More

    ಕೀಟ ನಿಯಂತ್ರಣಕ್ಕೆ ಕ್ರಿಮಿನಾಶಕ ಲಭ್ಯ: ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ಮಾಹಿತಿ

    ಕುಕನೂರು: ಪ್ರಸಕ್ತ ಹಿಂಗಾರು ಹಂಗಾಮಿನ ಕಡಲೆ ಬೆಳೆಗೆ ಕಾಣಿಸಿಕೊಂಡಿರುವ ಕೀಟ ಬಾಧೆ ತಡೆಗೆ ರೈತ ಸಂಪರ್ಕ ಕೇಂದ್ರದಲ್ಲಿ ಕ್ರಿಮಿನಾಶಕ ಲಭ್ಯವಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಹಾದಿಮನಿ ತಿಳಿಸಿದರು.

    ತಾಲೂಕಿನ ಭಾನಾಪುರ ಸಮೀಪದ ಜಮೀನೊಂದಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಸ್ತರಣಾ ವಿಭಾಗದ ವಿದ್ಯಾರ್ಥಿಗಳೊಂದಿಗೆ ಬುಧವಾರ ಭೇಟಿ ನೀಡಿ ಕಡಲೆ ಬೆಳೆಗೆ ತಗುಲುವ ಸಾಮಾನ್ಯ ರೋಗ, ಕೀಟ ನಿಯಂತ್ರಣ ಕುರಿತು ಮಾಹಿತಿ ನೀಡಿದರು. ಕಡಲೆ ಬೆಳೆಗೆ ನೆಟೆ ರೋಗ, ಸಿಡಿರೋಗ, ಸೊರಗು ರೋಗ ಹೆಚ್ಚಾಗಿ ಕಾಣಿಸುತ್ತವೆ. ಇದಕ್ಕೆ ಮುಂಜಾಗ್ರತೆ ಕ್ರಮ ಅಗತ್ಯ ಎಂದರು.

    ವಿಜ್ಞಾನಿ ನಾಗೇಶ್ ಬಸಪ್ಪ ಜಾನೇಕಲ್ ಮಾತನಾಡಿ, ಬಿತ್ತನೆಗೆ ಮೊದಲು ಟ್ರೈಕೋಡರ್ಮ 5 ಗ್ರಾಂ ಅಥವಾ ಎರಡು ಗ್ರಾಂ ಕ್ಯಾಪ್ಟನ್ ಥೈರಾಮನ್ನು ಪ್ರತಿ ಕೆಜಿ ಬೀಜಕ್ಕೆ ಲೇಪಿಸಿ ಬಿತ್ತನೆ ಮಾಡುವುದರಿಂದ ನೆಟೆ ರೋಗ, ಸೊರಗು ರೋಗ, ಸಿಡಿ ರೋಗ ನಿಯಂತ್ರಣಕ್ಕೆ ಬರುತ್ತದೆ. ತಲಾ 1 ಕೆಜಿ ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿಯನ್ನು ಸರಿಯಾಗಿ ಜಜ್ಜಿ 8 ರಿಂದ 10 ಗಂಟೆಗಳ ಕಾಲ ನೆನೆಸಿಟ್ಟು ಸೋಸಿ ಸಿಂಪಡಣೆ ಮಾಡುವುದರಿಂದ ಕಾಯಿ ಕೊರಕ ಕೀಟವನ್ನು ನಿಯಂತ್ರಿಸಬಹುದು. ಬಿತ್ತನೆ ಸಮಯದಲ್ಲಿ 20 ಗ್ರಾಂ ಸೂರ್ಯಪಾನ, 20 ಗ್ರಾಂ ಜೋಳವನ್ನು ಪ್ರತಿ ಎಕರೆ ಕಡಲೆ ಬೀಜಕ್ಕೆ ಸೇರಿಸಿ ಬಿತ್ತುವುದರಿಂದ ಪಕ್ಷಿಗಳು ಕೀಟಗಳನ್ನು ಭಕ್ಷಿಸಲು ಅನುಕೂಲವಾಗುತ್ತದೆ. ಕೀಟಗಳ ಕಾಟ ಹೆಚ್ಚಾದರೆ ಪ್ರತಿ ಎಕರೆ ಕಡಲೆ ಬೆಳೆಯಲ್ಲಿ 10 ಸೇರು ಮಂಡಕ್ಕಿ ಚೆಲ್ಲುವಂತೆ ಸಲಹೆ ನೀಡಿದರು.

    ರೈತರಾದ ಶಿವಪುತ್ರಪ್ಪ ಮುದ್ಲಾಪುರ, ರೇಣುಕಾರಾಜ ಕುಂಬಾರ, ನೀಲಕಂಠಯ್ಯ ಸಸಿಮಠ, ಪ್ರಕಾಶ ಸುಳ್ಳದ, ಶರಣಪ್ಪ ಕುಂಬಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts