More

    ಕ್ಷೀರಭಾಗ್ಯ ಯೋಜನೆಯ ಹಾಲಿನ ಪೌಡರ್ ಏನು ಮಾಡ್ಬೇಕು?

    ರಾಮನಗರ: ಎಲ್ಲ ಕ್ಷೇತ್ರಗಳ ಮೇಲೂ ಕರೊನಾ ಹೊಡೆತ ಬಿದ್ದಿದೆ. ಶಾಲಾ-ಕಾಲೇಜುಗಳಿಗೆ ರಜೆ ನೀಡಿ ತಿಂಗಳುಗಳೇ ಕಳೆದಿವೆ. ಆದರೆ ಈಗಾಗಲೇ ಶಾಲೆಗಳಿಗೆ ಕ್ಷೀರ ಭಾಗ್ಯ ಯೋಜನೆಯಲ್ಲಿ ವಿತರಿಸಿರುವ ಹಾಲಿನ ಪುಡಿಯನ್ನು ಏನು ಮಾಡಬೇಕು ಎನ್ನುವ ಪ್ರಶ್ನೆ ಶಿಕ್ಷಣ ಇಲಾಖೆಯನ್ನು ಕಾಡುತ್ತಿದೆ. ಮಾರ್ಚ್ ಅಂತ್ಯಕ್ಕೆ ಅಕ್ಕಿ, ಬೇಳೆ ಸೇರಿ ಇತರ ದಿನಸಿ ಪದಾರ್ಥ ವಿತರಿಸಲು ಕ್ರಮ ಕೈಗೊಂಡಿದ್ದ ಶಿಕ್ಷಣ ಇಲಾಖೆ, ಹಾಲಿನ ಪುಡಿ ಬಳಕೆ ಮಾಡುವಲ್ಲಿ ವಿಲವಾಗಿತ್ತು. ಈಗ ಅದನ್ನು ಏನು ಮಾಡಬೇಕು ಎನ್ನುವ ಪ್ರಶ್ನೆ ಇಲಾಖೆಯನ್ನು ಕಾಡುತ್ತಿದೆ.

    ಕೊಡುವುದು ಮರೆಯಿತು: ಜಿಲ್ಲೆಯಲ್ಲಿ 1438 ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿದ್ದು ಸುಮಾರು 80 ಸಾವಿರ ಮಕ್ಕಳು ಕ್ಷೀರ ಭಾಗ್ಯ ಯೋಜನೆ ಲಾಭ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ಶಾಲೆಯ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೇರವಾಗಿ ಹಾಲಿನ ಪೌಡರ್ ಕರ್ನಾಟಕ ಹಾಲು ಮಹಾಮಂಡಳದ ಮೂಲಕ ಸರಬರಾಜಾಗುತ್ತದೆ. ನಂತರ ಈ ಬಿಲ್ ಅನ್ನು ಜಿಲ್ಲಾ ಅಕ್ಷರ ದಾಸೋಹ ವಿಭಾಗಕ್ಕೆ ಸಲ್ಲಿಸಿ ಅಲ್ಲಿಂದ ಮೊತ್ತ ಪಡೆಯಲಾಗುತ್ತದೆ.

    ಈ ಬಾರಿ ಮಾರ್ಚ್ ಮಧ್ಯ ಭಾಗದಲ್ಲಿ ಪ್ರತಿ ಶಾಲೆಗೆ ಹಾಲಿನ ಪುಡಿ ವಿತರಣೆ ಮಾಡಲಾಗಿದೆ. ಈ ನಡುವೆ ಮಾರ್ಚ್ 28ರ ವೇಳೆಗೆ ಮಕ್ಕಳಿಗೆ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಲು ತಿಳಿಸಿದ ಶಿಕ್ಷಣ ಇಲಾಖೆ, ಹಾಲಿನ ಪುಡಿಯ ಬಗ್ಗೆ ಯಾವುದೇ ನಿರ್ದೇಶನ ನೀಡಲಿಲ್ಲ.

    ಅವಧಿ ಮುಗಿಯುವ ಆತಂಕ: ಇದರ ನಡುವೆ ಈಗಾಗಲೇ ಶಾಲೆಗಳಿಗೆ ವಿತರಣೆ ಮಾಡಲಾಗಿರುವ ಪೌಡರ್ ಬಳಕೆ ಮಾಡದೆ ಶಾಲೆಯಲ್ಲಿಯೇ ಇಡಲಾಗಿದೆ. ಅಲ್ಲದೆ, ಮತ್ತೊಂದು ಅವಧಿಗೆ ಲಾಕ್‌ಡೌನ್ ವಿಸ್ತರಣೆ ಆಗಿರುವುದರಿಂದ ಶಾಲೆಗಳು ಸದ್ಯಕ್ಕೆ ಮತ್ತೆ ಆರಂಭವಾಗುವುದು ಅನುಮಾನ. ಇದರಿಂದಾಗಿ ಶಾಲೆಯಲ್ಲಿರುವ ಪೌಡರ್ ಬಳಕೆಯ ಅವಧಿ ಮುಗಿಯುವ ಆತಂಕವೂ ಇದೆ. ಸಾಮಾನ್ಯವಾಗಿ ಉತ್ಪಾದನಾ ದಿನಾಂಕದಿಂದ ಸುಮಾರು 6 ತಿಂಗಳವರೆಗೆ ಹಾಲಿನ ಪೌಡರ್ ಬಳಕೆಗೆ ಅವಕಾಶ ಇರುತ್ತದೆ. ಕೆಲವೊಮ್ಮೆ ಶಾಲೆಗಳಿಗೆ ಉತ್ಪಾದನೆಯಾದ 2 ತಿಂಗಳ ನಂತರದ ಪೌಡರ್ ಸರಬರಾಜು ಮಾಡಲಾಗುತ್ತಿದೆ. ಆದರೆ ಮಾರ್ಚ್‌ನಲ್ಲಿ ಪೂರೈಕೆ ಮಾಡಿರುವ ಪೌಡರ್ ಯಾವಾಗ ಉತ್ಪಾದನೆ ಮಾಡಲಾಗಿತ್ತು ಎನ್ನುವ ಮಾಹಿತಿ ಶಿಕ್ಷಣ ಇಲಾಖೆ ಬಳಿ ಇಲ್ಲ.

    ಕ್ರಮ ತೆಗೆದುಕೊಳ್ಳಬೇಕಿದೆ: ಶಾಲೆಗಳಿಗೆ ಕೆ.ಜಿ. ಲೆಕ್ಕದಲ್ಲಿ ಪೌಡರ್ ಸರಬರಾಜು ಮಾಡಲಾಗುತ್ತದೆ, ಮಕ್ಕಳಿಗೆ ಒಟ್ಟಿಗೆ ಹಾಲು ಕಾಯಿಸಿ ಕೊಡಲಾಗುತ್ತದೆ. ಇರುವ ಹಾಲಿನ ಪುಡಿಯನ್ನು ಪ್ರತಿ ಮಕ್ಕಳಿಗೆ ಹಂಚಿಕೆ ಮಾಡಲು ಸಹ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಎಷ್ಟು ಪ್ರಮಾಣದ ಹಾಲಿನ ಪುಡಿ ಶಾಲೆಗಳಲ್ಲಿ ಇದೆ ಎನ್ನುವ ಮಾಹಿತಿಯೂ ಇಲಾಖೆ ಬಳಿ ಇಲ್ಲ. ಅಲ್ಲದೆ, ಶಾಲೆ ಮತ್ತೆ ಆರಂಭವಾಗುವುದು ಅನಿಶ್ಚಿತವಾಗಿರುವ ಸಂದರ್ಭದಲ್ಲಿ ಅಧಿಕಾರಿಗಳು ಶಾಲೆಗಳಲ್ಲಿ ಇರುವ ಹಾಲಿನ ಪುಡಿಯನ್ನು ವಿಲೇವಾರಿ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕಿದೆ. ಇಲ್ಲವಾದರೆ ಲಕ್ಷಾಂತರ ರೂ. ಮೌಲ್ಯದ ಹಾಲಿನ ಪುಡಿ ಮಣ್ಣು ಪಾಲಾಗಲಿದೆ. ಅಥವಾ ಶಾಲೆ ಮತ್ತೆ ಆರಂಭವಾದ ನಂತರ ಇದೇ ಹಾಲಿನ ಪುಡಿಯನ್ನು ಮಕ್ಕಳಿಗೆ ನೀಡಿ ಏನಾದರೂ ಹೆಚ್ಚೂ ಕಮ್ಮಿ ಆದರೆ ಇದಕ್ಕೂ ಭಾರಿ ಬೆಲೆ ತೆರೆಬೇಕಾಗುತ್ತದೆ.

     

    ಹಾಲಿನ ಪುಡಿ ಎಷ್ಟು ದಾಸ್ತಾನಿದೆ ಎನ್ನುವ ಮಾಹಿತಿ ಇಲ್ಲ. ಇರುವ ಪುಡಿಯನ್ನು ಏನು ಮಾಡಬೇಕು ಎನ್ನುವ ಚರ್ಚೆ ನಡೆದಿದೆ. ಸರ್ಕಾರದಿಂದ ನಿರ್ದೇಶನ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು.
    ನಟರಾಜ್, ಇಒ ಅಕ್ಷರದಾಸೋಹ, ಶಿಕ್ಷಣ ಇಲಾಖೆ, ರಾಮನಗರ

    ಹಾಲಿನ ಪುಡಿ ಶಾಲೆಯಲ್ಲಿಯೇ ಉಳಿದಿದೆ ಎನ್ನುವ ಮಾಹಿತಿ ಇದೆ. ಅವಧಿ ಮುಗಿಯುವ ಮುನ್ನ ಇದನ್ನು ವಿಲೇ ಮಾಡಬೇಕು, ಇನ್ನೊಂದು ವಾರದಲ್ಲಿ ಈ ಸಂಬಂಧ ನಮಗೆ ವರದಿ ನೀಡಿ.
    ಎ.ಮಂಜುನಾಥ್ ಮಾಗಡಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts