More

    ಸಾರಿಗೆ ನೌಕರರ ಹಾಜರಾತಿ ಹೆಚ್ಚಳ

    ಮಂಗಳೂರು/ಉಡುಪಿ: ಕೆಎಸ್ಸಾರ್ಟಿಸಿ ನೌಕರರು ಸರ್ಕಾರದ ಬಿಗಿ ಕ್ರಮದ ಪರಿಣಾಮ ಕರ್ತವ್ಯಕ್ಕೆ ಹಾಜರಾಗುವ ಪ್ರಮಾಣ ಮತ್ತಷ್ಟು ಹೆಚ್ಚಿದೆ.
    ಮಂಗಳೂರಿನಲ್ಲಿ ಭಾನುವಾರ ಮಧ್ಯಾಹ್ನ 60 ಬಸ್‌ಗಳು ರಸ್ತೆಗೆ ಇಳಿದಿವೆ. ಪುತ್ತೂರಿನಲ್ಲಿ 53 ಬಸ್‌ಗಳು ಕಾರ್ಯಾಚರಣೆಗೆ ಇಳಿದಿವೆ. ಶನಿವಾರ ರಾತ್ರಿ ಮಂಗಳೂರಿನಿಂದ ವೋಲ್ವೋ, ರಾಜಹಂಸ ಬಸ್‌ಗಳು ಸಂಚರಿಸಿವೆ. ಬೆಳಗ್ಗೆಯೇ ಹುಬ್ಬಳ್ಳಿ, ಬಾಗಲಕೋಟೆ, ಮಂತ್ರಾಲಯಗಳಿಗೆ ಬಸ್ ಓಡಿಸಲಾಗಿದೆ.

    ಪುತ್ತೂರಿನಿಂದ ಬೆಂಗಳೂರಿಗೆ ಭಾನುವಾರ ರಾತ್ರಿಯಿಂದ ಬಸ್ ಓಡಾಟ ಶುರುವಾಗಿದೆ. ದೂರದ ಊರುಗಳಿಗೆ ನಿಧಾನವಾಗಿ ಬಸ್ ಸಂಚಾರ ಏರ್ಪಡುತ್ತಿದ್ದು, ಏ.12ರಿಂದ ಶೇ.50ರಷ್ಟು ಬಸ್ ಓಡಾಟ ನಡೆಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.

    ಮಂಗಳೂರಿನಿಂದ ಧರ್ಮಸ್ಥಳ, ಪುತ್ತೂರು, ಸುಬ್ರಹ್ಮಣ್ಯ, ಮೈಸೂರು ಮಾರ್ಗದಲ್ಲಿ ಬಸ್‌ಗಳ ಓಡಾಟ ಹಳಿಗೆ ಬರುತ್ತಿದೆ. ಬೆಳ್ತಂಗಡಿ, ಉಜಿರೆಗಳಲ್ಲಿ ಸರ್ಕಾರಿ ಬಸ್‌ಗಳ ಓಡಾಟ ಹೆಚ್ಚಳವಾಗಿದೆ. ಭಾನುವಾರ ರಜಾ ದಿನವಾದ್ದರಿಂದ ಕೆಎಸ್ಸಾರ್ಟಿಸಿ ಬಸ್ ಸಂಚಾರದಲ್ಲಿ ಹೆಚ್ಚಳವಾದರೂ ಜನರು ಇರಲಿಲ್ಲ. ಅದೇ ರೀತಿ ಕೆಎಸ್ಸಾರ್ಟಿಸಿ ರೂಟ್‌ಗಳಲ್ಲಿ ಖಾಸಗಿ ಬಸ್‌ಗಳು ನಿರಾತಂಕವಾಗಿ ಓಡಾಟ ನಡೆಸುತ್ತಿವೆ. ಸುಳ್ಯ, ಉಪ್ಪಿನಂಗಡಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಮಡಿಕೇರಿ ಮಾರ್ಗದಲ್ಲಿ ಖಾಸಗಿ ಬಸ್, ಮ್ಯಾಕ್ಸಿಕ್ಯಾಬ್‌ಗಳು ಸಂಚರಿಸುತ್ತಿವೆ.

    ಉಡುಪಿಯಿಂದ ಹುಬ್ಬಳ್ಳಿ, ಬೆಂಗಳೂರು, ಕಾರ್ಕಳ, ಮೈಸೂರು ಭಾಗಗಳಿಗೆ 10 ಬಸ್‌ಗಳು ತೆರಳಿವೆ. ಸೋಮವಾರದಿಂದ ಮತ್ತಷ್ಟು ಬಸ್ಸುಗಳು ಸಂಚಾರ ಸೇವೆ ನೀಡಲಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳೂರು ಮತ್ತು ಪುತ್ತೂರು ವಿಭಾಗಗಳಲ್ಲಿ ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿರುವ ಕೆಎಸ್ಸಾರ್ಟಿಸಿಯ 650ಕ್ಕೂ ಅಧಿಕ ನೌಕರರಿಗೆ ಮಾರ್ಚ್ ತಿಂಗಳ ವೇತನ ಸೋಮವಾರ ಪಾವತಿಯಾಗಲಿದೆ. ಮಂಗಳೂರಿನಲ್ಲಿ 450 ಹಾಗೂ ಪುತ್ತೂರಿನಲ್ಲಿ 200 ಮಂದಿ ಸಿಬ್ಬಂದಿ ಖಾತೆಗೆ ವೇತನ ಮೊತ್ತ ಪಾವತಿಯಾಗಲಿದೆ.

    ಸೇವೆಗೆ ಬಂದವರಿಗೆ ಶ್ರದ್ಧಾಂಜಲಿ!: ಕರ್ತವ್ಯಕ್ಕೆ ಹಾಜರಾಗುವ ಕೆಎಸ್ಸಾರ್ಟಿಸಿ ನೌಕರರಿಗೆ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸುವ ಅವಹೇಳನಕಾರಿ ಪೋಸ್ಟ್‌ನ್ನು ಸಿಬ್ಬಂದಿಯೇ ಹಾಕಿ ಅವಮಾನ ಮಾಡುತ್ತಿರುವ ಪ್ರಸಂಗ ನಡೆಯುತ್ತಿದೆ. ಮುಷ್ಕರಕ್ಕೆ ಬೆನ್ನುಹಾಕಿ ಹಲವು ಮಂದಿ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇದನ್ನು ಸಹಿಸದ ಕೆಲವು ನೌಕರರು ವಾಟ್ಸ್‌ಆ್ಯಪ್ ಗುಂಪು ಹಾಗೂ ಜಾಲತಾಣಗಳಲ್ಲಿ ಅಂತಹವರ ಫೋಟೋ ಹಾಕಿ ಶ್ರದ್ಧಾಂಜಲಿ ಎಂದು ಅವಹೇಳನಕಾರಿಯಾಗಿ ಬರೆದು ಪಸರಿಸುತ್ತಿರುವ ಮಾಹಿತಿ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದ್ದು ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

    ಮುಷ್ಕರ ಕೈಬಿಡಲು ಸಚಿವ ಕೋಟ ಮನವಿ: ಮಂಗಳೂರು: ಕರೊನಾ ಆತಂಕದ ನಡುವೆ ಮುಷ್ಕರ ಹೂಡಿ ಸಾರ್ವಜನಿಕರನ್ನು ಇನ್ನಷ್ಟು ಸಂಕಷ್ಟಕ್ಕೆ ಒಳಪಡಿಸುವುದು ಸರಿಯಲ್ಲ, ಸರ್ಕಾರದಲ್ಲಿ ವಿಶ್ವಾಸವಿಟ್ಟು ಮುಂದಿನ ದಿನಗಳಲ್ಲಿ ನೌಕರರ ಸಮಸ್ಯೆಗಳು ಪರಿಹಾರವಾಗಲಿವೆ ಎಂಬ ಭರವಸೆಯೊಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ. ಈಗಾಗಲೇ ಕರ್ತವ್ಯಕ್ಕೆ ಹಾಜರಾದ ನೌಕರರೆಲ್ಲರಿಗೆ ಅಭಿನಂದನೆಗಳನ್ನು ಸಲ್ಲಿಸಿರುವ ಸಚಿವರು, ಇನ್ನುಳಿದ ನೌಕರರು ಕೂಡ ಕರ್ತವ್ಯಕ್ಕೆ ಹಾಜರಾಗಿ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts