More

    ಮಂಡಳಿಯಿಂದ ವಚನ ಸಾಹಿತ್ಯ ಪ್ರಸಾರವಾಗಲಿ

    ಕೂಡಲಸಂಗಮ: ಸರ್ಕಾರ ಆರಂಭಿಸಿದ ಬಸವ ಕಲ್ಯಾಣ ಹಾಗೂ ಕೂಡಲಸಂಗಮ ಅಭಿವೃದ್ಧಿ ಮಂಡಳಿಗಳು ಬಸವತತ್ವ, ವಚನ ಸಾಹಿತ್ಯ ಪ್ರಸಾರ ಕಾರ್ಯ ಮಾಡದೆ ಭೌತಿಕ ಕಟ್ಟಡಗಳ ನಿರ್ಮಾಣ ಮಾಡುತ್ತಿರುವುದು ದುರಂತ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಹೇಳಿದರು.

    ಬಸವಣ್ಣನವರ 888ನೇ ಜಯಂತಿ ನಿಮಿತ್ತ ಬಸವಣ್ಣನ ಐಕ್ಯ ಸ್ಥಳಕ್ಕೆ ಪ್ರಾರ್ಥನೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
    ಶರಣರು ಬೌದ್ಧಿಕ ಸಾಹಿತ್ಯಕ್ಕೆ ಆದ್ಯತೆ ಕೊಟ್ಟರೆ, ವಚನ ಸಾಹಿತ್ಯ ಪ್ರಸಾರಕ್ಕಾಗಿ ಆರಂಭವಾದ ಮಂಡಳಿಗಳು ಭೌತಿಕ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ಕೊಡುತ್ತಿವೆ. ಮಂಡಳಿಯಿಂದ 2000ರಲ್ಲಿ ನಿರ್ಮಾಣವಾದ ಕೆಲವು ಕಟ್ಟಡಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ.

    ಸರ್ಕಾರ ಮಂಡಳಿಯ ಮೂಲಕ ವಚನ ಸಾಹಿತ್ಯ ಪ್ರಕಟಣೆ, ಶರಣ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸುವ ಕಾರ್ಯ ಮಾಡಬೇಕು ಎಂದರು.
    ಬಸವ ಧರ್ಮ ಪೀಠದಿಂದ ಕೂಡಲಸಂಗಮದಲ್ಲಿ ಶರಣ ಮೇಳ, ಬಸವ ಕಲ್ಯಾಣದಲ್ಲಿ ಕಲ್ಯಾಣ ಪರ್ವ, ಅಲ್ಲಮಗಿರಿಯಲ್ಲಿ ಗಣಲಿಂಗ ಮೇಳ, ಧಾರವಾಡದಲ್ಲಿ ಶರಣೋತ್ಸವ, ಬೆಂಗಳೂರಿನಲ್ಲಿ ಬಸವೋತ್ಸವ ಕಾರ್ಯಕ್ರಮದ ಮೂಲಕ ವಚನ ಸಾಹಿತ್ಯ ಪ್ರಸಾರ ಮಾಡುವ ಕಾರ್ಯ ಮಾಡುತ್ತಿದೆ. ಶರಣ ಮೇಳದ ಮೂಲಕ ಕೂಡಲಸಂಗಮ ಜಗತ್ತಿಗೆ ಪರಿಚಿತವಾಯಿತು. ಇಂತಹ ವಚನ ಸಾಹಿತ್ಯ ಬಿತ್ತರಿಸುವ ಕಾರ್ಯಕ್ರಮವನ್ನು ಮಂಡಳಿ ಹಮ್ಮಿಕೊಳ್ಳಬೇಕು. ಬಸವಾದಿ ಶರಣರ ತತ್ವಗಳನ್ನು ಪ್ರತಿ ಮನೆಗೂ ತಲುಪಿಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದರು.

    ನಂತರ ಬಸವ ಧರ್ಮ ಪೀಠದ ಧ್ಯಾನ ಮಂಟಪದಲ್ಲಿ ಸಾಂಕೇತಿಕವಾಗಿ ತೊಟ್ಟಿಲು ಕಾರ್ಯಕ್ರಮ ಮಾಡಲಾಯಿತು. ಬೆಂಗಳೂರು ಬಸವ ಮಂಟಪದ ಮಾತೆ ಬಸವರತ್ನಾ, ಮಾತೆ ತುಂಗಮ್ಮ, ರತ್ನಮ್ಮ, ಸಂಗಮೇಶ್ವರ ಉಚಿತ ಪ್ರಸಾದ ನಿಲಯದ ಅಧ್ಯಕ್ಷ ಜಿ.ಜಿ. ಪಾಟೀಲ, ಲೋಹಿತಾದೇವಿ, ನಾಗರತ್ನಾ ಮುಂತಾದವರು ಇದ್ದರು.

    ಕೂಡಲಸಂಗಮ ಅಭಿವೃದ್ಧಿ ಮಂಡಳಿ ಮೇಲಧಿಕಾರಿಗಳು ಬಸವ ಜಯಂತಿ ದಿನ ಯಾರು ಇರಲಿಲ್ಲ. ಮಂಡಳಿಯ ಕೆಳಹಂತದ ಸಿಬ್ಬಂದಿ ಬಸವಣ್ಣ ಐಕ್ಯ ಸ್ಥಳಕ್ಕೆ ಮಾರ್ಲಾಪಣೆ ಮಾಡಿದರು. ಬಸವೇಶ್ವರ ವೃತ್ತ್ತವನ್ನು ಮಂಡಳಿ ಸಿಬ್ಬಂದಿ ಶುಚಿಗೊಳಿಸುವ ಕಾರ್ಯವನ್ನು ಮಾಡಿರಲಿಲ್ಲ. ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಸವೇಶ್ವರ ವೃತ್ತದ ಬಸವಣ್ಣನ ಪುತ್ಥಳಿಗೆ ಮಾರ್ಲಾಪಣೆ ಮಾಡಿದರು. ಬಸವಣ್ಣನ ಹೆಸರಿನಲ್ಲೇ ಮಂಡಳಿಗೆ ಸರ್ಕಾರ ಅನುದಾನ ಕೊಡುವುದು. ಬಸವಣ್ಣನ ಐಕ್ಯ ಮಂಟಪದ ಆದಾಯದಲ್ಲೇ ಮಂಡಳಿ ಸಿಬ್ಬಂದಿಗೆ ವೇತನ ಪಾವತಿಯಾಗುವುದು. ಮಂಡಳಿಯ ಅಧಿಕಾರಿಗಳು, ಸಿಬ್ಬಂದಿ ಬಸವೇಶ್ವರ ವೃತ್ತದ ಬಸವಣ್ಣನ ಮೂರ್ತಿಯನ್ನು ಸ್ವಚ್ಛಗೊಳಿಸಿ ದೀಪಾಲಂಕಾರ ಮಾಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

    
    
    Community-verified icon

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts