More

    ಸಮಾಜದಲ್ಲಿ ವರದಕ್ಷಿಣೆ ಪಿಡುಗು ತೊಲಗಲಿ: ನವಲಗುಂದ ಅಭಿನವ ಬಸವಲಿಂಗ ಸ್ವಾಮೀಜಿ ಆಶಯ

    ಕುಕನೂರು: ನವಜೋಡಿಗಳು ಪರಸ್ಪರ ನಂಬಿಕೆ, ವಿಶ್ವಾಸ, ಹೊಂದಾಣಿಕೆ ರೂಢಿಸಿಕೊಂಡರೆ ಜೀವನ ಸುಂದರವಾಗಿರಲಿದೆ ಎಂದು ನವಲಗುಂದ ಸಂಸ್ಥಾನ ವಿರಕ್ತಮಠದ ಅಭಿನವ ಬಸವಲಿಂಗ ಸ್ವಾಮೀಜಿ ಹೇಳಿದರು.

    ಗೊರ್ಲೇಕೊಪ್ಪ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ಕಟ್ಟಿ ಬಸವಲಿಂಗೇಶ್ವರ, ಬಸವಲಿಂಗೇಶ್ವರ, ಪತ್ರಿವನ ಬಸವೇಶ್ವರ ಕಾರ್ತಿಕೋತ್ಸವ ಹಾಗೂ ಪುರಾಣ ರಜತ ಮಹೋತ್ಸವ, ಸಾಮೂಹಿಕ ವಿವಾಹ ಹಾಗೂ ನೂತನ ಉಚ್ಚಾಯ ಉತ್ಸವದ ಸಾನ್ನಿಧ್ಯವಹಿಸಿ ಮಾತನಾಡಿದರು. ದಂಪತಿಗಳ ನಡುವೆ ಪ್ರೀತಿ, ಪ್ರೇಮ ಹಾಗೂ ವಿಶ್ವಾಸ ಇದ್ದರೆ ಬದುಕಿನ ಬಂಡಿ ಸುಗಮವಾಗಿ ನಡೆಯಲಿದೆ. ವರದಕ್ಷಿಣೆ ವಿರುದ್ಧ ಸರ್ಕಾರ -ಸಂಘಮ ಸಂಸ್ಥೆಗಳು ಸಾಕಷ್ಟು ಜಾಗೃತಿ ಮೂಡಿಸುತ್ತಿವೆ. ಆದಾಗ್ಯೂ ಈ ಪಿಡುಗು ತೊಲಗಿಲ್ಲ. ಇದರಿಂದ ಹೆಣ್ಣುಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ. ಇದನ್ನು ಸಂಪೂರ್ಣ ತೊಲಗಿಸಬೇಕಾಗಿದ್ದು, ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದರು.

    ಗೊರ್ಲೇಕೊಪ್ಪ ಗ್ರಾಮ ಪುಟ್ಟದಾಗಿದ್ದರೂ ಕಲಾವಿದರ ಮೂಲಕ ದೇಶ-ವಿದೇಶಗಳಲ್ಲೂ ಹೆಸರು ಮಾಡಿದೆ. ಗ್ರಾಮದ ಪ್ರತಿ ಮನೆ ಕಲಾವಿದರನ್ನು ಹೊಂದಿದೆ. ಕರಡಿಮಜಲು, ನಂದಿಕೋಲು, ವೀರಗಾಸೆ ಕಲೆಯಿಂದ ಹೆಸರು ಮಾಡಿದೆ. ಆದರೆ, ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದ ಕಲೆ, ಸಾಹಿತ್ಯ ಬೆಳಕಿಗೆ ಬರುತ್ತಿಲ್ಲ. ಕೇವಲ ಮೈಸೂರು, ಬೆಂಗಳೂರು ಭಾಗದ ಕಲೆ-ಕಲಾವಿದರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಯಲಬುರ್ಗಾದ ಶ್ರೀಧರಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಹಾಗೂ ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಡಾ.ಮಹಾದೇವ ದೇವರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ ಗುಳಗಣ್ಣನವರ, ಜಿಪಂ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಮಾತನಾಡಿದರು. ಬೆದವಟ್ಟಿ ಶಿವಸಂಗಮೇಶ್ವರ ಸ್ವಾಮೀಜಿ, ಅಡ್ನೂರ ಬ್ರಹ್ಮನಮಠದ ಅಭಿನವ ಪಂಚಾಕ್ಷರ ಸ್ವಾಮೀಜಿ, ಬೇನಾಳ ಹಿರೇಮಠದ ಸದಾಶಿವ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts