More

    ಕೂಡಲಸಂಗಮದ ಸಂಗಮೇಶ್ವರ ದೇಗುಲಕ್ಕೆ ನುಗ್ಗಿದ ನೀರು

    ಕೂಡಲಸಂಗಮ: ಕೂಡಲಸಂಗಮದ ಸಂಗಮೇಶ್ವರ ದೇವಾಲಯಕ್ಕೆ ಬುಧವಾರ ಬೆಳಗ್ಗೆ ಕೃಷ್ಣಾ, ಮಲಪ್ರಭಾ ನದಿ ನೀರು ಚರಂಡಿ ಮೂಲಕ ನುಗ್ಗಿದ್ದು, ಭಕ್ತರು 2 ಅಡಿ ನೀರಿನಲ್ಲಿಯೇ ದಿನವಿಡೀ ದರ್ಶನ ಪಡೆದರು.

    ಕೃಷ್ಣಾ, ಮಲಪ್ರಭಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ಮಂಡಳಿ ಅಧಿಕಾರಿಗಳು ನದಿ ದಡದ ಪ್ರವೇಶ ನಿಷೇಧಿಸಿದ್ದು, ಅಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಸಂಗಮೇಶ್ವರ ದೇವಾಲಯ ಆವರಣಕ್ಕೆ ಬಂದ ನೀರನ್ನು ಯಂತ್ರದ ಮೂಲಕ ನಿರಂತರ ಹೊರ ಹಾಕಲಾಗುತ್ತಿದೆ.

    ಕೃಷ್ಣಾ ನದಿಯ ಮೆಟ್ಟಿಲುಗಳ ಮೂಲಕ ನೀರು ದೇವಾಲಯ ಪ್ರವೇಶಿಸಲು ಅರ್ಧ ಮೆಟ್ಟಿಲು ಮಾತ್ರ ಉಳಿದಿದೆ. ಅರ್ಧ ಮೆಟ್ಟಿಲು ನೀರು ಬಂದರೆ ಸಂಗಮೇಶ್ವರ ದೇವಾಲಯ ಸಂಪೂರ್ಣ ಜಲಾವೃತಗೊಳ್ಳುವುದು.

    ಮಲಪ್ರಭಾ ನದಿ ದಡದ ಘನಮಂಟೇಶ್ವರ ಗುಡಿ ಸಂಪೂರ್ಣ ಜಲಾವೃತಗೊಂಡಿದೆ. ದೇವಾಲಯ ಹೊರ ಆವರಣದ ಮಾರಾಟ ಮಳಿಗೆ ಹಿಂಭಾಗ, ರಥ ಬೀದಿ ಬಳಿ ನೀರು ಸುತ್ತುವರಿದಿದೆ. ಕಾಮತ್ ವಸತಿ ಗೃಹಕ್ಕೂ ನೀರು ನುಗ್ಗಿದೆ.

    ಕೂಡಲಸಂಗಮದ ಭಜಂತ್ರಿ ಕಾಲನಿ, ಅಂಬೇಡ್ಕರ್ ಕಾಲನಿ ಹಾಗೂ ಕೆಂಗಲ್ಲ, ಕಜಗಲ್ಲ, ವರಗೋಡದಿನ್ನಿ ಗ್ರಾಮಗಳಿಗೆ ನೀರು ನುಗ್ಗಿದ್ದು, ಜನರ ಬದುಕು ಅತಂತ್ರವಾಗಿದೆ.

    ಕೂಡಲಸಂಗಮದ ಮುಖ್ಯ ಬಜಾರ್, ದೇವಾಲಯ ಹೊರ ಆವರಣದ ಮಾರಾಟ ಮಳಿಗೆ ವ್ಯಾಪಾರಿಗಳು ಅಂಗಡಿಯಲ್ಲಿಯ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಧನ್ನೂರ-ಇದ್ದಲಗಿ-ಬೆಳಗಲ್ಲ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯ ಹಳ್ಳಗಳಲ್ಲಿ ನೀರು ನುಗ್ಗಿದ್ದರಿಂದ ಸಂಪರ್ಕ ಕಡಿತಗೊಂಡಿದೆ. ಬುಧವಾರ ಬೆಳಗಿನ ಜಾವ ಅಧಿಕ ಪ್ರಮಾಣದ ನೀರು ಬಂದಿದ್ದರಿಂದ ನದಿ ದಡದಲ್ಲಿಯ ರೈತರ ಪಂಪ್‌ಸೆಟ್‌ಗಳು ಮುಳುಗಿವೆ. ನದಿ ದಡದ ರೈತರ ಭೂಮಿಗೆ ನೀರು ನುಗ್ಗಿದ್ದರಿಂದ ಅಧಿಕ ಬೆಳೆ ಹಾನಿಯಾಗಿದೆ.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts