More

    ಜನರ ಕೆಲಸ ಮಾಡದಿದ್ರೆ ಅಯೋಗ್ಯರಾಗ್ತೇವೆ ; ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ; ಕೆರೆಗಳ ಅಭಿವೃದ್ಧಿಗೆ ಸಂಕಲ್ಪ ಮಾಡುವಂತೆ ಗ್ರಾಪಂ ಸದಸ್ಯರಿಗೆ ಕಿವಿಮಾತು

    ತುಮಕೂರು : ಗ್ರಾಮೀಣ ಭಾಗದಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳ ಕುಟುಂಬಕ್ಕೆ ಶೌಚಗೃಹ ನಿರ್ಮಿಸಿಕೊಳ್ಳಲು ನೀಡುವ ಸಹಾಯಧನವನ್ನು 15 ಸಾವಿರದಿಂದ 20 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ೋಷಿಸಿದರು.

    ನಗರದಲ್ಲಿ ಬುಧವಾರ ಜಿಲ್ಲೆಯ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒಗಳಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮುನ್ನೋಟದ ಮಾತುಗಳನ್ನಾಡಿದ ಅವರು, ಗ್ರಾಪಂ ಮಟ್ಟದಲ್ಲಿ ಶೌಚಗೃಹ ನಿರ್ಮಾಣ, ಕೆರೆಗಳ ಅಭಿವೃದ್ಧಿ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ ಎಂದರು.

    ರಾಜ್ಯದಲ್ಲಿ 28 ಸಾವಿರ ಕೆರೆಗಳ ಅಭಿವೃದ್ಧಿಗೆ ಪ್ರತಿಜ್ಞೆ ಮಾಡಿದ್ದೇನೆ, ಗ್ರಾಪಂ ಚುನಾಯಿತ ಪ್ರತಿನಿಧಿಗಳು ಕನಿಷ್ಠ 4 ಕೆರೆಗಳನ್ನು ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಬೇಕು, ಎಲ್ಲರಿಗೂ ಅವಕಾಶ ಸಿಗುವುದಿಲ್ಲ, ನಿಮಗೆ ಸಿಕ್ಕಿದೆ ಸದುಪಯೋಗಪಡಿಸಿಕೊಂಡು ಗ್ರಾಮೀಣಾಭಿವೃದ್ಧಿ ಮಾಡಬೇಕು ಎಂದರು. ಗ್ರಾಪಂ ಚುನಾವಣೆಯಲ್ಲಿ ಗೆದ್ದವರು, ಸೋತವರನ್ನೂ ಕೂಡಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ. ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಿರಲಿ. ಭಗವಂತ ನನಗೂ, ನಿಮಗೂ ಅವಕಾಶ ಕೊಟ್ಟಿದ್ದಾನೆ. ಕೆಲಸ ಮಾಡದಿದ್ದರೆ ಅಯೋಗ್ಯರಾಗುತ್ತೇವೆ, ನಾನು ಯೋಗ್ಯನಾಗುತ್ತೇನೆ, ನೀವೂ ಯೋಗ್ಯರಾಗಿ ಎಂದರು.

    ಗ್ರಾಪಂನಲ್ಲಿ ಕೆಡಿಪಿ ಸಭೆ ನಡೆಸಬೇಕು, ತಹಸೀಲ್ದಾರ್ ಸೇರಿ ಯಾವ್ಯಾವ ಅಧಿಕಾರಿಗಳು ಬರಬೇಕೆಂಬ ಪಟ್ಟಿಯಿದೆ. ಯಾರೂ ಭಾಗವಹಿಸಲ್ಲ, ಜಿಪಂ ಸಿಇಒ ಅವರ ಗಮನಕ್ಕೆ ತನ್ನಿ, ಸೂಕ್ತ ಕ್ರಮ ಕೈಗೊಳ್ಳುತ್ತಾರೆಂದು ಸಚಿವರು ಗ್ರಾಪಂ ಅಧ್ಯಕ್ಷರಿಗೆ ತಿಳಿಸಿದರು.

    ಚಂದ್ರಗಿರಿ ಗ್ರಾಪಂ ಪಿಡಿಒ ಅಮಾನತು! : ಮಧುಗಿರಿ ತಾಲೂಕು ಚಂದ್ರಗಿರಿ ಗ್ರಾಪಂ ಪಿಡಿಒ ಸಂತೋಷ್‌ಸಿಂಗ್ ವಿರುದ್ಧ ಚುನಾಯಿತ ಪ್ರತಿನಿಧಿಗಳ ದೂರು ಹಾಗೂ ಅನುಮತಿ ಪಡೆಯದೆ ಕಾರ್ಯಾಗಾರಕ್ಕೆ ಗೈರಾಗಿದ್ದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಇಲಾಖೆ ವಿಚಾರಣೆ ನಡೆಸುವಂತೆ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಅವರಿಗೆ ಸಚಿವರು ಸೂಚಿಸಿದರು.

    ಸಭೆಯಲ್ಲಿ ಹಾಜರಿದ್ದ ಗ್ರಾಪಂ ಅಧ್ಯಕ್ಷೆ ಸುಜಾತ ಹಾಗೂ ಸದಸ್ಯರು ಪಿಡಿಒ ಸಂತೋಷ್‌ಸಿಂಗ್ ವಿರುದ್ಧ ನರೇಗಾ ಕಾಮಗಾರಿ ಅನುಷ್ಠಾನದಲ್ಲಿ ಸ್ಪಂದಿಸುತ್ತಿಲ್ಲ ಹಾಗೂ ಕಚೇರಿಗೆ ಗೈರಾಗುತ್ತಾರೆ ಎಂದು ದೂರಿದರು. ಈ ಸಂದರ್ಭದಲ್ಲಿ ಸ್ಪಷ್ಟನೆ ಕೇಳಿದ ಈಶ್ವರಪ್ಪ ಅವರಿಗೆ ಪಿಡಿಒ ಕಾರ್ಯಾಗಾರಕ್ಕೂ ಗೈರಾಗಿರುವುದು ಸಿಟ್ಟು ತರಿಸಿದ್ದರಿಂದ ಅಮಾನತಿಗೆ ಸೂಚಿಸಿದರು.
    ನಾನು ಯಾವ ಅಧಿಕಾರಿಗಳಿಗೂ ತೊಂದರೆ ಮಾಡಿದವನಲ್ಲ, ಯಾರೇ ಆಗಲಿ ಸರಿಯಾಗಿ ಕೆಲಸ ಮಾಡದಿದ್ದರೆ ತೊಂದರೆ ಕೊಡಬೇಕಾಗುತ್ತದೆ ಎಂದು ಹೇಳಿದರು.

    ಮತ ನೀಡಿದವರ ಋಣ ತೀರಿಸಿದರೆ ಕುಟುಂಬಕ್ಕೆ ಒಳಿತು : ಜಿದ್ದಿನಿಂದ ಚುನಾವಣೆ ಗೆಲ್ಲುವ ಗ್ರಾಪಂ ಸದಸ್ಯರು ಮತ ನೀಡಿದವರ ಋಣ ತೀರಿಸಬೇಕು, ಗೆದ್ದ ನಂತರ ಅಧಿಕಾರ ಸದುಪಯೋಗ ಮಾಡಿಕೊಳ್ಳದಿದ್ದರೆ ಅಯೋಗ್ಯರಾಗುತ್ತೀವಿ, ಜನರ ಆಶೀರ್ವಾದವಿದ್ದರೆ ಉನ್ನತ ಸ್ಥಾನಕ್ಕೇರುವ ಅವಕಾಶವಿದೆ ಎಂದು ಕೆ.ಎಸ್.ಈಶ್ವರಪ್ಪ ಗ್ರಾಪಂ ಅಧ್ಯಕ್ಷರಿಗೆ ಕಿವಿಮಾತು ಹೇಳಿದರು.
    ಐದು ವರ್ಷ ಜನರ ಋಣ ತೀರಿಸಿದರೆ ನಿಮಗೆ, ನಿಮ್ಮ ಕುಟುಂಬಕ್ಕೆ ಹಾಗೂ ನಿಮ್ಮ ಮಕ್ಕಳಿಗೆ ಒಳಿತಾಗಲಿದೆ ಎಂದರು.

    ಗ್ರಾಪಂ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿದ್ದರಿಂದಲೇ ಮನರೇಗಾ ಕಾಮಗಾರಿ ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಜಗತ್ತಿನ 50 ರಾಷ್ಟ್ರಗಳಿಗೆ ಸಾಲ ನೀಡುವ ಮಟ್ಟಿಗೆ ಭಾರತ ಬೆಳೆದುನಿಂತಿದೆ, ನಮ್ಮೆಲ್ಲಾ ಗ್ರಾಮಗಳು ಅಭಿವೃದ್ಧಿಯಾಗುತ್ತಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts