More

    ಬರದೂರಿಗೆ ಜಲಸಿರಿ ಭಾಗ್ಯ

    ವೀರೇಶ ಅಂಗಡಿ ಕೂಡ್ಲಿಗಿ

    ಬರಹೊದ್ದು ಮಲಗಿದ್ದ ರಾಜ್ಯದ 2ನೇ ಅತಿ ದೊಡ್ಡ ತಾಲೂಕು ಕೂಡ್ಲಿಗಿ ಜನತೆಯ ಕನಸಿನ ಕೂಸಾದ ನೀರಾವರಿ ಯೋಜನೆ ಕಾಮಗಾರಿಯು ಶರವೇಗದಲ್ಲಿ ನಡೆಯುತ್ತಿದೆ.

    ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಜೂನ್ 25 ರಂದು ತಾಲೂಕಿನ 74 ಕೆರೆಗಳಿಗೆ ನೀರು ಹರಿಸಲು 800 ಕೋಟಿ ರೂ. ಬಿಡುಗಡೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದರು. ನಂತರ ನೀರಾವರಿ ನಿಗಮದಿಂದ ಬೆಳಗಾವಿಯ ಆದಿತ್ಯ ಕನ್‌ಸ್ಟ್ರಕ್ಷನ್ ಹಾಗೂ ದೊಡ್ಡ ಹನುಮಂತಪ್ಪ ಎಂಬುವರಿಗೆ ಯೋಜನೆಯ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಿ, ಆ.15ರಂದು ಕಾಮಗಾರಿಗೆ ಚಾಲನೆ ನೀಡಿದ್ದರು. ಅಂದಿನಿಂದಲೇ ಬಿರುಸಾಗಿ ನಡೆಸುತ್ತಿರುವ ಪೈಪ್‌ಲೈನ್ ಕಾಮಗಾರಿ ಈಗಾಗಲೇ 40 ಕಿ.ಮೀ.ವರೆಗೆ ಪೂರ್ಣಗೊಂಡಿದೆ.

    ಮೊದಲ ಹಂತವಾಗಿ ಹೂವಿನ ಹಡಗಲಿ ತಾಲೂಕು ರಾಜವಾಳ ಗ್ರಾಮದ ಜಾಕ್‌ವೆಲ್‌ನಿಂದ ಕೊಟ್ಟೂರು ತಾಲೂಕಿನ ಉಜ್ಜಿನಿ ಬಳಿ ಭೈರದೇವರ ಗುಡ್ಡದ ಕೆರೆ ಇಲ್ಲಿಂದ ಸುಂಕದಕಲ್ಲು ಕೆರೆ ಮೂಲಕ ಪಾಲಯ್ಯನಕೋಟೆ ಕೆರೆ ಭರ್ತಿಗೊಳಿಸಲಾಗುತ್ತದೆ. ಇಲ್ಲಿಂದ ಲಿಫ್ಟ್ ಮೂಲಕ ತಾಲೂಕಿನ 74 ಕೆರೆಗಳಿಗೆ ನೀರುಣಿಸಲಾಗುತ್ತದೆ. ಈಗಾಗಲೇ ಉಜ್ಜಿನಿ ಕೆರೆಗೆ ಮೊದಲ ಹಂತವಾಗಿ 67 ಕಿ.ಮಿ. ಅಂತರದಲ್ಲಿ 16 ಕೆರೆ ತುಂಬಿಸಲು ಕಾಮಗಾರಿ ಮುಗಿದಿದ್ದು, 2ನೇ ಹಂತದಲ್ಲಿ ಪಾಲಯ್ಯನಕೋಟೆ ಕೆರೆಯ ಮೂಲಕ 58 ಕೆರೆಗಳಿಗೆ ನೀರುಣಿಸುವ ಕಾಮಾಗಾರಿ ಪ್ರಾರಂಭವಾಗಿದೆ. ಕೂಡ್ಲಿಗಿ ಹೋಬಳಿಯ ಅಮರದೇವರ ಗುಡ್ಡ, ಶಿವಪುರ, ಹಿರೇಹೆಗ್ಡಾಳ್, ಕುಪ್ಪಿನಕೆರೆ ಗ್ರಾಮಗಳ ಸುತ್ತಲಿನ ಕೆರೆಗಳಿಗೆ ನೀರು ಹರಿಸುವ ಕಾಮಾಗಾರಿ ಸಹ ಪೂರ್ಣಗೊಂಡಿದೆ.

    ಫ್ಲೋರೈಡ್‌ಯುಕ್ತ ನೀರೇ ಗತಿ: ಬೇಸಿಗೆಯಲ್ಲಿ ಹನಿ ನೀರಿಗೂ ಪರದಾಡುತ್ತಿದ್ದ ತಾಲೂಕಿನ ಜನರಿಗೆ, ವರ್ಷವಿಡೀ ಕುಡಿಯಲು ಫ್ಲೋರೈಡ್‌ಯುಕ್ತ ನೀರೇ ಗತಿಯಾಗಿತ್ತು. ಇದರಿಂದ ಅನೇಕರು ಮೈ ಕೈ ನೋವಿನಂಥ ಸಮಸ್ಯೆ ಎದುರಿಸುತ್ತಿದ್ದಾರೆ. ಪರಿಶಿಷ್ಟ ಜಾತಿಯವರೇ ಹೆಚ್ಚಾಗಿರುವ ಇಲ್ಲಿ, ಅನಕ್ಷರಸ್ಥರ ಸಂಖ್ಯೆಯೂ ಅಧಿಕವಿದೆ. ಕೃಷಿಯೇ ಮೂಲ ಕಸುಬಾಗಿದ್ದು, ಮಳೆ ಬಂದರೆ ಮಾತ್ರ ಬೆಳೆ ಎಂಬ ಪರಿಸ್ಥಿತಿ ಇದೆ. ಬರದ ನಾಡೆಂಬ ಪಟ್ಟಕಟ್ಟಿಕೊಂಡಿರುವ ಇಲ್ಲಿನ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.

    ನೀರು ಬರುವುದು ಎಲ್ಲಿಂದ..?
    ಹೂವಿನಹಡಗಲಿ ತಾಲೂಕು ರಾಜವಾಳದ ತುಂಗಭದ್ರಾ ನದಿಯಿಂದ ಎರಡು ಹಂತಗಳಲ್ಲಿ ಲಿಫ್ಟ್ ಮೂಲಕ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. ಈ ಕಾಮಾಗಾರಿ 2023ರ ಜೂನ್ ವೇಳೆಗೆ ಅಂತಿಮಗೊಳಿಸುವ ಮಾತಾಗಿದೆ. ಆದರೆ, ಪ್ರಗತಿ ಕಾರ್ಯ ಚುರುಕಾಗಿರುವುದರಿಂದ ಅವಧಿಗೆ ಮುನ್ನವೆ ಮುಗಿಯುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

    ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಭರದಿಂದ ಸಾಗಿದ್ದು, ಅವಧಿಗೆ ಮುನ್ನವೇ ಮುಗಿವ ವಿಶ್ವಾಸವಿದೆ. ರೈತರು ತಮ್ಮ ಜಮೀನುಗಳಲ್ಲಿ ಪೈಪ್ ಅಳವಡಿಕೆಗೆ ತೊಂದರೆ ನೀಡದೆ ಗುತ್ತಿಗೆದಾರರಿಗೆ ಸಹಕರಿಸಬೇಕು. ಇದರಿಂದ ಕಾಮಗಾರಿ ಬೇಗ ಮುಗಿದು ತಾಲೂಕಿನ ನೀರಾವರಿ ಕನಸು ಶೀಘ್ರದಲ್ಲೇ ನನಸಾಗುತ್ತದೆ.
    | ಎನ್.ವೈ. ಗೋಪಾಲಕೃಷ್ಣ, ಕೂಡ್ಲಿಗಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts