತಿ ಮತ್ತು ನಾಗರಿಕರ ಸಭೆ ಆಯೋಜಿಸಲಾಗಿದೆ ಎಂದರು.

    ಬ್ರಹ್ಮರಥ ಎಳೆಯುವ ಸಂದರ್ಭ ನೂಕುನುಗ್ಗಲು ತಪ್ಪಿಸಲು ಗುರುತು ಚೀಟಿ ನೀಡುವ ವ್ಯವಸ್ಥೆ ಮಾಡಲಾಗುವುದು. ಈಗ ಮಾಸ್ಟರ್ ಪ್ಲಾನ್ ಕಾಮಗಾರಿಗಳು ನಡೆಯುತ್ತಿರುವುದರಿಂದ ಜಾಗದ ಸಮಸ್ಯೆಯಿದೆ. ಕರೊನಾ ಹಿನ್ನೆಲೆಯಲ್ಲಿ ಸಂತೆಗೆ ಹೆಚ್ಚಿನ ಸ್ಥಳಾವಕಾಶ ನೀಡಲು ಅನುಕೂಲವಿಲ್ಲ. ರಸ್ತೆ ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಸಂತೆ ನಡೆಸಲು ಅವಕಾಶ ನೀಡಲು ಚಿಂತನೆ ಮಾಡಲಾಗಿದೆ. ಈ ಬಾರಿ ಸಂತೆ ವ್ಯಾಪಾರಸ್ಥರು ದೇವಳದೊಂದಿಗೆ ಸಹಕರಿಸಬೇಕು ಎಂದರು.

    ದೇವಳದ ಆಡಳಿತಾಧಿಕಾರಿ, ಪುತ್ತೂರು ಉಪವಿಭಾಗ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್, ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್., ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಅಭಿವೃದ್ಧಿ ಸಮಿತಿ ಸದಸ್ಯರಾದ ಮೋಹನ್‌ರಾಮ್ ಸುಳ್ಳಿ, ವನಜಾ ವಿ.ಭಟ್, ಪ್ರಸನ್ನ ದರ್ಬೆ, ದೇವಳದ ಅಭಿಯಂತ ಉದಯ ಕುಮಾರ್, ದೇವಳದ ಪದ್ಮನಾಭ ಶೆಟ್ಟಿಗಾರ್ ಉಪಸ್ಥಿತರಿದ್ದರು.

    ಹೊರೆಕಾಣಿಕೆಗೆ ಅವಕಾಶ: ಜಾತ್ರಾ ಸಮಯ ಭೋಜನ ಇತ್ಯಾದಿ ವ್ಯವಸ್ಥೆಗಳನ್ನು ನೆರವೇರಿಸಲು ಸ್ವಯಂಸೇವಕರಾಗಿ ಭಾಗವಹಿಸಲು ಸಂಘ ಸಂಸ್ಥೆಗಳ ಸದಸ್ಯರಲ್ಲಿ ಮತ್ತು ಪದಾಧಿಕಾರಿಗಳಲ್ಲಿ ವಿನಂತಿಸಲಾಗುವುದು. ಯಾವುದೇ ಗ್ರಾಮದಿಂದ ಹೊರೆಕಾಣಿಕೆ ತಂದು ಅರ್ಪಿಸಲು ಅವಕಾಶವಿದೆ ಎಂದು ಅಂಗಾರ ಹೇಳಿದರು. ಸವಾರಿ ಮಂಟಪ, ಇಂಜಾಡಿ ಬಳಿ ಸುಳ್ಯದಿಂದ ಬರುವ ವಾಹನಗಳ ನಿಲುಗಡೆಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಮಂಗಳೂರು ಕಡೆಯಿಂದ ಬರುವ ವಾಹನಗಳ ನಿಲುಗಡೆಗೆ ದೇವಳದ ಪದವಿಪೂರ್ವ ಕಾಲೇಜಿನ ಮೈದಾನ ಮತ್ತು ಹೆಲಿಪ್ಯಾಡ್ ಮೈದಾನದಲ್ಲಿ ವ್ಯವಸ್ಥೆ ಮಾಡಲು ಆದೇಶಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts