More

    ಇನ್ನೂ ಕರಡು ಹಂತದಲ್ಲಿ ಹೊಸ ಶಿಕ್ಷಣ ನೀತಿ, ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ ಹೇಳಿಕೆ

    ಮಂಗಳೂರು: ಹೊಸ ಶಿಕ್ಷಣ ನೀತಿ ಇನ್ನೂ ಕರಡು ಹಂತದಲ್ಲಿದ್ದು, ಅಂತಿಮಗೊಂಡಿಲ್ಲ. ಸಾಕಷ್ಟು ಸಾಧಕ, ಬಾಧಕಗಳ ಬಗ್ಗೆ ಮಂಥನ ನಡೆಸಿಯೇ ಅಂತಿಮಗೊಳಿಸಲಾಗುವುದು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಪೋರ್ಟಲ್ ಸದಸ್ಯ, ರಾಜ್ಯ ಸರ್ಕಾರದ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ ತಿಳಿಸಿದರು.

    ಮಂಗಳೂರಿನ ಅಮುಕ್ತ್ ಕಚೇರಿಯಲ್ಲಿ ಭಾನುವಾರ ಮೈಸೂರಿನ ಸಾಹಿತ್ಯ ಸುಧೆ ಪ್ರಕಾಶನ ಪ್ರಕಟಿಸಿದ ಎ.ಎಂ.ನರಹರಿಯವರ ‘ಶಿಕ್ಷಣ ಮನ್ವಂತರ-ರಾಷ್ಟ್ರೀಯ ಶಿಕ್ಷಣ ನೀತಿ-2020’ ಕೃತಿ ಬಗ್ಗೆ ಸಂವಾದದಲ್ಲಿ ಮಾತನಾಡಿದರು.
    ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯನ್ನು ಜನರಿಗೆ ತಲುಪಿಸಲು ವಿದ್ಯಾಭಾರತಿ ಸಂಘಟನೆ ಪ್ರಯತ್ನಿಸುತ್ತಿದೆ. ಈಗಾಗಲೇ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ತಿಳಿವಳಿಕೆ ಮೂಡಿಸುವ ಕಾರ್ಯ ಮಾಡಿದೆ. ಮೈಎನ್‌ಇಪಿ ಡಾಟ್ ಇನ್ ವೆಬ್ ಪೋರ್ಟಲ್‌ನಲ್ಲಿ 35ಕ್ಕೂ ಹೆಚ್ಚು ವೆಬಿನಾರ್‌ಗಳನ್ನು ಮಾಡಿದೆ. ಮುಂದೆ ಯುಜಿಸಿ ಐಎನ್‌ಐ ಮುಖ್ಯಸ್ಥರೊಂದಿಗೆ ಸಮುದಾಯ ಮತ್ತು ಶಿಕ್ಷಣ ಬಗ್ಗೆ ಚರ್ಚೆ ನಡೆಸಲಿದೆ ಎಂದರು.

    ಮಾತೃ ಭಾಷೆಗೆ ಒತ್ತು: ಭಾರತವಾಣಿ ಯೋಜನೆಯಲ್ಲಿ ಸ್ಥಳೀಯ ಮಾತೃ ಭಾಷೆಗಳಿಗೆ ಒತ್ತು ನೀಡಲಾಗುತ್ತದೆ. ಉತ್ತರ ಭಾರತ ರಾಜ್ಯಗಳ ಬುಡಕಟ್ಟು ಜನರ ಅಳಿವಿನಂಚಿನ ಭಾಷೆಗಳನ್ನು ಉಳಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಬುಡಕಟ್ಟು ಭಾಷೆಗಳ ಪಠ್ಯ ಪುಸ್ತಕ ರಚನೆಯಾಗಿದ್ದು, ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆ ಕಲಿಕೆ ಚೆನ್ನಾಗಿ ನಡೆಯುತ್ತಿದೆ. ರಾಷ್ಟ್ರೀಯ ಅಧಿಸೂಚನೆಯಲ್ಲಿ ಭಾಷೆ ಇದ್ದರೂ ಪಠ್ಯ ಇರುವುದಿಲ್ಲ. ದೇಶದ ಜನಗಣತಿಯಲ್ಲಿ 120 ಭಾಷೆಗಳನ್ನು ಗುರುತಿಸಿದ್ದು, 2021ರ ಜನಗಣತಿಯಲ್ಲಿ ಮಾತೃ ಭಾಷೆಯನ್ನು ದಾಖಲಿಸುವುದು ಕೂಡ ಇರಲಿದೆ ಎಂದು ಹೇಳಿದರು.

    ಅಧ್ಯಯನಕ್ಕೆ ಅವಕಾಶವಿಲ್ಲದಿದ್ದರೆ ತಿರುಗುಬಾಣ
    ಲೇಖಕ ಅರವಿಂದ ಚೊಕ್ಕಾಡಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಣ ವ್ಯವಸ್ಥೆಯನ್ನು ಒಟ್ಟಾಗಿ ಕಾಣಬೇಕು. ಸೆಮಿಸ್ಟರ್ ಪದ್ಧತಿ ಬಂದ ಮೇಲೆ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಸಮಸ್ಯೆ ತಲೆದೋರಿದೆ. ಹೊಸ ಶಿಕ್ಷಣ ನೀತಿಯಲ್ಲಿ ವಿವಿ ಮತ್ತು ಕಾಲೇಜನ್ನು ಪ್ರತ್ಯೇಕಿಸಿರುವುದು ಉತ್ತಮವಾದರೂ ಪಿಯುಸಿ ವ್ಯವಸ್ಥೆ ತೆಗೆದು ಹಾಕಲಾಗಿದೆ. ಇದೇ ರೀತಿ ಶಿಕ್ಷಕರನ್ನು ಮೌಲ್ಯಮಾಪನಕ್ಕೆ ಒಳಪಡಿಸುವುದು ಅತ್ಯುತ್ತಮವಾದರೂ ಅವರಿಗೆ ಅಧ್ಯಯನಕ್ಕೆ ಅವಕಾಶ ಇಲ್ಲದಿದ್ದರೆ ಅದು ಶಿಕ್ಷಕರಿಗೇ ತಿರುಗಬಾಣವಾದೀತು ಎಂದು ಹೇಳಿದರು.
    ಪ್ರೊ.ಎ.ಎಂ.ನರಹರಿ ಕೃತಿಯ ಕುರಿತು ಮಾತನಾಡಿದರು.

    ಮೂರು ವರ್ಷದಿಂದಲೇ ಶಾಲೆ ಆರಂಭಕ್ಕೆ ವಿರೋಧ
    ಮಾತೃ ಭಾಷೆಯಲ್ಲಿ ಶಿಕ್ಷಣ ನೀಡುವ ಬಗ್ಗೆ ಚರ್ಚೆಯಾಗಬೇಕು ಎಂದು ಅರವಿಂದ ಚೊಕ್ಕಾಡಿ ಹೇಳಿದರು. ಮಗುವಿಗೆ ಮೂರು ವರ್ಷದಿಂದಲೇ ಶಾಲೆ ಆರಂಭ ಎಂಬುದಕ್ಕೆ ನನ್ನ ವಿರೋಧವಿದೆ. ಯಾಕೆಂದರೆ, ಬಾಲ್ಯದಲ್ಲಿ ಆಟವಾಡುವ ವಯಸ್ಸಿಗೆ ಬುದ್ಧಿಯ ಪ್ರಾಥಮಿಕ ವಿಕಾಸವೂ ಆಗುವುದಿಲ್ಲ. ಯಾವ ಮನೋ ವೈಜ್ಞಾನಿಕ ಹಿನ್ನೆಲೆಯಲ್ಲಿ ಇದನ್ನು ಪ್ರಸ್ತಾಪಿಸಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಪರ್ಶಿಯನ್, ಸಂಸ್ಕೃತ, ಪ್ರಾಕೃತ ಕಲಿಕೆ ಐಚ್ಛಿಕ ಎಂದಿದ್ದಾರೆ. ಇದು ಕೂಡ ಸಮಸ್ಯೆ ಉಂಟು ಮಾಡಲಿದೆ. ಪೋಷಕರು, ಪಾಲಕರು ಮತ್ತು ಮಕ್ಕಳನ್ನು ಸೇರಿಸಿಕೊಂಡು ಸಂವಾದ ನಡೆಸಿದರೆ ಇನ್ನಷ್ಟು ಪರಿಣಾಮಕಾರಿಯಾಗಬಹುದು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts