More

    8 ಗಂಟೆಯ ವೇತನಕ್ಕೆ ಅಹೋರಾತ್ರಿ ದುಡಿಮೆ!, ಕುದುರೆಮುಖ ವನ್ಯಜೀವಿ ವಿಭಾಗದ ಫಾರೆಸ್ಟ್ ವಾಚರ್‌ಗಳ ಅಳಲು

    ವೇಣುವಿನೋದ್ ಕೆ.ಎಸ್. ಮಂಗಳೂರು

    ದಿನಕ್ಕೆ 24 ಗಂಟೆ ಕೆಲಸ ಮಾಡಿದರೂ ಬಯೋಮೆಟ್ರಿಕ್‌ನಲ್ಲಿ ಎಂಟ್ರಿ 8 ಗಂಟೆ ಮಾತ್ರ. ವೇತನವೂ ಬರೀ 11 ಸಾವಿರ ರೂಪಾಯಿ.
    ಇದು ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ದಿನಗೂಲಿ ನೌಕರರಾಗಿ ದುಡಿಯುತ್ತಿರುವ ಫಾರೆಸ್ಟ್ ವಾಚರ್‌ಗಳ ಅವಸ್ಥೆ.

    ಕುದುರೆಮುಖ ವನ್ಯಜೀವಿ ವಿಭಾಗದಲ್ಲಿ ಒಟ್ಟು 8 ವಲಯಗಳಿವೆ. ಬೆಳ್ತಂಗಡಿ, ಕೆರೆಕಟ್ಟೆ, ಕುದುರೆಮುಖ, ಕಾರ್ಕಳ, ಹೆಬ್ರಿ, ಸಿದ್ದಾಪುರ, ಕೊಲ್ಲೂರು ಮತ್ತು ಅಮವಾಸೆಬೈಲು. ಈ ಎಂಟು ವಲಯಗಳಲ್ಲಿ 120ಕ್ಕೂ ಹೆಚ್ಚು ದಿನಗೂಲಿ ನೌಕರರು ದುಡಿಯುತ್ತಿದ್ದಾರೆ.

    ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಒಂದೊಂದು ವಲಯಗಳಲ್ಲಿ 4ರಂತೆ ಕಳ್ಳಬೇಟೆ ಶಿಬಿರಗಳಿವೆ. ಅವುಗಳಲ್ಲಿ ಒಟ್ಟು 4 ದಿನಗೂಲಿ ನೌಕರರು ಹಗಲು-ರಾತ್ರಿ ಎನ್ನದೆ ಅಲ್ಲೇ ಇರಬೇಕು ಹಾಗೂ 24 ಗಂಟೆಗಳ ಕಾಲ ದುಡಿಯಬೇಕು. ರಜೆಯೂ ಇಲ್ಲ. ಆತ್ಮರಕ್ಷಣೆಗೆ ಯಾವುದೇ ಆಯುಧಗಳು ಇರುವುದಿಲ್ಲ. ನಾವು ಅರಣ್ಯದ ಮೇಲಿರುವ ಪ್ರೀತಿಯಿಂದ ಅಧಿಕಾರಿಗಳು ಗೊತ್ತುಪಡಿಸಿದ ಸ್ಥಳಗಳಲ್ಲಿ ದಿನಂಪ್ರತಿ ಗಸ್ತು ಸಂಚರಿಸುತ್ತ, ಕಾಡುಪ್ರಾಣಿಗಳ ರಕ್ಷಣೆ ಮತ್ತು ಮರ ಕಳ್ಳ ಸಾಗಣಿಕೆಯನ್ನು ತಡೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತೇವೆ ಎನ್ನುತ್ತಾರೆ ಓರ್ವ ವಾಚರ್.

    ಮೂರು ವರ್ಷದಿಂದ ವ್ಯವಸ್ಥೆ ಬದಲು: ಹಿಂದೆ ಅರಣ್ಯ ಇಲಾಖೆಯೊಳಗೇ ವಾಚರ್‌ಗಳಿದ್ದರು. ಗುತ್ತಿಗೆ ಕೆಲಸವೇ ಆಗಿತ್ತು. ಆದರೆ ವೇತನ ಇಲಾಖೆಯಿಂದಲೇ ಬರುತ್ತಿತ್ತು. ಆಗ ಇಷ್ಟು ಸಮಸ್ಯೆ ಇರಲಿಲ್ಲ. ಈಗ ಟೆಂಡರ್ ಪ್ರಕಾರ 8 ಗಂಟೆ ಕೆಲಸ ಮಾಡಿದರೆ ಸಾಕು. ಅಷ್ಟಕ್ಕೆ ಮಾತ್ರವೇ ವೇತನ. ಆದರೆ ಅಧಿಕಾರಿಗಳು ನಮ್ಮನ್ನು 24 ಗಂಟೆ ದುಡಿಸುತ್ತಾರೆ. ಇಂದು ಬೆಳಗ್ಗೆ 9ಕ್ಕೆ ಚೆಕ್‌ಪೋಸ್ಟ್‌ಗೆ ಹೋದರೆ ಮರುದಿನ 9ರವರೆಗೆ ಅಲ್ಲೇ ಇರಬೇಕು. ರೆಸ್ಟ್ ಇಲ್ಲ, ಬಂದ ಬಳಿಕ ಮನೆಗೆ ಹೋಗುವುದಿಲ್ಲ, ಬದಲು ನೇರವಾಗಿ ಫೀಲ್ಡ್ ವರ್ಕ್‌ಗೆ ಹಚ್ಚಲಾಗುತ್ತದೆ.
    ಕುದುರೆಮುಖ ವ್ಯಾಪ್ತಿಯಲ್ಲಿ ಬಿಟ್ಟರೆ ಬೇರೆ ಎಲ್ಲೂ ಈ ರೀತಿ ಇಲ್ಲ. ಅಲ್ಲಿ 8 ಗಂಟೆ ಕೆಲಸ ಮಾಡಿ ಎಲ್ಲಾದರೂ ಹೋಗಬಹುದು. ಇಲ್ಲಿ ಮಾತ್ರವೇ 24 ಗಂಟೆ ಕೆಲಸ ಎನ್ನುತ್ತಾರೆ ವಾಚರ್ ಒಬ್ಬರು. ಕುದುರೆಮುಖ ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್ ಅವರು ಸಮರ್ಥ ಅಧಿಕಾರಿಯಾಗಿದ್ದು, ಯೂನಿಯನ್ ಮೂಲಕ ಅವರಿಗೆ ತಿಳಿಸಿದ್ದೇವೆ. ಆದರೂ ಇನ್ನೂ ನಮ್ಮ ಅಳಲು ಅವರಿಗೆ ಅರ್ಥವಾಗಿಲ್ಲ ಎನ್ನುತ್ತಾರವರು.

    ಅಧಿಕಾರಿಗಳು ವಾಚರ್‌ಗಳನ್ನು ದಿನದ 24 ಗಂಟೆ ಕಾಲ ದುಡಿಸುವುದಲ್ಲದೆ, ಬಯೋಮೆಟ್ರಿಕ್ ಅಳವಡಿಸಿದ್ದಾರೆ. ಆದರೆ ಅದರಲ್ಲಿ 8 ಗಂಟೆ ಕೆಲಸಕ್ಕೆ ಮಾತ್ರ ಸಂಬಳ. ನೌಕರರನ್ನು 24 ಗಂಟೆಗಳ ಕಾಲ ಅಲ್ಲೇ ನಿಲ್ಲುವಂತೆ ಸೂಚಿಸಲಾಗುತ್ತದೆ. ಅಲ್ಲದೆ ಅದಕ್ಕೆ ಸಾಕ್ಷಿಯಾಗಿ ತಮ್ಮ ಭಾವಚಿತ್ರವನ್ನು ತೆಗೆದು ದಿನಂಪ್ರತಿ ಕಳಿಸಬೇಕಾಗುತ್ತದೆ. ಒಂದು ವೇಳೆ 8 ಗಂಟೆ ಕಾಲ ದುಡಿದು ಮನೆಗೆ ತೆರಳಿದರೆ ರಾತ್ರಿ ಹೊತ್ತು ಇರಲಿಲ್ಲ ಎಂದು ಆ ದಿನದ ಸಂಬಳಕ್ಕೆ ಕತ್ತರಿ ಹಾಕಲಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದಾರೆ.

    ಆಯಾ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಇಂತಹ ಅಹವಾಲುಗಳನ್ನು ಬಗೆಹರಿಸಬೇಕು. ಒಂದು ವೇಳೆ ಅವರಿಗೆ ಈಗಾಗಲೇ ದೂರು ನೀಡಿಯೂ ಸಮಸ್ಯೆ ಇತ್ಯರ್ಥವಾಗಿಲ್ಲ ಎಂದಾದರೆ ನಾನು ಪರಿಶೀಲಿಸುತ್ತೇನೆ.

    ಪ್ರಕಾಶ್ ನೆಟಾಲ್ಕಲ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ವೃತ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts