More

    ಟಿಕೆಟ್​ ರಹಿತ ಪ್ರಯಾಣ, 20.19 ಲಕ್ಷ ದಂಡ ವಸೂಲಿ

    ವಿಜಯವಾಣಿ ಸುದ್ದಿಜಾಲ ಗದಗ
    ಕಳೆದ ಜನವರಿಯಿಂದ ಜೂನ್​ ತಿಂಗಳ ವರೆಗೆ ಟಿಕೆಟ್​ ರಹಿತ 21,034 ಜನರ ಪ್ರಯಾಣಕ್ಕೆ ಜಿಲ್ಲೆಯಲ್ಲಿ 20.19 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್​ ಹುದ್ದಾರ ಹೇಳಿದರು.
    ಕೆಎಸ್​ಆರ್​ಟಿಸಿ ಕಚೇರಿಯಲ್ಲಿ ಶುಕ್ರವಾರ ತನಿಖಾಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು, ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸುವುದು ಹಾಗೂ ಚಾಲನಾ ಸಿಬ್ಬಂದಿಗಳಲ್ಲಿ ಶಿಸ್ತು ಮೂಡಿಸುವ ನಿಟ್ಟಿನಲ್ಲಿ ತನಿಖಾಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ತನಿಖಾಧಿಕಾರಿಗಳು ಸಾರಿಗೆ ಆದಾಯ ಸೋರಿಕೆ ತಡೆಗಟ್ಟಲು ಹೆಚ್ಚಿನ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು. ಉತ್ತಮ ಗುಣಮಟ್ಟದ ಪ್ರಕರಣಗಳನ್ನು ಪತ್ತೆ ಮಾಡಬೇಕು ಎಂದು ತಿಳಿಸಿದರು.
    ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಎಚ್​. ರಾಮನಗೌಡರ ಮಾತನಾಡಿ, ಶಕ್ತಿ ಯೋಜನೆ ಜಾರಿಯಾದ ನಂತರ ಮಹಿಳೆಯರು ಸೇರಿದಂತೆ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ನಿಗಧಿತ ನಿಲುಗಡೆಗಳಲ್ಲಿ ಕಡ್ಡಾಯವಾಗಿ ಬಸ್​ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ, ಹತ್ತಿಸಿಕೊಂಡು ಹೋಗುವಂತೆ, ಪ್ರಯಾಣಿಕರೊಂದಿಗೆ ಸೌಜನ್ಯತೆಯಿಂದ ವತಿರ್ಸುವಂತೆ ಹಾಗೂ ಸುರಕ್ಷಿತ ಕ್ರಮಗಳ ಪಾಲನೆಯ ಬಗ್ಗೆ ಚಾಲನಾ ಸಿಬ್ಬಂದಿಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
    ಸಭೆಯಲ್ಲಿ ಉತ್ತಮ ಸಾಧನೆ ಮಾಡಿದ ತನಿಖಾ ಸಿಬ್ಬಂದಿಗಳಾದ ಬಸವಂತಪ್ಪ ತಳ್ಳಳ್ಳಿ, ಈಶಪ್ಪ ಪಟ್ಟಣಶೆಟ್ಟಿ, ಭೀಮಪ್ಪ ದಾನಪ್ಪಗೋಳ, ಅಮರನಾಥ ಕುಂಟೋಜಿ, ರಾಜೇಶ ಮನಸೂರ ಹಾಗೂ ಗೋವಿಂದ ಲಮಾಣಿ ಹಾಗೂ ಚಾಲಕರಾದ ಹುಸೇನ್​ ಸಾಬ್​ ಮುಲ್ಲಾನವರ, ಅಶೋಕ ಶಿವಶರಣ ಅವರಿಗೆ ನಗದು ಪುರಸ್ಕಾರ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

    ಬಾಕ್ಸ್​:
    ಮಹಿಳೆಯರಿಗೆ ಬಸ್ಸುಗಳಲ್ಲಿ ಪ್ರಯಾಣ ಉಚಿತವಾಗಿದೆ, ಆದರೆ ಟಿಕೆಟ್​ ಪಡೆಯುವುದು ಕಡ್ಡಾಯವಾಗಿರುತ್ತದೆ. ಇಲ್ಲದಿದ್ದರೆ ಸ್ಥಳದಲ್ಲಿಯೇ ದಂಡ ನೀಡಬೇಕಾಗುತ್ತದೆ. ಪ್ರತಿಯೊಬ್ಬರು ತಪ್ಪದೇ ಪ್ರಯಾಣದ ಅಧಿಕೃತ ಟಿಕೆಟ್​ ಪಡೆದು ಪ್ರಯಾಣ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts