More

    ಮದ್ಯ ನಿಷೇಧ ಆಯೋಗ ರಚಿಸಿ

    ಕೂಡಲಸಂಗಮ: ರಾಜ್ಯದಲ್ಲಿ ಬಡತನ, ದೌರ್ಜನ್ಯ, ಅಪರಾಧ, ಅನಕ್ಷರತೆ, ಮೌಢ್ಯತೆಗೆ ಕಾರಣವಾದ ಮದ್ಯಪಾನ ನಿಷೇಧಿಸಲು ಸರ್ಕಾರ ಮದ್ಯಪಾನ ನಿಷೇಧ ಆಯೋಗ ಹಾಗೂ ತಜ್ಞರ ಸಮಿತಿ ರಚಿಸಲು ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ಕರ್ನಾಟಕ ಮದ್ಯ ನಿಷೇಧ ಆಂದೋಲನ ಹಾಗೂ ವಿವಿಧ 54 ಸಂಘಟನೆಗಳ ನೇತೃತ್ವದಲ್ಲಿ ಮದ್ಯ ನಿಷೇಧಕ್ಕೆ ಆಗ್ರಹಿಸಿ ಕೂಡಲಸಂಗಮದಲ್ಲಿ ಕಳೆದ 3 ದಿನಗಳಿಂದ ನಡೆದ ಹೋರಾಟದಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿ, ಸರ್ಕಾರ ಮದ್ಯಪಾನ ನಿಷೇಧಕ್ಕಾಗಿ ಮಠಾಧೀಶರು, ಸಾಮಾಜಿಕ ಹೋರಾಟಗಾರರು ಹಾಗೂ ಮಹಿಳಾ ಸಂಘಟನೆಗಳ ಸಭೆ ಕರೆದು ಪ್ರಾಥಮಿಕ ಹಂತವಾಗಿ ಆಯೋಗ ರಚಿಸಬೇಕು ಎಂದು ಒತ್ತಾಯಿಸಿದರು.

    ಬಿಹಾರ ರಾಜ್ಯದಲ್ಲಿ ಸರ್ಕಾರ ಸಂಪೂರ್ಣ ಮದ್ಯ ನಿಷೇಧ ಜಾರಿ ಮಾಡಿದ್ದು, ಅಲ್ಲಿ ಯಾವುದೇ ಆರ್ಥಿಕ ನಷ್ಟ ಉಂಟಾಗಿಲ್ಲ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ನಿಷೇಧ ಮಾಡಬೇಕು. ಕಳೆದ 3 ದಿನಗಳಿಂದ ಹೋರಾಟ ನಡೆದಿದ್ದು, ಯಾವುದೇ ಜನಪ್ರತಿನಿಧಿಗಳು ಭೇಟಿ ನೀಡಿ ಸಮಸ್ಯೆ ಆಲಿಸುವ ಕಾರ್ಯ ಮಾಡಿಲ್ಲ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಬೇಕು ಎಂದು ಆಗ್ರಹಿಸಿದರು.

    ಇಂದು ಶ್ರಮದಾನ ಸತ್ಯಾಗ್ರಹ
    ಗ್ರಾಮೀಣ ಕೂಲಿ ಕಾರ್ಮಿಕ ಸಂಘದ ರಾಜ್ಯ ಸಂಚಾಲಕಿ ಸ್ವರ್ಣ ಭಟ್ಟ ಮಾತನಾಡಿ, ಜ.30 ರಂದು ಬೆಳಗ್ಗೆ ಶ್ರಮದಾನ ಸತ್ಯಾಗ್ರಹ, 11 ಗಂಟೆಗೆ ಸಮಾವೇಶ ಹಾಗೂ ಧರಣಿ ಸತ್ಯಾಗ್ರಹ ಮುಕ್ತಾಯ ಸಮಾರಂಭ ನಡೆಯಲಿದೆ. ವಿವಿಧ ಮಠಾಧೀಶರು, ಹೋರಾಟಗಾರರು ಭಾಗವಹಿಸುವರು. ನಮ್ಮ ಹೋರಾಟದ ಕೂಗು ಕೇಳದೆ ಸರ್ಕಾರ ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಕುಳಿತಿದೆ. ಸರ್ಕಾರಕ್ಕೆ ನಾವು ಬದುಕುವುದು ಬೇಡವಾಗಿದ್ದು, ಮತ ಮಾತ್ರಬೇಕಾಗಿದೆ. ನಮ್ಮ ಕೂಗು ಕೇಳದೆ ಇದ್ದರೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡುತ್ತೇವೆ ಎಂದು ಎಚ್ಚರಿಸಿದರು.

    ಜಲದಲ್ಲಿ ಸ್ತ್ರೀಯರ ಸತ್ಯಾಗ್ರಹ
    ಬುಧವಾರ ಬೆಳಗ್ಗೆ 9 ಗಂಟೆಗೆ ಕೃಷ್ಣಾ ನದಿಯಲ್ಲಿ ಮಹಿಳೆಯರು ನಡುಮಟ್ಟದ ನೀರಿಗಿಳಿದು ಹೆಂಡ ಬೇಡ ತುಂಡು ಭೂಮಿ ಬೇಕು, ಬೀರು ಬೇಡ ನೀರು ಬೇಕು, ಅಮಲಿನ ಕೇಂದ್ರ ಬೇಡ ಆರೋಗ್ಯ ಕೇಂದ್ರ ಬೇಕು, ಸಾರಾಯಿ ಬೇಡ ಶಿಕ್ಷಣ ಬೇಕು, ಸಾರಾಯಿ ತೆರಿಗೆ ಕೋಟಿ ಕೋಟಿ- ಬಡವರ ಜೀವನ ಲೂಟಿ ಲೂಟಿ ಎಂಬ ನಾಮಲಕ ಹಿಡಿದು ಏನೇ ಬರಲಿ ಒಗಟ್ಟಿರಲಿ, ಗೆಲ್ಲುವವರೆಗೆ ಹೋರಾಟ ಎಂಬ ಘೋಷಣೆಯೊಂದಿಗೆ ಜಲ ಸತ್ಯಾಗ್ರಹ ಆರಂಭಿಸಿದರು. ಜಯಘೋಷಗಳ ಮಧ್ಯೆ ಯಾರಿಗೆ ಹೇಳಲವ್ವ ನನ್ನ ಬಾಳಿನ ಕಥೆ, ಗೋಳಿನ ಕಥೆ, ತಂದೆ ಸತ್ತ, ಮಾವ ಸತ್ತ, ಮಗ ಸತ್ತ…. ಹಾಡಿಗೆ ಹಲಗೆ ನಾದ ಮಾಡಿದ್ದು ಜನರ ಕಣ್ಣಲ್ಲಿ ನೀರು ತರಿಸಿತು.

    ಎಳೆನೀರು ಕುಡಿಸಿದ ಶ್ರೀಗಳು
    ಬುಧವಾರ 11 ಗಂಟೆ ವೇಳೆಗೆ ಬಸವಜಯ ಮೃತ್ಯುಂಜಯ ಶ್ರೀಗಳು ಆಗಮಿಸುತ್ತಿದ್ದಂತೆ ನೀರಿನಿಂದ ಹೊರ ಬಂದ ಹೋರಾಟಗಾರರು ಕಳೆದ 3 ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದೇವೆ. ಜನಪ್ರತಿನಿಧಿಗಳು ಯಾರೂ ಬಂದಿಲ್ಲ ಎಂದು ಅಳಲು ತೋಡಿಕೊಂಡರು. ಮದ್ಯ ನಿಷೇಧ ಹೋರಾಟದಲ್ಲಿ ಸಾವನಪ್ಪಿದ ರೇಣುಕಮ್ಮನ ಗೌರವಾರ್ಥವಾಗಿ ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ರಾಯಚೂರಿನ ರಮ್ಜಾನಬಿ, ರೇಣುಕಮ್ಮ, ಅಭಯ್, ಬಳ್ಳಾರಿಯ ಶಂಕ್ರಮ್ಮ, ಕೊಟ್ರಮ್ಮರಿಗೆ ಬಸವಜಯ ಮೃತ್ಯುಂಜಯ ಶ್ರೀಗಳು ಎಳೆನೀರು ಕುಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts