More

    ಕೃಷ್ಣಾ ಹರಿದರೂ ನೀಗದ ನೀರಿನ ಕಷ್ಟ; ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಜಲದಾಹ ನೀರಾವರಿ ಪ್ರದೇಶದಲ್ಲೂ ಬರ

    ಅಮರೇಶ ಚಿಲ್ಕರಾಗಿ ದೇವದುರ್ಗ
    ದೇವದುರ್ಗ ತಾಲೂಕಿನಲ್ಲಿ ಕೃಷ್ಣಾ ನದಿ ಮೈದುಂಬಿ ಹರಿದರೂ ಜಲ ಬವಣೆ ನೀಗಿಲ್ಲ. ನಾರಾಯಣಪುರ ಬಲದಂಡೆ ನಾಲೆ, 30ಕ್ಕೂ ಹೆಚ್ಚು ಕೆರೆಗಳು, ನೂರಾರು ಬಾವಿಗಳು, ಸಾವಿರಾರು ಕೊಳವೆಬಾವಿಗಳಿದ್ದರೂ ಹಲವು ಗ್ರಾಮಗಳಲ್ಲಿ ಬೇಸಿಗೆ ಬಂದರೆ ಹನಿ ನೀರಿಗೂ ಪೀಕಲಾಟ ಕಂಡುಬರುತ್ತದೆ. ಪ್ರಧಾನಮಂತ್ರಿ ಜಲಜೀವನ ಮಿಷನ್ ಅರೆಬರೆ ಕಾಮಗಾರಿಯಿಂದಾಗಿ ಜನರಿಗೆ ನಿರೀಕ್ಷಿತ ಫಲ ನೀಡಿಲ್ಲ.

    ತಾಲೂಕಿನ ಒಂದು ಬದಿಯ ಗಡಿಗೆ ಹೊಂದಿಕೊಂಡು ಕೃಷ್ಣಾ ನದಿ ಹರಿದರೂ ಬೇಸಿಗೆಯಲ್ಲಿ ಜನ-ಜಾನುವಾರುಗಳ ದಾಹಕ್ಕೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ನಾರಾಯಣಪುರ ಬಲದಂಡೆ ನಾಲೆ ವರ್ಷದ 8 ತಿಂಗಳು ಹರಿದರೂ ಕುಡಿವ ನೀರಿನ ತತ್ವಾರ ತಪ್ಪಿಲ್ಲ. ಬೇಸಿಗೆ ಬಂದರೆ ಹಳ್ಳಿ, ದೊಡ್ಡಿ, ತಾಂಡಾಗಳಲ್ಲಿ ಜೀವ ಜಲಕ್ಕಾಗಿ ಹಾಹಾಕಾರ ಎದುರಾಗುತ್ತದೆ.

    ತಾಲೂಕಿನಲ್ಲಿ ಬಲದಂಡೆ ನಾಲೆ ಕೊನೇ ಭಾಗ, ಗುಡ್ಡಗಾಡು ಪ್ರದೇಶ, ತಾಂಡಾ, ದೊಡ್ಡಿಗಳಲ್ಲಿ ನೀರಿನ ಅಧಿಕ ಅಭಾವವಿದೆ. ಜನರ ದಾಹ ನೀಗಿಸಲು ಹತ್ತಾರೂ ಯೋಜನೆಗಳನ್ನು ಜಾರಿಗೊಳಿಸಿದರೂ ಉಪಯೋಗವಾಗಿಲ್ಲ. ನೀರಿನಂತೆ ಅನುದಾನ ಖರ್ಚಾದರೂ ಶಾಶ್ವತ ಪರಿಹಾರ ಮರೀಚಿಕೆಯಾಗಿದೆ.
    ಬಹುಗ್ರಾಮ ಯೋಜನೆ, ಜಲನಿರ್ಮಲ ಯೋಜನೆ, ಶುದ್ಧೀಕರಣ ಯೋಜನೆ, ರಾಷ್ಟ್ರೀಯ ಗ್ರಾಮೀಣ ಕುಡಿವ ನೀರಿನ ಯೋಜನೆ, ಪ್ರಧಾನಮಂತ್ರಿ ಜಲಜೀವನ ಮಿಷನ್ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಯೋಜನೆಗೆ ಕೋಟ್ಯಂತರ ರೂ. ಖರ್ಚಾದರೂ ನಿರ್ವಹಣೆ ಕೊರತೆಯಿಂದ ಹಳ್ಳ ಹಿಡಿದಿವೆ.
    ಸೋಮನಮರಡಿ, ಹೇಮನಾಳ, ಕ್ಯಾದಿಗೇರಾ, ಆಲ್ಕೋಡ್, ಊಟಿ, ಸಲಿಕ್ಯಾಪುರ, ಚಿಕ್ಕಬೂದೂರು, ಜೇರಬಂಡಿ, ಎಚ್.ಸಿದ್ದಾಪುರ, ವಂದಲಿ, ಪಲಕನಮರಡಿ, ಹೊನ್ನಟಗಿ ಹಾಗೂ ತಾಂಡಾ, ದೊಡ್ಡಿಗಳಲ್ಲಿ ಕುಡಿವ ನೀರಿನ ಬವಣೆಯಿದೆ. ಬೇಸಿಗೆ ಬಂದರೆ ಹಳ್ಳ-ಕೊಳ್ಳಗಳಿಗೆ ಅಲೆಯುವ ಸ್ಥಿತಿಯಿದೆ.

    ಕೃಷ್ಣಾ ಹರಿದರೂ ನೀಗದ ನೀರಿನ ಕಷ್ಟ; ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಜಲದಾಹ ನೀರಾವರಿ ಪ್ರದೇಶದಲ್ಲೂ ಬರ
    ಚಿಕ್ಕಬೂದೂರು ಗ್ರಾಮದಲ್ಲಿ ತೊಟ್ಟಿಯಲ್ಲಿ ಸಂಗ್ರಹವಾಗಿರುವ ನೀರು ಪಡೆಯುತ್ತಿರುವ ಗ್ರಾಮಸ್ಥರು.

    ಆರ್ಸೆನಿಕ ನೀರೇ ಗತಿ

    ದೀಪದ ಕೆಳಗೆ ಕತ್ತಲು ಎನ್ನುವಂತೆ ಚಿಕ್ಕಬೂದೂರು ಗ್ರಾಮ ಕೃಷ್ಣಾನದಿ ಪಕ್ಕದಲ್ಲಿದ್ದೂ ಗ್ರಾಮಸ್ಥರ ದಾಹ ನೀಗಿಲ್ಲ. ಎಲ್ಲೇ ಬೋರ್‌ವೆಲ್ ಕೊರೆಯಿಸಿದರೂ ಉಪ್ಪು ನೀರು ಬರುತ್ತದೆ. ನೀರಿನ ತೊಟ್ಟಿ ಹನಿ ನೀರು ಕಾಣದೆ ಪಾಳು ಬಿದ್ದಿದೆ. ರಾಜೀವ್‌ಗಾಂಧಿ ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ಮನೆ ಮನೆಗೆ ನೀರು ತಲುಪಿಸಲು ನಿರ್ಮಿಸಿದ ಸಿಂಕ್‌ಗೆ (ನೀರಿನತೊಟ್ಟಿ) ನೀರು ಬರುತ್ತಿದೆ. ಅದೇ ನೀರನ್ನು ಗ್ರಾಮಸ್ಥರು ಮೇಲಿಂದ ಕೊಡ ಇಳಿಬಿಟ್ಟು ತುಂಬಿಕೊಳ್ಳುತ್ತಿದ್ದಾರೆ. ಯಾಟಗಲ್‌ನಲ್ಲಿ ಬಹುಗ್ರಾಮ ಗ್ರಾಮ ಕುಡಿವ ನೀರಿನ ಯೋಜನೆ ಹಳ್ಳಹಿಡಿದಿದೆ. ಸುತ್ತಲೂ ನೀರಾವರಿಯಿದ್ದರೂ ಗ್ರಾಮಸ್ಥರು ನೀರಿಗಾಗಿ ಪರಿತಪಿಸುತ್ತಿದ್ದಾರೆ.

    ವಂದಲಿ, ಊಟಿ, ಸುಣ್ಣದಕಲ್, ಬಿ.ಗಣೇಕಲ್, ಸೋಮನಮರಡಿ, ಎಚ್.ಸಿದ್ದಾಪುರ ಸೇರಿ 20ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನಲ್ಲಿ ಆರ್ಸೆನಿಕ್ ಹಾಗೂ ಫ್ಲೋರೈಡ್ ಅಂಶ ಹೆಚ್ಚಿದೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮೂಲಕ ಜಾರಿಗೊಳಿಸಲಾಗಿರುವ ಶುದ್ಧ ಕುಡಿವ ನೀರಿನ ಘಟಕಗಳು (ಆರ್‌ಒ ಪ್ಲಾಂಟ್) ಕಡೆ ಯೋಜನೆ ಕಾಮಗಾರಿ ಪೂರ್ಣಗೊಳ್ಳದೆ ನಿರುಪಯುಕ್ತವಾಗಿದ್ದರೆ, ಕೆಲ ಕಡೆ ನಿರ್ವಹಣೆ ಕೊರತೆಯಿಂದ ಮೂಲೆ ಸೇರಿವೆ. ಜನರು ಫ್ಲೋರೈಡ್ ಅಂಶವಿರುವ ನೀರು ಕುಡಿದು ಮೊಣಕಾಲು ನೋವು, ಕೀಲು ಬೇನೆ, ಕಂದು ಹಲ್ಲಿನ ಸಮಸ್ಯೆ ಸೇರಿ ನಾನಾ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

    ಕೃಷ್ಣಾ ಹರಿದರೂ ನೀಗದ ನೀರಿನ ಕಷ್ಟ; ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಜಲದಾಹ ನೀರಾವರಿ ಪ್ರದೇಶದಲ್ಲೂ ಬರ
    ದೇವದುಗದ ಕುರ್ಲೇರ್‌ದೊಡ್ಡಿಯಲ್ಲಿ ಹಳ್ಳದಿಂದ ನೀರು ತರುತ್ತಿರುವ ಬಾಲಕಿಯರು.

    ಶುದ್ಧ ಕುಡಿವ ನೀರಿನ ಸ್ಥಿತಿ-ಗತಿ ಹೀಗಿದೆ…

    ಕುಡಿವ ನೀರಿನ ಬವಣೆ ನೀಗಿಸಲು ಹಾಗೂ ಶುದ್ಧ ನೀರು ಪೂರೈಸಲು ತಾಲೂಕಿನಲ್ಲಿ 110 ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. 65 ಘಟಕ ಸುಸ್ಥಿತಿಯಲ್ಲಿದ್ದರೆ, 27 ನಾನಾ ಕಾರಣಗಳಿಂದ ಸ್ಥಗಿತವಾಗಿವೆ. 18 ಘಟಕಗಳು ಹಳೆಯದಾಗಿದ್ದು, ಹೊಸ ಘಟಕ ಸ್ಥಾಪನಗೆ ಜಿಪಂ ಮುಂದಾಗಿದೆ. ಕೆಕೆಆರ್‌ಡಿಬಿ ಅನುದಾನದಲ್ಲಿ ಪ್ರತಿವರ್ಷ 10ರಿಂದ 12 ಆರ್‌ಒ ಪ್ಲಾಂಟ್ ಸ್ಥಾಪಿಸಲಾಗುತ್ತಿದೆ. ಆಲ್ಕೋಡ್, ಗಲಗ, ಭೂಮನಗುಂಡ, ಕುರ್ಕಿಹಳ್ಳಿ, ಮಾನಸಗಲ್, ನೀಲವಂಜಿ, ಗಣಜಲಿ ಗ್ರಾಮಗಳಲ್ಲಿ ಆರ್‌ಒ ಪ್ಲಾಂಟ್ ಸ್ಥಗಿತಗೊಂಡಿವೆ. ಕೊತ್ತದೊಡ್ಡಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಶಾಶ್ವತ ಕುಡಿವ ನೀರು ಕಲ್ಪಿಸಲು ರೂಪಿಸಿದ್ದ 4.60 ಕೋಟಿ ರೂ. ವೆಚ್ಚದ ಯೋಜನೆ ಹಳ್ಳ ಹಿಡಿದಿದೆ. ಇದರಿಂದಾಗಿ ಯಮನೂರು, ಎಲ್.ದೊಡ್ಡಿ, ಲಿಂಗನದೊಡ್ಡಿ, ಮಲ್ಲೆನಾಯಕೊಡೆ, ಕರಡೋಣಿಯಲ್ಲಿ ನೀರಿನ ಸಮಸ್ಯೆಯಿದೆ.

    ಕೃಷ್ಣಾ ಹರಿದರೂ ನೀಗದ ನೀರಿನ ಕಷ್ಟ; ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಜಲದಾಹ ನೀರಾವರಿ ಪ್ರದೇಶದಲ್ಲೂ ಬರ
    ಹೊಸೂರು ಸಿದ್ದಾಪುರದಲ್ಲಿ ನಿರುಪಯುಕ್ತವಾಗಿರುವ ಒವರ್‌ಹೆಡ್ ಟ್ಯಾಂಕ್.

    ಬಹುಗ್ರಾಮ ಯೋಜನೆಯ 12 ಕೋಟಿ ರೂ. ಹೋಮ !

    ಅಮರಾಪುರ ಬಳಿ ಜಲನಿರ್ಮಲ ಯೋಜನೆಯಡಿ 8 ವರ್ಷಗಳ ಹಿಂದೆ ಆರಂಭಿಸಿದ್ದ ಬಹುಗ್ರಾಮ ಕುಡಿವ ನೀರಿನ ಯೋಜನೆ ಸಂಪೂರ್ಣ ಹಳ್ಳಹಿಡಿದಿದ್ದು, 12 ಕೋಟಿ ರೂ. ಅನುದಾನ ನೀರಲ್ಲಿ ಹೋಮ ಮಾಡಿದಂತಾಗಿದೆ. ತಾಲೂಕಿನ 7 ಕಡೆ ಬಹುಗ್ರಾಮ ಕುಡಿವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. ಅಮರಾಪುರದ ಯೋಜನೆಗೆ 12 ಕೋಟಿ ರೂ. ಅನುದಾನ ವಿನಿಯೋಗಿಸಲಾಗಿದೆ. ಬೃಹತ್ ನೀರು ಸಂಗ್ರಹ ತೊಟ್ಟಿಗಳು, ಟ್ಯಾಂಕ್, ಪಂಪ್‌ಹೌಸ್ ನಿರ್ಮಿಸಿ, ಪೈಪ್ ಜೋಡಿಸಲಾಗಿದೆ. ನಿರ್ವಹಣೆಯಿಲ್ಲದೆ ಎಲ್ಲೆಂದರದಲ್ಲಿ ಜಾಲಿಬೆಳೆದು ಯೋಜನೆ ಸಂಪೂರ್ಣ ದಿವಾಳಿಯಾಗಿದೆ. ಕಾಮಗಾರಿ ಅರೆಬರೆಯಾದ ಕಾರಣ ವರ್ಲ್ಡ್ ಬ್ಯಾಂಕ್ 1 ಕೋಟಿ ರೂ. ಅನುದಾನ ನೀಡಿದರೂ ಪೂರ್ಣಗೊಂಡಿಲ್ಲ. ನೀರು ಸಂಗ್ರಹ ತೊಟ್ಟಿಗಳು ಹಾಳಾಗಿದ್ದರೆ, ಪೈಪ್‌ಗಳು ಒಡೆದಿವೆ. ಈವರೆಗೆ ಈ ಯೋಜನೆಯಡಿ ಒಂದೂ ಹನಿ ನೀರು ಒದಗಿಸಿಲ್ಲ. ಅಮರಾಪುರ, ಕರಡಿಗುಡ್ಡ, ಮುಂಡರಗಿ, ನಿಲುವಂಜಿ, ಹೇರುಂಡಿ, ಬಾಗೂರು, ಮೇದನಾಪುರ, ನವಿಲುಗುಡ್ಡ, ಜಂಬಲದಿನ್ನಿ, ಕರಿಗುಡ್ಡ ಸೇರಿ 18ಹಳ್ಳಿಗಳಿಗೆ ಶುದ್ಧ ನೀರು ಕುಡಿವ ನೀರು ಪೂರೈಸಲು ಸಾಧ್ಯವಾಗಿಲ್ಲ.

    ಕೃಷ್ಣಾ ಹರಿದರೂ ನೀಗದ ನೀರಿನ ಕಷ್ಟ; ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಜಲದಾಹ ನೀರಾವರಿ ಪ್ರದೇಶದಲ್ಲೂ ಬರ
    ದೇವದುರ್ಗಕ್ಕೆ ಪೂರೈಕೆಯಾಗುವ ನೀರನ್ನು ಘಟಕದಲ್ಲಿ ಶುದ್ಧೀಕರಣ ಮಾಡುತ್ತಿರುವುದು.

    ದೇವದುರ್ಗದ ಜನರಿಗೆ ದಿನದ 24 ಗಂಟೆ ಕುಡಿವ ನೀರು ಕಲ್ಪಿಸಲು ಶಂಭುಲಿಂಗೇಶ್ವರ ಬೆಟ್ಟದಲ್ಲಿ 55 ಕೋಟಿ ರೂ. ವೆಚ್ಚದಲ್ಲಿ ಜಲಶುದ್ಧೀಕರಣ ಘಟಕ ಸ್ಥಾಪಿಸಿ ಎಲ್ಲ 23ವಾರ್ಡ್‌ಗೆ ನೀರು ಪೂರೈಸಲಾಗುತ್ತಿದೆ. ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜಿನಿಂದ ಪೈಪ್‌ಲೈನ್ ಮೂಲಕ ನೀರು ತಂದು ಅದನ್ನು ಶುದ್ಧೀಕರಿಸಿ ಪ್ರತಿವಾರ್ಡ್‌ಗೆ ತಲುಪಿಸಲಾಗುತ್ತಿದೆ. ಇದರ ನಿರ್ವಹಣೆಗೆ ತುರ್ತು ಪರಿಹಾರ ನಿಧಿಯಿಂದ 3 ಲಕ್ಷ ರೂ. ಹಾಗೂ ಸ್ಥಳೀಯ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗಿದೆ.
    ಜೆಜೆಎಂ ಯೋಜನೆಯಿಂದ ಹಳ್ಳಿಗಳಿಗೆ ನೀರಿನ ಸೌಲಭ್ಯ ದೊರೆತಿದೆ. 10ರಿಂದ 12 ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ನೀರಿನ ಕೊರತೆಯಾಗಲಿದೆ. ಆಲ್ಕೋಡ್, ಕ್ಯಾದಿಗೇರಾ, ಭೂಮನಗುಂಡ ಸೇರಿ ಸಮಸ್ಯೆಯಿರುವ ಕಡೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಬೇಸಿಗೆಯಲ್ಲಿ ಬಾಡಿಗೆ ಬೋರ್‌ವೆಲ್‌ನಿಂದ ನೀರು ಪೂರೈಕೆ ಮಾಡಲಾಗುವುದು.
    ವೆಂಕಟೇಶ ಗಲಗ
    ಜಿಪಂ ಎಇಇ, ದೇವದುರ್ಗ

    ಅಧಿಕಾರಿಗಳ ಬೇಜವಾಬ್ದಾರಿಯಿಂದ 18ಹಳ್ಳಿಗಳ ಜನರು ನೀರಿಲ್ಲದೆ ಬಿಕ್ಕಳಿಸುವಂತಾಗಿದೆ. ಅಮರಾಪುರ ಹಾಗೂ ಮುಂಡರಗಿ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಅಧಿಕವಿದೆ. ಅಮರಾಪುರ ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ 12 ಕೋಟಿ ರೂ. ವ್ಯರ್ಥ ಮಾಡಲಾಗಿದೆ.
    ನರಸಣ್ಣ
    ಗ್ರಾಮಸ್ಥ, ನಿಲುವಂಜಿ

    ಬಹುತೇಕ ಹಳ್ಳಿಗಳಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸಲಾಗಿದ್ದು, ತಾಂತ್ರಿಕ ಕಾರಣದಿಂದ ಕೆಲ ಕಡೆ ಆರ್‌ಒ ಪ್ಲಾಂಟ್ ಕಾರ್ಯನಿರ್ವಹಿಸುತ್ತಿಲ್ಲ. ಶುದ್ಧ ಕುಡಿವ ನೀರಿನ ಘಟಕಗಳನ್ನು ಗ್ರಾಪಂ ಮೂಲಕ ಶೀಘ್ರ ದುರಸ್ತಿ ಮಾಡಿಸಲಾಗುವುದು. ಎಲ್ಲಿಯೂ ಟ್ಯಾಂಕರ್ ಮೂಲಕ ನೀರು ತಲುಪಿಸುವ ಪರಿಸ್ಥಿತಿಯಿಲ್ಲ.
    ಶ್ರೀನಿವಾಸ್ ಚಾಪೇಲ್
    ತಹಸೀಲ್ದಾರ್, ದೇವದುರ್ಗ

    ಪಟ್ಟಣದ ಎಲ್ಲ 23ವಾರ್ಡ್‌ಗಳಲ್ಲಿ ನಿತ್ಯವೂ ನೀರು ಪೂರೈಸಲಾಗುತ್ತಿದೆ. 88 ಕೋಟಿ ರೂ. ವೆಚ್ಚದ 2ನೇ ಹಂತದ ಯೋಜನೆಯಡಿ ಪುರಸಭೆ ವ್ಯಾಪ್ತಿಯ ಎಲ್ಲ ದೊಡ್ಡಿ, ತಾಂಡಾ ಹಾಗೂ ಹೊಸಬಡಾವಣೆಗೆ ನಲ್ಲಿ ಸಂಪರ್ಕ ಕಲ್ಪಿಸಿ ನೀರು ಪೂರೈಸಲಾಗುವುದು.
    ಸಾಬಣ್ಣ ಕಾಟೀಕರ್
    ಪುರಸಭೆ ಮುಖ್ಯಾಧಿಕಾರಿ, ದೇವದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts