More

    ಕುದೂರು ಭೈರವದುರ್ಗ ಬೆಟ್ಟದಲ್ಲಿರುವ ಕಲ್ಯಾಣಿ ಜಾಗದಲ್ಲಿ ಕಾಮಗಾರಿಗೆ ತಡೆ

    ಕುದೂರು: ಭೈರವದುರ್ಗ ಬೆಟ್ಟದಲ್ಲಿರುವ ಕಲ್ಯಾಣಿ ಜಾಗದಲ್ಲಿ ಕಾಮಗಾರಿ ನಡೆಸದಂತೆ ಗ್ರಾಪಂ ಮಾಜಿ ಸದಸ್ಯ ಜಾವಿದ್‌ಗೆ ನೋಟಿಸ್ ನೀಡುವಂತೆ ತಹಸಿಲ್ದಾರ್ ಬಿ.ಜಿ. ಶ್ರೀನಿವಾಸ್ ಪ್ರಸಾದ್ ಸೋಮವಾರ ಆದೇಶಿಸಿದರು.

    ಕುದೂರು ಗ್ರಾಮದ ಭೈರವದುರ್ಗದ ಬೆಟ್ಟದ ಬಳಿ ಕೆಂಪೇಗೌಡರ ಕಾಲದ ಬೆಸ್ತರ ಕಲ್ಯಾಣಿಯ ಕಲ್ಲುಗಳನ್ನು ಜಾವಿದ್ ಕಿತ್ತು ಮಣ್ಣು ಮುಚ್ಚುತ್ತಿದ್ದರು. ಇದನ್ನು ವಿರೋಧಿಸಿ ಗ್ರಾಮಸ್ಥರು ಸೆ.19ರಂದು ಬೆಟ್ಟದ ಮೇಲೆ ಪ್ರತಿಭಟನೆ ನಡೆಸಿದ್ದರು. ವಿಷಯ ತಿಳಿದ ತಹಸೀಲ್ದಾರ್ ಬಿ.ಜಿ. ಶ್ರೀನಿವಾಸ್ ಪ್ರಸಾದ್ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ, ಕಲ್ಯಾಣಿಯ ಬಳಿ ಯಾವುದೇ ಕಾಮಗಾರಿ ಕೈಗೊಳ್ಳದಂತೆ ಆ.31ರಂದು ಭೇಟಿ ನೀಡಿದ್ದ ವೇಳೆ ಸೂಚಿಸಿದ್ದರೂ, ಮತ್ತೆ ಕಲ್ಯಾಣಿ ಮುಚ್ಚುವ ಕೆಲಸಕ್ಕೆ ಮುಂದಾಗಿರುವುದು ಸರಿಯಲ್ಲ. ಕೂಡಲೇ ಜಾವಿದ್‌ಗೆ ನೋಟಿಸ್ ನೀಡುವಂತೆ ಗ್ರಾಪಂ ಪಿಡಿಒ ಬಿ.ಎಸ್.ಲೋಕೇಶ್‌ಗೆ ಸೂಚಿಸಿದರು.

    ಬೆಟ್ಟದ ದೇವಾಲಯ ದಾರಿಗೆ ಒಪ್ಪಿಗೆ: ಭೈರವದುರ್ಗದ ಕೋಟೆ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಲು ಇದ್ದ ಬೆಟ್ಟದ ತಪ್ಪಲಿನ ಗೋಮಾಳ ಮತ್ತು ಅರಣ್ಯ ಇಲಾಖೆ ಜಾಗದಲ್ಲಿ ಇತ್ತೀಚೆಗೆ ಖಾಸಗಿ ವ್ಯಕ್ತಿಯೊಬ್ಬರು ಕಾಂಪೌಂಡ್ ನಿರ್ಮಿಸಲು ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿದ್ದರು. ಈ ಸಂಬಂಧ ತಹಸೀಲ್ದಾರ್‌ಗೆ ದೂರು ಸಲ್ಲಿಸಲಾಗಿತ್ತು. ಸೋಮವಾರ ಮತ್ತೆ ಪರಿಶೀಲನೆ ನಡೆಸಿದ ತಹಸೀಲ್ದಾರ್, ಈ ಜಾಗದಲ್ಲಿ ಪರಿಸರ ನಾಶ ಮಾಡದಂತೆ, ಎಲ್ಲ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸುವಂತೆ ಎಚ್ಚರಿಕೆ ನೀಡಿದರು. ಜತೆಗೆ, ಗ್ರಾಮಸ್ಥರ ಕೋರಿಕೆಯಂತೆ ಬೆಟ್ಟದ ದೇವಾಲಯಕ್ಕೆ ರಸ್ತೆ ಮಾಡಿಸಿಕೊಡಲು ಒಪ್ಪಿಗೆ ಸೂಚಿಸಿದರು. ಹಾಗೂ ದೇವಾಲಯಕ್ಕೆ ತೆರಳುವವರಿಗೆ ತೊಂದರೆ ನೀಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts