ಬಣಕಲ್: ಚಾರ್ಮಾಡಿ ಘಾಟಿಯ ಬಿದಿರುತಳ ಸಮೀಪ ಕೆಎಸ್‌ಆರ್‌ಟಿಸಿ ಎರಡು ಬಸ್‌ಗಳು ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿದ್ದು ಇಬ್ಬರೂ ಚಾಲಕರ ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶುಕ್ರವಾರ ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ಸಾಗುತ್ತಿದ್ದ ಬಸ್ ಮತ್ತು ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಬಸ್ ಇಕ್ಕಟ್ಟಾದ ರಸ್ತೆಯಲ್ಲಿ ಡಿಕ್ಕಿ ಹೊಡೆದುಕೊಂಡಿವೆ. ಗಾಯಗೊಂಡ ಚಾಲಕರಿಬ್ಬರನ್ನೂ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಿಂದ ಕೊಟ್ಟಿಗೆಹಾರದವರೆಗೂ ವಾಹನಗಳು ಸಾಲುಗಟ್ಟಿ ನಿಂತು ಟ್ರಾಫಿಕ್‌ಜಾಮ್ ಉಂಟಾಗಿತ್ತು. ಹಲವು ಪ್ರಯಾಣಿಕರು 10 ಕಿ.ಮೀ ನಡೆದು ಕೊಟ್ಟಿಗೆಹಾರ ತಲುಪಿದರು. ಬಣಕಲ್ ಎಸ್‌ಐ ಜಂಬೂರಾಜ್ ಮಹಾಜನ್, ಹೈವೇ ಪ್ಯಾಟ್ರೋಲ್ ಎಸ್‌ಐ ಹೇಮಾ, ಎಎಸ್‌ಐ ಟಿ.ಕೆ.ಶಶಿ, ಪೊಲೀಸ್ ಸಿಬ್ಬಂದಿ, ಸಮಾಜ ಸೇವಕ ಮೊಹಮ್ಮದ್ ಆರೀಫ್, ಸ್ಥಳೀಯರು ರಸ್ತೆಯಿಂದ ಬಸ್‌ಗಳನ್ನು ತೆರವುಗೊಳಿಸಿದರು. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾರ್ಮಾಡಿ ಘಾಟಿಯಲ್ಲಿ ಅಪಘಾತ ನಡೆದ ಸ್ಥಳದಲ್ಲಿ 2019ರಲ್ಲಿ ಭೂಕುಸಿತದಿಂದ ರಸ್ತೆ ಒಂದು ಬದಿ ಕುಸಿದಿತ್ತು. 4 ವರ್ಷವಾದರೂ ದುರಸ್ತಿ ಕಾಮಗಾರಿ ಪೂರ್ಣಗೊಳಿಸದೆ ರಸ್ತೆ ಇಕ್ಕಟ್ಟಾಗಿದೆ. ರಸ್ತೆಯಲ್ಲಿ ದಟ್ಟ ಮಂಜು ಕವಿದಿದ್ದರಿಂದ ಕಾಮಗಾರಿ ಸ್ಥಳ ಕಾಣದೇ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿವೆ. ತಡೆಗೋಡೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು.