More

    ಬಸ್ ಸಂಚಾರ ಒಂದೆರಡು ದಿನಗಳಲ್ಲಿ ನಿರ್ಧಾರ, ಸಾರಿಗೆ ಇಲಾಖೆ ಅಧಿಕಾರಿಗಳು, ಸಚಿವರೊಂದಿಗೆ ಸಭೆ

    ಉಡುಪಿ: ಜಿಲ್ಲೆಯಲ್ಲಿ ಖಾಸಗಿ ಬಸ್ ಓಡಾಟಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳೊಡನೆ ಬಸ್ ಮಾಲೀಕರ ಸಭೆ ಶುಕ್ರವಾರ ನಡೆಯಲಿದೆ. ಜಿಲ್ಲೆಯಿಂದ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಬಸ್ ಮಾಲೀಕರ ಸಂಘದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ವಿಜಯವಾಣಿಗೆ ತಿಳಿಸಿದ್ದಾರೆ.

    ಭಾನುವಾರ ಬಸ್ ಮಾಲೀಕರೊಂದಿಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಕೋವಿಡ್-19 ನಿಯಮಾವಳಿ ಪಾಲನೆ, 5 ತಿಂಗಳ ತೆರಿಗೆ ವಿನಾಯಿತಿ ಬಸ್ ನೌಕರರ ಕುಟುಂಬಕ್ಕೆ ಆರ್ಥಿಕ ಸಹಾಯದ ಬಗ್ಗೆ ಮನವಿ ಮಾಡಲಾಗುತ್ತದೆ. ನಷ್ಟ ಆಗದ ರೀತಿಯಲ್ಲಿ ಖಾಸಗಿ ಬಸ್ ಸಂಚಾರ ಆರಂಭಿಸುವ ಬಗ್ಗೆ ಚರ್ಚಿಸಲಾಗುವುದು ಎಂದರು.

    ಸರ್ಕಾರದ ನಿಯಮ ಪ್ರಕಾರ ಶೇ.50ಕ್ಕಿಂತ ಹೆಚ್ಚು ಪ್ರಯಾಣಿಕರು ಬಸ್‌ನಲ್ಲಿ ಸಂಚರಿಸುವಂತಿಲ್ಲ. ಹಾಗೆ ಮಾಡಿದರೆ ತುಂಬಾ ನಷ್ಟ ಆಗುತ್ತದೆ. ಶೇ.80 ಪ್ರಯಾಣಿಕರ ಸಂಚಾರಕ್ಕೆ ಅವಕಾಶ ನೀಡಬೇಕು ಎನ್ನುವುದು ಬಸ್ ಮಾಲೀಕರ ಬೇಡಿಕೆಯಾಗಿದೆ.

    ಟಿಕೆಟ್ ದರ ಹೆಚ್ಚಳ ಮನವಿ: ಜಿಲ್ಲೆಯಲ್ಲಿ ಬಸ್ ಸೇವೆ ಆರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸಭೆ ನಡೆದಿತ್ತು. ಲಾಕ್‌ಡೌನ್ ನಿಯಮಾನುಸಾರ ಬಸ್ ಸಂಚಾರ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಆದರೆ ಖಾಸಗಿ ಬಸ್ ಮಾಲೀಕರು, ಈ ರೀತಿ ನಿಯಮದಿಂದ ನಷ್ಟದಲ್ಲಿರುವ ಬಸ್ ಉದ್ಯಮಕ್ಕೆ ಮತ್ತಷ್ಟು ಹೊರೆ ಬೀಳಲಿದೆ. ಇದಕ್ಕಾಗಿ ಟಿಕೆಟ್ ದರ ಏರಿಕೆ ಅನಿವಾರ್ಯ. ಅಲ್ಲದೆ ತೆರಿಗೆಯಲ್ಲಿ ರಿಯಾಯಿತಿ ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟರು. ಟಿಕೆಟ್ ದರ ಏರಿಕೆ ಈಗ ಸೂಕ್ತವಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
    ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್ ಬಸ್ಸುಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಖಾಸಗಿ ಬಸ್ ಮಾಲೀಕರು ಕೋರಿದ್ದಾರೆ.

    ಸೇವೆಗೆ ಕೆಎಸ್‌ಆರ್‌ಟಿಸಿ ರೆಡಿ: ಜಿಲ್ಲೆಯಲ್ಲಿ ನಿಯಮಾನುಸಾರ ಬಸ್ ಸಂಚಾರ ನಡೆಸಲು ಸಿದ್ಧ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ. ಕೆಎಸ್ಸಾರ್ಟಿಸಿ ಬಸ್ ಹೊರಡಿಸಲು ಆಯ್ದ ರೂಟ್‌ಗಳನ್ನು ಸೂಚಿಸಿ ಸರ್ವೇ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಬುಧವಾರ ಸಭೆಯಲ್ಲಿ ಸೂಚಿಸಿದರು. ಉಡುಪಿ, ಕಾರ್ಕಳ, ಹೆಬ್ರಿ, ಕುಂದಾಪುರ, ಮಲ್ಪೆ, ಹೂಡೆ ಸಹಿತ ಹಲವು ಪ್ರದೇಶಗಳಿಗೆ ಬಸ್ಸು ಸಂಚಾರ ಕಲ್ಪಿಸುವ ಬಗ್ಗೆ ಮಾತುಕತೆ ನಡೆದು ನಿಯಮಾನುಸಾರ ಸೇವೆ ನೀಡಲು ಕೆಎಸ್ಸಾರ್ಟಿಸಿ ಒಪ್ಪಿಗೆ ನೀಡಿದೆ. ಬಸ್‌ಗಳಲ್ಲಿ ಶೇ.50ರಷ್ಟು ಮಾತ್ರ ಪ್ರಯಾಣಿಕರಿಗೆ ಸಂಚಾರ ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts