ಕುಕನೂರು: ಸ್ಥಳೀಯ ಎಪಿಎಂಸಿಯಲ್ಲಿ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಪಟ್ಟಣದ ಎಪಿಎಂಸಿ ಆವರಣದಲ್ಲಿ ರೈತರು ಬುಧವಾರ ಪ್ರತಿಭಟನೆ ನಡೆಸಿದರು. ವರ್ಷದಿಂದ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕುಂಟು ನೆಪ ಹೇಳಿ ಟೆಂಡರ್ ಪ್ರಕ್ರಿಯೆ ನಡೆಸದಿದ್ದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಎಪಿಎಂಸಿ ಆವರಣದಲ್ಲಿ ಇರುವ ವರ್ತಕರ ಮಳಿಗೆಯಲ್ಲಿ ವ್ಯಾಪಾರ ವಹಿವಾಟು ಮಾಡದೇ ಮಳಿಗೆಗಳನ್ನು ಬೇರೆ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಪ್ರತಿಕ್ರಿಯಿಸಿ, ಬೇರೆ ಉದ್ದೇಶಕ್ಕೆ ಬಳಕೆಯಾಗುವ ಮಳಿಗೆಗಳನ್ನು ಎರಡು ದಿನಗಳಲ್ಲಿ ತೆರವುಗೊಳಿಸಲಾಗುವುದು, ವಾರದಲ್ಲಿ ಎರಡು ಬಾರಿ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದರು.
ರೈತರಾದ ಬಸವರಾಜ ಹೂಗಾರ, ಸಾವಿತ್ರಮ್ಮ ತೆಗ್ಗಿನಮನಿ, ಮಹೇಶಪ್ಪ ಬೆದವಟ್ಟಿ, ನಿರ್ಮಲಾ ಹಳ್ಳಿ, ವೀರಪ್ಪ ಕೌದಿ, ಮಂಜುನಾಥ ಚಟ್ಟಿ, ರಾಜು ಮಡಿವಾಳರ, ಶಿವಪುತ್ರಪ್ಪ ನಾಲವಾಡದ ಇತರರಿದ್ದರು.