More

    ಮಾರ್ಜಕ ಉತ್ಪಾದನೆಯಲ್ಲಿ ದಾಖಲೆ ಬರೆದ ಕೆಎಸ್‌ಡಿಎಲ್; ಮೂರು ಪಾಳಿಯಲ್ಲಿ ಕಾರ್ಯನಿರ್ವಹಣೆ

    ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತವು 2023ರ ಡಿಸೆಂಬರ್ ತಿಂಗಳೊಂದರಲ್ಲೇ 123.42 ಕೋಟಿ ರೂ. ಮೌಲ್ಯದ 852 ಟನ್ ಮಾರ್ಜಕಗಳನ್ನು ಉತ್ಪಾದಿಸಿದ್ದು, ಕಳೆದ 40 ವರ್ಷಗಳಲ್ಲಿ ಇದು ಸಾರ್ವಕಾಲಿಕ ದಾಖಲೆಯಾಗಿದೆ.
    ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್, 2022ರ ಸೆಪ್ಟೆಂಬರ್ ತಿಂಗಳಲ್ಲಿ 775 ಟನ್ ಮಾರ್ಜಕಗಳನ್ನು ಉತ್ಪಾದಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಡಿಸೆಂಬರ್‌ನಲ್ಲಿ 852 ಟನ್ ಮಾರ್ಜಕಗಳನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
    ಕೆಎಸ್‌ಡಿಎಲ್‌ನಲ್ಲಿ ಇದುವರೆಗೆ ಮಾರ್ಜಕಗಳ ಉತ್ಪಾದನಾ ವಿಭಾಗದಲ್ಲಿ ಒಂದು ಪಾಳಿಯ ಕೆಲಸದ ವ್ಯವಸ್ಥೆ ಇತ್ತು. ಅದನ್ನೀಗ ಮೂರು ಪಾಳಿಗಳಿಗೆ ವಿಸ್ತರಿಸಲಾಗಿದೆ. ಜತೆಗೆ, ಈವರೆಗೆ ಸಂಸ್ಥೆಯಲ್ಲಿ ಮಾರ್ಜಕಗಳ ತಯಾರಿಕೆಗೆ ಕೇವಲ ಒಂದು ಯಂತ್ರ ಮಾತ್ರವಿತ್ತು. ಸರ್ಕಾರಿ ಉದ್ದಿಮೆಗಳು ಖಾಸಗಿ ವಲಯದಂತೆಯೇ ಲಾಭ ಗಳಿಸಬೇಕೆಂಬ ಉದ್ದೇಶದಿಂದ ಈಗ ಈ ವಿಭಾಗದಲ್ಲಿ ಮೂರು ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದ್ದಾರೆ.
    ಸಂಸ್ಥೆಯು ಮೊದಲಿನಿಂದಲೂ ಸಾಬೂನು ತಯಾರಿಕೆಗೆ ಹೆಸರುವಾಸಿಯಾಗಿದ್ದು, ಮಾರುಕಟ್ಟೆ ಕೂಡ ಅದರ ಸುತ್ತಲೇ ಕೇಂದ್ರೀಕೃತವಾಗಿತ್ತು. ಇತ್ತೀಚೆಗೆ ಮಾರ್ಜಕಗಳ ಉತ್ಪಾದನೆಯತ್ತಲೂ ಹೆಚ್ಚಿನ ಗಮನ ಹರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಅದು ಈಗ ಫಲ ನೀಡಿದೆ ಎಂದು ಹೇಳಿರುವ ಅವರು, ಮುಂದಿನ ದಿನಗಳಲ್ಲಿ ಖಾಸಗಿ ಕಂಪನಿಗಳ ಮಾರ್ಜಕಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಮಾರುಕಟ್ಟೆ ಜಾಲವನ್ನು ಕೂಡ ಅಖಿಲ ಭಾರತ ಮಟ್ಟದಲ್ಲಿ ವಿಸ್ತರಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
    ಹೋದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ 2023-24ನೇ ಹಣಕಾಸು ವರ್ಷದಲ್ಲಿ ಡಿಸೆಂಬರ್ ಅಂತ್ಯದವರೆಗೆ ಸಾಬೂನು, ಮಾರ್ಜಕ ಮತ್ತು ಕಾಸ್ಮೆಟಿಕ್ಸೃ್ ಉತ್ಪಾದನೆ ನಿಗದಿತ ಗುರಿಗಿಂತ ಹೆಚ್ಚಾಗಿದೆ. ಸಂಸ್ಥೆಯು ಹೋದ ಸಾಲಿನಲ್ಲಿ 118 ಕೋಟಿ ರೂ. ಲಾಭ ಗಳಿಸಿತ್ತು. ಈ ಹಣಕಾಸು ಸಾಲಿನ ಮೊದಲ ಒಂಬತ್ತು ತಿಂಗಳಲ್ಲಿ ಸಂಸ್ಥೆಯು 1171.07 ಕೋಟಿ ರೂ. ಮೊತ್ತದಷ್ಟು ವಹಿವಾಟು ನಡೆಸಿದೆ. ಈ ವರ್ಷಕ್ಕೆ ಒಟ್ಟು 1,404 ಕೋಟಿ ರೂ. ವಹಿವಾಟು ನಿಗದಿ ಪಡಿಸಲಾಗಿದ್ದು, ಇದನ್ನು ಮೀರುವುದರಲ್ಲಿ ಅನುಮಾನವಿಲ್ಲ ಎಂದು ಎಂ.ಬಿ ಪಾಟೀಲ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts