ಕೂಡ್ಲಿಗಿ: ಕುಟುಕುವುದು ಚೇಳುವಿನ ಚಾಳಿಯಾದರೆ ಅದನ್ನು ರಕ್ಷಿಸುವುದು ಮನುಷ್ಯನ ಗುಣವಾಗಬೇಕು ಎಂದು ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಧರ್ಮ ಸಭೆಯಲ್ಲಿ ಮಾತನಾಡಿದರು. ಚೇಳು ಕಟುಕುತ್ತದೆ ಎಂದು ಗೊತ್ತಿದ್ದರೂ ಸಾವು ಬದುಕಿನ ಮಧ್ಯ ಹೋರಾಟ ಮಾಡುತ್ತಿದ್ದ ಚೇಳನ್ನು ನೀರಿನಿಂದ ಹೊರ ತೆಗೆದು ದಡದ ಮೇಲೆ ಬಿಡಲು ಮಹಾಮಹಿರೊಬ್ಬರು ಪ್ರಯತ್ನಿಸುತ್ತಾರೆ. ಈ ವೇಳೆ ಚೇಳು ಕಚ್ಚಿದರೂ ಅದನ್ನು ರಕ್ಷಿಸಿ ಬದುಕಲು ಅವಕಾಶ ಕಲ್ಪಿಸಿ ಕೊಡುತ್ತಾರೆ. ಈ ಗುಣ ಮನುಷ್ಯನಲ್ಲಿ ಬರಬೇಕು. ತೊಂದರೆ ಕೊಟ್ಟವರಿಗೂ ಅವರ ಕಷ್ಟಕಾಲದಲ್ಲಿ ಉಪಕಾರ ಮಾಡುವ ಮೂಲಕ ಮನುಷ್ಯತ್ವ ಮೆರೆಯಬೇಕು ಎಂದರು.
ಎಲ್ಲರೂ ಒಳ್ಳೆಯ ಕಾರ್ಯವನ್ನು ಮಾಡಬೇಕು. ಪ್ರಕೃತಿಯಲ್ಲಿ ಗಿಡ, ಮರಗಳು ಹೂ ಹಣ್ಣು ಕೊಡುವಂತೆ ನಾವು ಸಹ ಯಾವುದೇ ಫಲಾಪೇಕ್ಷೆ ಇಲ್ಲದೆ ಪರೋಪಕಾರ ಮಾಡಬೇಕು. ಈ ಗುಣಗಳೊಂದಿಗೆ ವಿದ್ಯಾರ್ಥಿಗಳು ಬೆಳೆಯೇಬೇಕು. ಜ್ಞಾನಾರ್ಜನೆ ಗುರಿ ಯಾಗಬೇಕೆ ವಿನಃ ಮೊಬೈಲ್‌ನಲ್ಲಿ ಗೇಮ್ ಇತ್ಯಾದಿ ಚಟುವಟಕೆಯಲ್ಲ ಎಂದು ಕಿವಿ ಮಾತು ಹೇಳಿದರು.
ಚಿತ್ರದುರ್ಗದ ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಂ. ವೀರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಯಡೆಯೂರು ಶ್ರೀ ಸಿದ್ದಲಿಂಗೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೆ.ಎಂ. ತಿಪ್ಪೇಸ್ವಾಮಿ, ಕಾರ್ಯದರ್ಶಿ ಡಾ.ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಕೆ.ಎಂ. ನಾಗರತ್ನಮ್ಮ, ವೀರೇಶ್ ಗುಳಿಗಿ, ಶಿವಂಕರ್ ಸ್ವಾಮಿ, ಗೊಗ್ಗ ಚನ್ನಬಸವರಾಜ, ಶಂಭುಲಿಂಗಸ್ವಾಮಿ ಉಪಸ್ಥಿತರಿದ್ದರು.