More

    ಪ್ರಯಾಣಕ್ಕೆ ಸಾರ್ವಜನಿಕರ ಪರದಾಟ ; ಡಿಪೋ ಬಿಟ್ಟು ಹೊರಬರದ ಬಸ್‌ಗಳು

    ಕೋಲಾರ: ಸರ್ಕಾರಿ ನೌಕರರೆಂದು ಪರಿಗಣಿಸುವುದು, ಸೇವಾ ಭದ್ರತೆ ಸೇರಿ ಇನ್ನಿತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ದಿಢೀರ್ ಮುಷ್ಕರದ ಪರಿಣಾಮ ಶುಕ್ರವಾರ ಇಡೀ ದಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಂಚಾರ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಪರದಾಡುವಂತಾಯಿತು.

    ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಬೇಡಿಕೆಯೊಂದಿಗೆ ಸಾರಿಗೆ ನೌಕರರ ಸಂಘಟನೆ ಗುರುವಾರ ವಿಧಾನಸೌಧ ಚಲೋ ನಡೆಸಿತ್ತು. ಈ ವೇಳೆ ನೌಕರರ ಸಂಘದ ಮುಖಂಡರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿರುವುದು ನೌಕರರ ಸಿಟ್ಟಿಗೆ ಕಾರಣವಾಗಿದ್ದು, ಬೆಳಗ್ಗೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರು. ತಾಲೂಕು ಕೇಂದ್ರಗಳಲ್ಲಿನ ಡಿಪೋಗಳಲ್ಲಿದ್ದ ಬಸ್‌ಗಳನ್ನು ನೌಕರರು ಹೊರ ತೆಗೆಯದೆ ಮುಷ್ಕರ ನಡೆಸುತ್ತಿದ್ದಾರೆ. ರಾತ್ರಿ ಬೇರೆ ನಿಲ್ದಾಣಗಳಲ್ಲಿ ತಂಗಿದ್ದ ಬಸ್‌ಗಳನ್ನು ಅಲ್ಲಲ್ಲೇ ನಿಲ್ಲಿಸಲಾಗಿತ್ತು.

    ಬೆಳಗಿನ ಜಾವ 5.30ರಿಂದ 6ರ ಅವಧಿಯಲ್ಲಿ ಬೆಂಗಳೂರಿನಿಂದ ಕೋಲಾರ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಿಗೆ ಸಂಚಾರ ಆರಂಭಿಸಿದ ಬಸ್ ಚಾಲಕ ಹಾಗೂ ನಿರ್ವಾಹಕರು ಕೋಲಾರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಂದು ಬಿಟ್ಟವರು ಮತ್ತೆ ಸಂಚಾರ ಮುಂದುವರಿಸದೆ ಮುಷ್ಕರದಲ್ಲಿ ಭಾಗಿಯಾಗಿದ್ದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತು.

    ಪೂರ್ವ ಮಾಹಿತಿ ಇಲ್ಲದೆ ಕೆಲಸ ಕಾರ್ಯಗಳಿಗೆಂದು ಬೆಂಗಳೂರು, ಆಂಧ್ರ ಕಡೆ ವಿವಿಧ ಕೆಲಸಕ್ಕೆ ಹೋಗಬೇಕಾದವರು, ಸರ್ಕಾರಿ, ಖಾಸಗಿ ಸಂಸ್ಥೆಗಳ ಉದ್ಯೋಗಿಗಳು, ಸಾರ್ವಜನಿಕರು ಪ್ರಯಾಣಕ್ಕೆ ಸಾರಿಗೆ ಬಸ್ ಲಭ್ಯವಿಲ್ಲವೆಂದು ತಿಳಿದು ಸಂಕಷ್ಟಕ್ಕೆ ಸಿಲುಕಿದರು. ಗ್ರಾಮೀಣ ಭಾಗದಿಂದ ಪಟ್ಟಣ, ನಗರ ಪ್ರದೇಶದ ಶಾಲಾ ಕಾಲೇಜುಗಳಿಗೆ ಬರಬೇಕಾದ ವಿದ್ಯಾರ್ಥಿಗಳು ಬಸ್‌ಗೆ ಕಾದು ಮನೆಗೆ ವಾಪಸಾದರು.

    ನಗರದ ಹಳೇ ಬಸ್ ನಿಲ್ದಾಣ ಹಾಗೂ ಕ್ಲಾಕ್ ಟವರ್ ಬಳಿ ಬೆಂಗಳೂರು, ವಿ ಕೋಟ ಇನ್ನಿತರೆಡೆ ತೆರಳಲು ಖಾಸಗಿ ಬಸ್‌ಗಾಗಿ ನೂರಾರು ಮಂದಿ ನೆರೆದಿದ್ದರು, ಆಟೊಗಳಲ್ಲಂತೂ ಚಾಲಕರು ಮಿತಿ ಮೀರಿ ಪ್ರಯಾಣಿಕರನ್ನು ತುಂಬಿಸಿಕೊಂಡದ್ದಲ್ಲದೇ ದುಬಾರಿ ಬಾಡಿಗೆ ವಸೂಲಿ ಮಾಡಿದರು.

    ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ಕೆಲಸದ ಅವಧಿ ನಿಗದಿ ಪಡಿಸಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬುದು ನಮ್ಮ ಬಹುದಿನಗಳ ಬೇಡಿಕೆ. ಈ ಬೇಡಿಕೆಗಳ ಸಂಬಂಧ ಹಿಂದೆ ಮುಷ್ಕರ ನಡೆಸಿದಾಗ ಮಾರ್ಚ್ ತಿಂಗಳಲ್ಲಿ ಬಗೆರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು, ಆದರೆ ಸರ್ಕಾರ ಅಂದಿನಿಂದ ಇಂದಿನವರೆಗೆ ನೌಕರರ ಜತೆ ಸರ್ಕಾರ ಚೆಲ್ಲಾಟವಾಡಿಕೊಂಡು ಬಂದಿದೆ.
    ಗೋಪಾಲಗೌಡ, ಜಿಲ್ಲಾ ಕೆಎಸ್‌ಆರ್‌ಟಿಸಿ ನೌಕರರ ಸಂಘದ ಪ್ರತಿನಿಧಿ

    ಸಾರಿಗೆ ನೌಕರರ ಬೇಡಿಕೆ ನ್ಯಾಯಯುತವಾಗಿದ್ದೇ ಆಗಿರಬಹುದು, ಬಗೆಹರಿಸುವ ಜವಾಬ್ದಾರಿ ಸರ್ಕಾರದ್ದು. ಆದರೆ ದಿಢೀರನೆ ಮುಷ್ಕರ ನಡೆಸಿರುವುದರಿಂದ ಊರಿಂದ ಊರಿಗೆ ಹೋಗಲು ಸರ್ಕಾರಿ ಬಸ್ಸನ್ನೇ ನಂಬಿರುವ ನಮ್ಮಂತಹವರಿಗೆ ತೊಂದರೆ ಆಗಿದೆ.
    ಮುನಿಕೃಷ್ಣಪ್ಪ, ಶ್ರೀನಿವಾಸಪುರ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts