More

    ಕೆರೆ, ಅರಣ್ಯ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಎಂ.ಆರ್.ಪಾಟೀಲ್

    ಸೊರಬ: ಜಲ ಸಂರಕ್ಷಣೆ ಎಲ್ಲರ ಕರ್ತವ್ಯ. ಗ್ರಾಮೀಣ ಪ್ರದೇಶದ ಜಲಮೂಲದ ಸಮೀಪ ಆಚರಿಸುವ ಜಲದಿನ ಹೆಚ್ಚು ಅರ್ಥಪೂರ್ಣ ಎಂದು ಹಿರಿಯ ವಕೀಲ ಎಂ.ಆರ್.ಪಾಟೀಲ್ ಹೇಳಿದರು.
    ಜಲ ದಿನ ಪ್ರಯುಕ್ತ ಶುಕ್ರವಾರ ತಾಲೂಕಿನ ಶಾಂತಗೇರಿ ಗ್ರಾಮದ ತಾವರೆಕೆರೆ ಅಂಗಳದಲ್ಲಿ ಗ್ರಾಮಸ್ಥರು, ಪರಿಸರ ಜಾಗೃತಿ ಟ್ರಸ್ಟ್, ಇತರ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕೆರೆ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ವಿಶ್ವದಾದ್ಯಂತ ಇಂದು ಜಲ ದಿನ ನಡೆಯುತ್ತಿದೆ. ಗ್ರಾಮಸ್ಥರು ಕೆರೆಗಳ ಸಂರಕ್ಷಣೆ ಸೇರಿ ನೀರಿನ ಮೂಲಗಳನ್ನು ಸ್ವಚ್ಛವಾಗಿಟ್ಟಿದ್ದಾರೆ. ಕೆರೆಗಳ ಮೌಲ್ಯ, ಉಪಯೋಗಗಳ ಅರಿವು ಮೂಡಿಸಿ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
    ಅಂಡಿಗೆ ಗ್ರಾಪಂ ಸದಸ್ಯ ಎ.ಎಸ್.ಹೇಮಚಂದ್ರ ಶಾಂತಗೇರಿ ಮಾತನಾಡಿ, ಗ್ರಾಮದ ಜಲಮೂಲ, ಗಿಡಮರಗಳ ರಕ್ಷಣೆ ಎಲ್ಲರ ಹೊಣೆ. ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಕೃಷಿ ಚಟುವಟಿಕೆ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಪರಿಸರ ಜಾಗೃತಿ ಟ್ರಸ್ಟ್ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಕೆರೆ ಇತಿಹಾಸದ ಬಗ್ಗೆ ವಿವರ ನೀಡಿ, ಆಚರಣೆಗಳು ಆಚರಣೆಗಷ್ಟೇ ಸೀಮಿತವಾಗದೆ ಜೀವನದ ಮೂಲ ಅವಶ್ಯಕತೆಗಳಲ್ಲಿ ಒಂದಾಗಬೇಕು. ಜಲಸಂರಕ್ಷಣೆಗೆ ಪೂರಕವಾದ ಅರಣ್ಯ ರಕ್ಷಣೆಗೆ ಎಲ್ಲರೂ ಮುಂದಾಗಬೇಕು ಎಂದು ತಿಳಿಸಿದರು.
    ಹೈಕೋರ್ಟ್ ವಕೀಲ ಮಂಜುನಾಥ ಹೆಗಡೆ ಕೆರೆಕೊಪ್ಪ ಮಾತನಾಡಿ, ನೀರಿನ ಅಗತ್ಯ ಅರಿತುಕೊಂಡು ಜಲಮೂಲಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು. ವಕೀಲ ನಾಗಪ್ಪ, ಅರ್ಚಕ ಇಂದೂಧರ ಕೆರೆಪೂಜೆ ನೆರವೇರಿಸಿದರು.

    ಗ್ರಾಮ ಸಮಿತಿ ಅಧ್ಯಕ್ಷ ಶಿವರಾಮಪ್ಪ, ಕಾರ್ಯದರ್ಶಿ ಉಮೇಶ್, ಪ್ರಮುಖರಾದ ಶೇಷಪ್ಪ, ಎ.ಒ.ಆನಂದ, ನೇಮರಾಜ, ಕೃಷ್ಣಮೂರ್ತಿ, ಎ.ಡಿ.ಬಸವರಾಜ್, ಎಸ್.ಟಿ.ಮಹದೇವಪ್ಪ, ಚೌಡಪ್ಪ, ಕುಬೇರಪ್ಪ, ರಮೇಶ್, ಭಾಗ್ಯಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts